ಔರಾದ್‌ ಸೀಮೆಯ ಕನ್ನಡ | ಹಂತಿ ಹೊಡಿಲಾಕ್‌ ನಮ್‌ ಎತ್ಗೊಳ್‌ ಖಾಲಿನೇ ಅವಾ!

Date:

Advertisements

ಆ ಸೀಮಿ ಹೊಲ್ದಾಗ್ ಒಂದೊಂದು ತೆನಿ ಗಟ್ಟ್ ಆಗ್ಯಾವ್ ನೋಡ್, ಇವತ್ತು ನಮ್ ನೌಕ್ರೀ ಮನ್ಸ್ಯಾ ಬೀ ಇಲ್ಲ . ಏನೋ ‘ಮನೀ ದ್ಯಾವ್ರಿಗಿ ಕಂದೂರಿ’ ಮಾಡ್ಲಾತಾರಾಂತ. ಅದ್ಕೆ ನಾನೇ ದನಾಗೊಳಿಗಿ ನಾಕ್ ಸೂಡು ಹುಲ್ಲು ಮಾಡ್ಕೊಂಡಿ ಹೊಂಟಿದಾ. ಹೋಗಿ ನೋಡ್ಲಾಕ್ ರಾ ನೋಡ್ʼ ಅಂದಾ. ಅದಕ್ಕೆ ರಾಮು ‘ಆಯ್ತು, ಗೌಡ್ರೇ ಹುಲ್ಲು ಜಡಾ ಆಗಿರಬೇಕ್, ಜಲ್ದಿ ಹೋಗ್ರೀ, ನಾ ಹೋಗಿ ನೋಡದ್ರಾ ನೋಡ್ತಾ ಅಂಬಾತನ್ಕಾ ಹೋರಿ ಹೋಗಿ ಫಕೀರ್‌ಸಾಬುರ್ ಕಡ್ಡಿ ಹೊಲ್ದಾಗ್ ಹೋಗಿ ಮೈಲಾತಿತ್.

ಏ…ರಾಮು ಈ ವರ್ಷ್ ನಮ್ ಹೊಲ್ದಾಗ್ ಜ್ವಾಳಾ ರಾಶಿ ಮಾಡ್ಲಾಕ್ ಹಂತಿ ಹಾಕಾರ್‌ ಅಲತಿದಾ ನಿಮ್ ಎತುಗೊಳ್ ಖಾಲಿ ಅವನಾ, ಏನ್‌ ಯಾರ್ದಾರಾ ಪಾಲ್ಕಾರ್‌ ಹೊಲ್ದಾಗ್‌ ನೇಗಿಲ್‌, ಕುಂಟಿ ಏನರಾ ಹೊಡೇದ್‌ ಅದಾ…

‘ಈ ವರ್ಷ್‌ ದೊಡ್ ಜ್ವಾಳಾ ಏನ್‌ ಭಾಳ್ ಹಾಕಿಲ್ಲ, ಅಯಿನೋರ್ ಸೀಮಿಗಿ ಎಡ್ಡ ಎಕ್ಕರ್‌ ಅದಾ, ಉಳ್ದ್‌ ಕಡೀ ಎಲ್ಲಾ ಕಡ್ಡಿ, ಖುಸ್ಬಿ ಹಾಕಿದೇವ್, ಅಲ್ಲೇ ಥೋಡೆ ನೆಂಕಿ, ನಾವ್ಣಿ‌, ಸಾಸಿ, ಚೆಣ್ಗಿ ಉತಾಡಿ ಅದಾ. ಆ ಕಡೀಮನಿ ಪ್ಯಾರುಸಾಬ್‌ ಮತ್ ಮಾಲಿ ಪಟೇಲುರ್‌ ಎತ್ಗೊಳ್ ಕುಡ್ತಾ ಅಂದಾರ್‌’ ಅಂತ ಹನುಮನದೇವ್ರು ಗುಡಿ ಹಿಂದ್‌ ಕಾಸ್ಕೊತಾ ಕುಂತಾಗ್‌ ಬಂದಿ ಕೇಳ್ದಾ ಬಸಪ್ಪ

Advertisements

ಗೌಡುರ್‌ ಮಾತ್‌ ಮೀರ್ಲಾಕ್‌ ಆಗಲ್ದ್‌ ಅಂತ ರಾಮು ʼಆಯ್ತು ತಕೋರಿ ಗೌಡ್ರೆ, ಸದ್ಯಕ್ ನಮ್ ಎತ್ಗೊಳ್ ಖಾಲಿನೇ ಅವಾ, ಒಯ್ರೀ ಮತಾ‌ʼ ಅಂದಾ

WhatsApp Image 2025 03 15 at 7.26.35 AM 1
ಕುರಿಗೆ

ಘೋಂಗ್ಡಿ ಹಚ್ಕೊಂಡಿ ಬಂದ್ ನಿಂತಿದಾ ಬಸಪ್ಪಾ ಉರಿ ಹಚ್ಚಿಂದ್‌ ನೋಡಿ ತಾಬೀ ಬೆಂಕಿ ಮುಂದ್‌ ಕುಂತಿ ʼಈವೊರ್ಷ್‌ ಭಾಳ್ ಚಳಿ ಅವಾ ನೋಡ್ರೀ, ನಡು ಮಧ್ಯಾಣ್ಯಾಳಿ‌ ಕಡಕ್ ಬಿಸುಲ್‌ ಇದ್ದೂರ್ಬೀ ಮೈದಾಗಿಂದ ಥಂಡಿ ಒಟ್ಟಾ ಹೋಗಾಲೋಗ್ಯಾದ್‌, ಸಂಕ್ರಾಂತ್ರಿ ಯಾಳಿ ಆಗೋ ಚಳಿ ಈಗೇ ಆಗ್ಲತಾವ್ʼ ಅನ್ಕೊತಾ ಕಾಲ್‌ ಮಡ್ಚಿ ಮಾತ್ ಶುರು ಮಾಡ್ದಾ.

“ಹಾ..ನೋಡ್ರೀ..ಈವೊರ್ಷ್‌ ಮಳಿ ಭಾಳ್ ಬಿದ್ದಿಂದ ಸಲೇಕೆ ಏನೋ, ಛಳಿ ತೋಲ್‌ ಆಗ್ಲಾತಾವ್‌, ಇಂಥದ್ರಾಗ್‌ ಮುಂಜಾನತ್‌ ಜಲ್ದಿ ಏಳ್ಬೇಕ್ ಅನ್ಸಲ್‌ ಹೋಗ್ಯಾದ್‌, ಹೊತ್ತ್ಮುಣಿಗಿಗ್ ಪಾಚ್ ಆಯ್ತು ಅಂದುರ್‌ ಸಾಕ್‌ ತಣ್ಣುಗ್ ಕಳಾಂಡಿ ಬಿಡ್ತಿಕಿ ಮೈದಾಗ್‌ ನಡುಗ್‌ ಹುಕ್ಲಾತುದ್‌, ಅದ್ಕೆ‌ ಹೊತ್ತ್ ಇರ್ಲಾಕ್ಕಾಗೇ ಹೊಲ್ದಿಂದ್‌ ಮನೀಗಿ ಹೊಂಟಿದಾ, ಹಿಂತಾ ಛಳ್ಯಾಗ್ ಬೆಳಗನಾ ಹೊಲ್ದಾಗ್ ಹಂತಿ ಹ್ಯಾಂಗ್‌ ಹೊಡಿಬೇಕ್‌ ಏನೋʼ ಅಂತ ಎದ್ದಾ ರಾಮು ಮನ್ಯಾಗ್ ಉಳ್ಳಾಕ್‌ ಕರೀಲಾತಾರ್‌ ಅನ್ಕೊತಾ ಮನೀಗಿ ಹಾದಿ ಹಿಡ್ದಾ.

‌ಸಾಳಿಗಿ ಹೋಗಂದುರ್‌ ವಲ್ಲಂತ್‌ ಢೊಂಗ್‌ ತೆಗ್ದಿ ಎತ್ಗೊಳ್‌ ಹಿಂದ್‌ ತಿರ್ಕೊತಾ ಹೋಗಿ ಸಾಳಿ ಕಲೇದೇ ಬಿಟ್ಟಾ ರಾಮು, ಹಿಂದಕ್ ಹಿರ್ಗೊಳ್‌ದಿಂದ‌ ಬಂದಿದ್ ಒಕ್ಕುಲತನ ಮುರಿಬಾರ್ದ್‌ ಅಂತ ಹಂಗೇ ಒಕ್ಕುಲತನ್‌ ಇಟ್ಟಿದಾ, ಇದ್ದಿಂದ್‌ ನಾಕ್ ಎಕ್ಕರ್ ಮನೀ ಹೊಲ‌ ಹೊಡ್ಕೊತಾ ಮಂದಿ ಹೊಲಾ ಥೋಡೆ ಲಾವ್ಣಿ ಮಾಡ್ತಿದಾ.

ಅವತ್ತು ಒಂದಿನಾ ರಾಮುನ ಮಗ್ನಿಗಿ ಸೀತನಿ ತಿಂಬಾ ಖ್ಯಾಸ್ ಆಗಿತ್ತ್. ʼಇವತ್ತು ಸಂಜಿಗಿ ಬರಾಪರಿ ಸೀತನಿ ಸುಡ್ಕೊಂಡಿ ತರೀ ಅಂತ ಅಪ್ಪುಗ್ ಹೇಳ್ದಾ. ‘ಈ ವರ್ಷ್ ನಮ್ ಹೊಲ್ದಾಗ್ ದೊಡ್ ಜ್ವಾಳಾ ಇಲ್ಲ ಮಗಾ, ಎಲ್ಲ ಹೆಬ್ರೇಟ್‌ ಜ್ವಾಳಾ ಇತ್ತು, ತೊಗರಿ ಅದಾ, ಆಯ್ತು ತಕೊ ಬಸಪ್ಪ ಗೌಡುರ್ ಹೊಲ್ದಾಗ ಅದಾ ಜ್ವಾಳಾ, ಖರೇ ಅವ್ಬಿ ತೆನಿ ಹಿನಾ ಎಳೂಕ್ ಅವಾ, ಬೀಜ ಛಂದ್ ತುಂಬಿಲ್ಲ, ಎಲ್ಲಾರಾ ಒಂದೊಂದು ಇದ್ದುವ್ ಅಂದುರ್ ನೋಡಿ ತರ್ತಾ ತಕೋʼ ಅಂತ ಹೇಳಿ ಹೆಗಲ್‌ ಮ್ಯಾಳ್‌ ನೇಗಿಲು, ಮಿಳಿ ಇಟ್ಕೊಂಡು ಎತ್ತು, ಹೋರಿ ಹೊಡ್ಕೊಂಡಿ ಹೊಲ್ಕಡಿ ನಡ್ದಾ…

WhatsApp Image 2025 03 14 at 9.19.16 PM
ಸೀತನಿ ಸುಡುವ ಥಾಳಿ

ಹೊಲುಕ್ ಹೊಗ್ಲಾತುರ್ ಹಣಾದ್ಯಾಗ್ ಬಸಪ್ಪ ಗೌಡುರ್ ತಲಿ ಮ್ಯಾಲ್ ಮೆವ್ವಿನ್ ಹೊರೀ ತಕೊಂಡಿ ಹೊಂಟಿದ್ ನೋಡಿ ಗೌಡ್ರಿಗ್ ಸೀತನಿ ಕೇಳಾರಿʼ ಅಂತ ಮನ್ಸಿನಾಗ ಅನ್ಕೊಂಡಿ ಕೇಳ್ದಾ….

‘ಆ ಸೀಮಿ ಹೊಲ್ದಾಗ್ ಒಂದೊಂದು ತೆನಿ ಗಟ್ಟ್ ಆಗ್ಯಾವ್ ನೋಡ್, ಇವತ್ತು ನಮ್ ನೌಕ್ರೀ ಮನ್ಸ್ಯಾ ಬೀ ಇಲ್ಲ . ಏನೋ ‘ಮನೀ ದ್ಯಾವ್ರಿಗಿ ಕಂದೂರಿ’ ಮಾಡ್ಲಾತಾರಾಂತ. ಅದ್ಕೆ ನಾನೇ ನಾಕ್ ಸೂಡು ಹುಲ್ಲು ಮಾಡ್ಕೊಂಡಿ ಹೊಂಟಿದಾ. ಹೋಗಿ ನೋಡ್ಲಾಕ್ ರಾ ನೋಡು’ ಅಂದಾ. ಅದಕ್ಕೆ ರಾಮು ‘ಆಯ್ತು, ಗೌಡ್ರೇ ಹುಲ್ಲು ಜಡಾ ಆಗಿರಬೇಕು, ಜಲ್ದಿ ಹೋಗ್ರೀ, ನಾ ಹೋಗಿ ನೋಡದ್ರಾ ನೋಡ್ತಾ ಅಂಬಾತನ್ಕಾ ಹೋರಿ ಹೋಗಿ‌ ಫಕೀರ್‌ಸಾಬುರ್ ಕಡ್ಡಿ ಹೊಲ್ದಾಗ್ ಹೋಗಿ ಮೈಲಾತಿತ್ತು.

ಎತ್ಗೊಳ್ ಒಯ್ದಿ ಪಡ್ಯಾಗ್ ಘಟಾಕ್ ಕಟ್ಟಿ, ಕಟ್ಟಿ‌ ಬೇನ್ ಗಿಡಕ್ ಹೋರಿ ಕಟ್ದಾ, ಅಲ್ಲೇ ಗೌಡುರ್ ಹೊಲ್ದಾಗಿಂದ ಥೋಡೆ ಕಿಳ್ಳು ಕಿತ್ತಿ ಹಾಕಿ, ಸೀತನಿ ತೆನಿ ಹುಡ್ಕೊತಾ ಹೋದಾ ಹೊಲ್ದಾಗ. ಜರ್ರಾ ಗಟ್ಟಾಗಿಂದ ಐದಾರ್ ತೆನಿ ಸಿಕ್ಕಿಂದ ತೆನಿ ಮುರ್ಕೊಂಡಿ ಗಿಡದ್ ಕೆಳಗ್ ಹಾಕಿಂದ್ ಮಂಚ್ಕಿ ಕಡೀ ಬಂದಾ ರಾಮು.

ಸೀತನಿ ಸುಡ್ಲಾಕ್ ಮಂಚ್ಕಿ ಎದುರ್ ಥಾಳಿ ಮಾಡ್ದಾ, ಕಿಳ್ಳು ತಿಲ್ಲಾಕ್ ಕಟ್ಟಿಂದ್ ಎತುಗೊಳ್ ಬಲ್ಲಿಂದ ಒಣಗಿಂದ ಕುಳ್ಳು ತಂದಿ ಥಾಳ್ಯಾಗ್ ಹಾಕಿ ಬೆಂಕಿ ಹಾಕ್ದಾ. ಬೆಂಕಿ ಆಗಾ ತನ್ಕಾ ಗೌಡುರ್ ಎತ್ತಿಗಿ ಕಳ್ಕಿ ಕಿತ್ತಾಕಿ, ಮಣ್ಣಿನ ಬಿಂದ್ಗಿ ತಕೊಂಡು ನೀರ್ ತರ್ಲಾಕ್ ಅಂತ ಹಳ್ಳಾದ ಕಡೀ ಹೋದಾ, ಹೋಗ್ಲಾತುರ್ ಮುತ್ತಿನ್ ಗಿಡ್ದ್ ಜ್ಯಾಳ್ಯಾಗ್ ಜೇನಿನ್ ನೊಣ ಕುಯ್…ಅಂತ ಎದ್ದಿಂದ್ ನೋಡಿ ಅರೇ..! ಇಲ್ಲಿ ಜೇನ್ ಕಾಣ್ಸತುದ್ ಅಲಾ ಅಂತ ಮೂಗಿನಾಗೇ ನಕ್ಕಾ…ನಾಳಿಗಿ ಬಂದಿ ಜೇನ್‌ ಹೊಡೆರ್‌ ಅಂತ ಹಳ್ಳದ್‌ ಕಡೀ ಹೋದಾ.

ಥಾಳಿ ಥುಂಬಾ ಕಡಕ್ ಬೆಂಕಿ ಆಗಿತ್, ಹಸಿ ಸೀತನಿ ತೆನಿ ಥಾಳಿದಾಗ ತುರ್ಕಿ ಅದರ್ ಮ್ಯಾಲ್ ಬೆಂಕಿ ಹಾಕಿ ಮುಚ್ಚಿ ಸುಟ್ಟವಾ ಇಲ್ಲ ಅಂತ ನೋಡ್ಕೊತಾ ಥಾಳಿ ಮುಂದೇ ಕುಂತಿ, ತೆನಿ ಒರ್ಸಾಲಾಕ್ ಎಡ್ಡು ದೊಡ್ಡು ಕಲ್ಲು ತಕೊಂಡಾ ಕುಂತಾ, ಸುಟ್ಟಿಂದ ಒಂದೊಂದು ತೆನಿ ಕಲ್ಲಿನ ಮ್ಯಾಲ್ ಇಟ್ಟಿ ಮ್ಯಾಲ್‌ ಮತ್ತೊಂದ್‌ ಗುಂಡುಕ್ ಕಲ್ಲಿನಿಂದ ಜೋರ್ದಿಂದ್ ಒರ್ಸಿನಾಗ, ನೆಲದ ಮ್ಯಾಲ್ ಹಾಸಿಂದ ಕುಂಚಿ ಮ್ಯಾಲ್ ಗುನಿ ಇದ್ದಿಂದ್ ಸೀತನಿ ಉದ್ರಿ ಬಿದ್ದುವ್,‌ ಥಾಳ್ಯಾಗಿಂದ್ ಸುಟ್ಟಿಂದ್‌ ತೆನಿ ಒಂದೊಂದು ತೆಗ್ದಿ ವರ್ಸದ್‌ ಆಗಿನ್‌ ಮ್ಯಾಲ್ ಥಾಳಿ ಆರ್ಸಿದಾ. ಗುನಿ ಇದ್ದಿಂದ್ ಸೀತನಿ‌ ಎಲ್ಲಾ ಘೊಂಗಡ್ಯಾಗ್‌ ಗಂಟ್‌ ಹಾಕಿ ಕಟ್ಕೊಂಡಿ ಮನೀಕಡಿ ಬಂದುನ್ ರಾಮು.

ಮನ್ಯಾಗ್ ಹೆಂಡ್ತಿ ಮರಾದಾಗ್ ಹಾಕಿ ಕೇರಿ ಗುನಿ ಎಲ್ಲ ತೆಗ್ದಿ ಮ್ಯಾಲ್ ʼಆಹಾ….ಬಾಳ್ ರುಚಿ ಅವಾ ನೋಡ್ರೀʼ ಅನ್ಕೊತಾ ಕುಂತಿ ತಿಲ್ಲಾತ್ತಿದ್ದುರ್, ಅಷ್ಟರಾಗೇ ಮಗ ಬಂದುನ್, ‌ʼಇದ್ರಾಗ್ ಥೋಡೆ ಬೆಲ್ಲಾ, ಸಕ್ರೀ ಹಾಕ್ ಯವ್ವಾ‌ʼ ಅಂತ ಹಾಕೊಂಡು ಅವ್ನೂ ಸೀತನಿ ಕೈದಾಗ್‌ ತಕೊಂಡಿ ʼಭಾಳ್‌ ರುಚಿ ಅವಾ ನೋಡ್‌ ಯಪ್ಪಾʼ ಅಂತ ತಿನ್ಕೊತಾ ಕುಂತಾ.

ಗೌಡುರ್ ಹೊಲ್ದಾಗಿಂದ ಜ್ವಾಳಾ ರಾಶಿ ಮಾಡ್ಲಾಕ್ ಗುತ್ತಿ ಹಿಡ್ದಿನ್ ಕೂಲಿ ಮಂದಿ ಜ್ವಾಳಾ ಕಿತ್ತಿ, ಸೂಡು ಕಟ್ಟಿ ಖಳಾದಾಗ ತಂದಿ ಹಾಕಿದುರ್, ಗೂಡ್ ಮುರೇ ಧಂದ್ಯಾ ಭಾಳ್ ಜೋರ್ದಿಂದ್ ನಡ್ದಿತ್. ಸೋಮಾರ್ ರಾತ್ರಿ ಹಂತಿ ಕಟ್ಟಾರಿ ಅಂತ ನಾಕ್ ಜೋಡಿ ಎತ್ತು, ಮನ್ಸ್ಯಾರಿಗ್ ಹೇಳಿದ ಗೌಡುರ್, ರಾಮು ಮನೀಗಿ ಹೋಗಿ ಮತ್ ಹೇಳ್ದಾ, ‘ಹೊಲ್ದಾಗ್‌ ಇವತ್‌ ರಾತ್ರಿ ಹಂತಿ ಕಟ್ತೇವ್, ಸಂಜಿಕಿ ರೊಟ್ಟಿ, ಉಳಾಗಡ್ಡಿ ಖಾರಾ, ಮೊಸುರ್‌ ಗಿಸುರ್‌ ಏನಾರಾ ಇದ್ದುರ್ ಕಟ್ಕೊಂಡು ಅತ್ತೇ ಬಾ, ಅಲ್ಲೇ ಏನಾರಾ ಪಲ್ಲೇ ಮಾಡರೀ, ಹಂಗೇ ಹಚ್ಕೊಲಾಕ್ ಘೊಂಗ್ಡಿ ಬೀ ತಾ, ರಾಶಿ ಆಗಾತನ್ಕಾ ಹ್ಯಾಂಗ್‌ ಬಿ ಎಡ್ ದಿನಾ ಹೊಲ್ದಾಗೇ ಇರ್ಬೇಕ್‌ ಆಯ್ತುದ್’ ಅಂತ ಬಸಪ್ಪ ಗೌಡುರ್ ಹೇಳ್ಕೊತಾ ರಾಶಿ ತುಂಬ್ಲಾಕ್ ಫುಂಡಿ ಚೀಲಾ ತರ್ತಾ ಅನ್ಕೊತಾʼ ಕ್ವಾಟಿಗಿ ಕಡಿ ಹೋದುರ್ ‌.

ಸ್ವೋಮಾರ್ ದಿನ ಸಂಜಿಪರಿ ಗೌಡುರ್ ಹೊಲ್ದಾಗ್ ಖಳಾದಾಗ್ ಗೂಡ್‌ ಮುರ್ದಿಂದ್ ದೊಡ್ ಜ್ವಾಳಾ ತೆನಿ. ಹಂತಿ ಹೊಡ್ಯಾಪರಿ ಎತ್ತಿನ್‌ ಕೊಳ್ಳಿಗಿ ಹಗ್ಗಾ ಕಟ್ಲಾಕ್‌ ಖಳದಾಗ್ ನಡಬರ್ಕ್ ಮೇಟಿ ಹುಳ್ದೂರ್, ಗೌಡರು ಎಡ್ಡ್ ಜೋಡ್ ಎತ್ತು, ಪ್ಯಾರುಸಾಬ್, ರಾಮು ಎಡ್ಡ ಜೋಡ್ ಎತ್ತು, ನಾಕ್ ಮಂದಿ ಮನಸ್ಯಾರ್ ಎಲ್ಲಾ ಖಳದ್‌ ಬಲ್ಲಿ. ಟೆಂಗು, ಅಗರಬತ್ತಿ, ಕುಕಮ್ ತಕೊಂಡಿ ಹೊಲ್ಕಡಿ ಧಾವ್ಸಿಕೊತಾ ಬಂದಾ ಗೌಡುರ್ ಖಳದ್ ಮೇಟಿಗಿ ಪೂಜಾ ಮಾಡಿ ಟೆಂಗ್‌ ಒಡ್ದಿ ಎಲ್ಲಾರಿಗಿ ಪ್ರಸಾದ್‌ ಕೊಟ್ಟಿ, ʼಈಗ ಚಾಲು ಮಾಡ್ರೀ ಮತಾ‌ʼ ಅಂತ ಹೇಳ್ದೂರ್.

WhatsApp Image 2025 03 15 at 7.26.07 AM
ಎತ್ತಿನ ಬಂಡಿ

ನಾಕ್‌ ಜೋಡ್ ಎತ್ತು ಹಂತಿಗಿ‌ ಹೊಡಿಲಾಕ್ ಕಟ್ದೂರ್, ಇಬ್ಬರ್‌ ಮನ್ಸ್ಯಾರ್‌ ಎತ್ತಿನ್‌ ಹಿಂದ್‌ ಚಪ್ಕಾ ತಕೊಂಡಿ ಚಲೋ….ರಾಜಾ…ದಿಯಾ…ಹಾ…ನಡೀ….ಅಂಬಾದ್‌ ಜೋರ್‌ ಮಾತಿನಾಗ್.. ಚಪ್ಕಾ ಅವಾಜ್‌ ಹೊಂಟಿತ್.‌

‌ಮಂಚ್ಕಿ ಬಲ್ಲಿ ಕುಂತಿನ್‌ ರಾಮು, ಪ್ಯಾರುಸಾಬ್‌ ಇಬ್ಬರೂ ಹಂತಿ ಪದ ಶುರು ಮಾಡಿದುರ್…

ಹಿರಿಕರನ ಎತ್ತು ಹಿಂಡಿ ಬ್ಯಾಳಿ ತಿಂದು ಗುಂಡಕ್ಕ ನೀರು ಮುಗದಾವ್
ಆಕಾಶಕ್ಕೆ ಡರ್ಕಿ ಹೊಡದಾವ್ , ಬಾಲನೇ ಬೀಸಿತು, ಕಾಲನೇ ಕೆದರುತ್ ಹೊಂಟಾನೋ ಬಸವ ಬಣಮಿಗೋ..!

ಗೂಡ್‌ ಹ್ಯಾಂಗ್ ಮುರಿಬೇಕೋ, ಒಂದೊಂದು ತೆನಿ ಹಿಡಿದು ಮುರಿಬೇಕೋ‌, ಕೂಲಿ ಹ್ಯಾಂಗ್‌ ಕುಡ್ಬೇಕೋ ಒಂದೊಂದು ತೆನಿ ಹಿಡ್ದು ಕುಡ್ಬೇಕೋ, ಯಾಕೋ ಬಸವಾ ಮೆಲ್ಲಗ ನಡ್ದಿ, ಮುಂಗಾಲಿನ ಮದನಾ ಮೊಳಕಾಲಿಗಿ ಬಂತೋ ಒಲಗೋ ಒಲಗ್ಯಾ,…ಚೆಲಂ ಪಲಗ್ಯಾ

ಬೆಳ್ಳನ ಎರಡೆತ್ತು ಬೆಳ್ಳಿಯ ಬಾರಕೋಲು, ಬಂಗಾರದ ಕಡ್ಡಿ ಬಲಗೈಯಾಗ ಹಿಡಕೊಂಡು
ಹೊನ್ನ ಬಿತ್ತೆನೇ ಹೊಳಿ ಸಾಲ…. 

ಈ ನುಡಿಗಟ್ಟು ಓದಿದ್ದೀರಾ? ಔರಾದ್ ಸೀಮೆಯ ಕನ್ನಡ | ನಾಕ್ ವರ್ಷ ನಡ್ಕೊತಾ ಶಾಳಿಗಿ ಹೋದುರ್ಬಿ ಆಠಾಣೆ ರೊಕ್ಕ ಸಿಕ್ಕಿಲ್ಲ!

ಮರ್ದಿನಾ‌ ಮುಂಜಾನತ್‌ ಗೌಡುರ್‌ ನೌಕ್ರಿ ಮನ್ಸ್ಯಾ ಎತ್ತಿನ್ ಬಂಡಿ ಹೊಡ್ಕೊಂಡಿ ಹೊಲ್ಕಡಿ ಬಂದಾ, ಅದ್ರಾಗೇ ಕೂಲ್ಕಾರ್ ಮಂದಿ ಕುಂತಿ ಹೊಲುಕ್ ಬಂದುರ್.‌ ಖಳದಾಗಿಂದ ಜ್ವಾಳಾದ್ ಕಂಕಿ ಎಲ್ಲಾ ತೆಗ್ದಿ ಹೊರಗ್‌ ಹಾಕ್ದುರ್.‌ ಒಬ್ರು ಮೆಟ್‌ನಲ್ಗಿ ಮ್ಯಾಲ್‌ ನಿಂತುರ್‌, ಕೆಳಗಿದ್ದೋರ್‌ ಬುಟ್ಟಿ ಥುಂಬಿ ಕೊಟ್ಟುರ್.‌ ಕೆಳಾಕಡಿಂದ್ ಘಾಳಿ ಜೋರ್‌ ಬಿಟ್ಟಿತ್‌, ತೂರಾ ದಂಧ್ಯಾ ಜೋರ್ದಿಂದ್‌ ನಡ್ದಿತ್ತು, ಖಳದಾಗ್ ಖಂಡುಗ್‌ ಜ್ವಾಳಾ ರಾಶಿ ಮದನಾ ನೋಡಿ ಗೌಡುರ್‌ ಮಾರಿ ಮ್ಯಾಲ್‌ ಖಳೀ ಬಂತ್.‌ ಈ ವರ್ಷ್‌ ಮೈನತಿ ಫಾಲ್ತು ಹೋಗಲ್‌ ಹೊಯ್ತ್‌ ಅಂತ ಮನ್ಸಿನ್ಯಾಗ್‌ ಅನ್ಕೊತಾ ಅಡ್ಡಿ ತಕೊಂಡಿ ಅಳಿಲಾಕ್‌ ಕುಂತೂರ್.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

1 COMMENT

  1. ಬಹಳ ದಿನಗಳ ನಂತರ ನಮ್ಮ ಜಿಲ್ಲೆಯ ದೇಶಿ ಭಾಷೆಯ ತಮ್ಮ ಈ ಬರಹ ಓದಿ ತುಂಬ ಖುಷಿಯಾಯಿತು.

    ಈ ಸಲ ಬರಲಾಕ್ ಜರ ತಡ್ ಅಗ್ಯಾದ್, ಮುಂದಿನ ಸಲ ಜರ ಜಲ್ದಿ ಬರ್ಲಿ.

    ಈ ನಿಮ್ಮ ಔರಾದ್ ಸೀಮೆ ಕನ್ನಡ ಬರಹಗಳಿಂದ ನಾನ್ನಂತು ನಿಮ್ಮ ಅಭಿಮಾನಿ ಆಗಿ ಬಿಟ್ಟೆ.

    ಬರಹ ತುಂಬ ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು ಅಣ್ಣ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

ಮಂಡ್ಯ | ಹಿಂದುಳಿದ ಸಮುದಾಯದವರ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಡಾ.ಕುಮಾರ

ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ಜನರಿಗೆ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್...

ಚಿಂತಾಮಣಿ | ವಿಶೇಷಚೇತನರಿಗೆ ಶೇ.5ರಷ್ಟೂ ಮೀಸಲಾಗದ ಅನುದಾನ; ಎಲ್ಲಿಯೂ ಕಾಣದ ರ್‍ಯಾಂಪ್‌ ವ್ಯವಸ್ಥೆ

ವಿಶೇಷಚೇತನರಿಗೆ ಅನುಕಂಪ ಬೇಡ. ಅವರಿಗೆ ಅವಕಾಶಗಳನ್ನು ರೂಪಿಸಿ ಎನ್ನುವುದು ಕೇವಲ ಬಾಯಿ...

Download Eedina App Android / iOS

X