“ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತು ಬೇರಾವ ನಾಯಕರಿಂದಲೂ ಈ ವರದಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ. ಹೀಗಾಗಿ ಸಿದ್ದರಾಮಯ್ಯನವರೇ ಕಾಂತರಾಜು ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆಯಬೇಕು” ಎಂದು ಕಾಂಗ್ರೆಸ್‌ನ ಮಾಜಿ ಶಾಸಕರಾದ ರಾಜು ಆಲಗೂರು ಹೇಳಿದರು.
ವಿಜಯಪುರ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆದ ವಿಜಯಪುರ ಜಿಲ್ಲಾ ಶೋಷಿತ ವರ್ಗಗಳ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಕಾಂತರಾಜು ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ, ಅಡೆತಡೆ ಒಡ್ಡುತ್ತಿರುವ ವಿವಿಧ ಪಕ್ಷಗಳ ವೀರಶೈವ ಲಿಂಗಾಯತ ಹಾಗೂ ಒಕಲಿಗ ಸಮುದಾಯದ ಶಾಸಕರು ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ರಾಜಕೀಯ ಸೇರಿದಂತೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕಾಂತರಾಜು ವರದಿ ಜಾರಿಯಾಗಲೇಬೇಕು. ಒಂದು ವೇಳೆ ಜಾರಿಯಾಗದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ದೇವಾನಂದ ಚೌವನ ಮಾತನಾಡಿ, ಕಾಂತರಾಜು ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ, ಅಡೆತಡೆ ಒಡ್ಡುತ್ತಿರುವ ವಿವಿಧ ಪಕ್ಷಗಳ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಶಾಸಕರು, ಸಚಿವರ ನಡೆ ಖಂಡನೀಯ. ಈ ವಿಷಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ತಟಸ್ಥವಾಗಿರಬೇಕು. ಇಲ್ಲವೇ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಶರಣಪ್ಪ ಸುಣಗಾರ ಮಾತನಾಡಿ, ಶೀಘ್ರದಲ್ಲೇ ಮುಖ್ಯಮಂತ್ರಿ ಬಳಿಗೆ ಸರ್ವ ಪಕ್ಷಗಳ ಮುಖಂಡರನ್ನು ಒಳಗೊಂಡ ನಿಯೋಗವನ್ನು ಕೊಂಡೊಯ್ಯಲಾಗುವುದು. ಜೊತೆಗೆ ವರದಿಗೆ ವಿರೋಧ ವ್ಯಕ್ತಪಡಿಸುವವರ ಮನವೊಲಿಕೆಗೂ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಎಸ್.ಎಂ.ಪಾಟಿಲ (ಗಣಿಹಾರ) ಮಾತನಾಡಿ, “ಶೈಕ್ಷಣಿಕ, ರಾಜಕೀಯ ಸೇರಿದಂತೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕಾಂತರಾಜು ವರದಿ ಜಾರಿಯಾಗಲೇಬೇಕು. ಒಂದು ವೇಳೆ ಜಾರಿಯಾಗದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು” ಎಂದರು.
ರಾಜ್ಯ ಸರ್ಕಾರವು ₹185 ಕೋಟಿ ಖರ್ಚು ಮಾಡಿ ವೈಜ್ಞಾನಿಕವಾಗಿ ತಯಾರಿಸಿರುವ ಕಾಂತರಾಜು ವರದಿ ಪರವಾಗಿ ರಾಜ್ಯದ ಶೇ. 70ರಷ್ಟು ಜನ ಇದ್ದಾರೆ. ಕೇವಲ ಶೇ 30ರಷ್ಟು ಇರುವ ಜನರಿಂದ ವಿರೋಧ ವ್ಯಕ್ತವಾಗುತ್ತಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರೇ ಜಾತಿ ಜನಗಣತಿ ಪರವಾಗಿದ್ದಾರೆ. ಜಾತಿ ಜನ ಗಣತಿಗೆ ವಿರೋಧ ವ್ಯಕ್ತಪಡಿಸುವವರು ರಾಹುಲ್ ಗಾಂಧಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದಂತೆ. ಅಹಿಂದ ಮತಗಳಿಂದಲೇ ಚುನಾಯಿತರಾಗಿ ಸಚಿವ, ಶಾಸಕರಾದವರು ವಿರೋಧ ವ್ಯಕ್ತಪಡಿಸುತ್ತಿವುದು ಖಂಡನೀಯ ಎಂದರು.
ಇದನ್ನು ಓದಿದ್ದೀರಾ? ವಿಜಯಪುರ | ವಕ್ಫ್ ಆಸ್ತಿಯ ಬಗ್ಗೆ ರೈತರಲ್ಲಿ ತಪ್ಪು ವದಂತಿ; ಆತಂಕಪಡುವ ಅವಶ್ಯಕತೆ ಇಲ್ಲ; ಜಿಲ್ಲಾಧಿಕಾರಿ ಸ್ಪಷ್ಟನೆ
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಬಿ.ಡಿ. ಪಾಟೀಲ, ಸೋಮನಾಥ ಕಳ್ಳಿಮನಿ, ಮಹ್ಮದ್ ರಫೀಕ ಟಪಾಲ್, ಜಕ್ಕಪ್ಪ ಯಡವೆ, ಬಿ.ಎಸ್. ಗಸ್ತಿ, ಮಾರುತಿ ಬಂಡಿ, ಶ್ರೀಶೈಲ ತಡಲಗಟ್ಟಿ, ಅಭಿಷೇಕ ಚಕ್ರವರ್ತಿ, ಎಂ.ಸಿ. ಮುಲ್ಲಾ, ಪ್ರಕಾಶ ಸೊನ್ನದ, ಎಂ.ಜಿ. ಯಂಕಂಚಿ, ಸಂಜು ಕಂಬಾಗಿ, ಅಶೋಕ ಛಲವಾದಿ ,ಅಡಿವೆಪ್ಪ ಸಾಲಗಲ್, ಮಲ್ಲು ಬಿದರಿ, ರಾಜಶೇಖರ ಯಡಹಳ್ಳಿ, ಎಂ.ಆರ್. ತಾಂಬೋಳಿ, ಗಣೇಶ ಕಬಾಡೆ, ಪ್ರಕಾಶ ನಾವಿ, ಫಯಾಜ ಕಲಾದಗಿ, ವಸಂತ ಹೊನಮೊಡೆ, ದಾನಪ್ಪ ಕಟ್ಟಿಮನಿ, ಶಿವಪುತ್ರಪ್ಪ ತಳಬಂಡಾರಿ, ಬೀರಪ್ಪ ಸಾಸನೂರ, ಕೃಷ್ಣ ಕಾಮಟೆ, ಸಾಹೇಬಗೌಡ ಬಿರಾದಾರ, ದಾದಾಪೀರ ಬಡಕಲ್, ಪರಶುರಾಮ ಹೊಸಮನಿ, ಮಹಾದೇವ ರಾವಜಿ, ದಯಾನಂದ ಲಚ್ಯಾಣ ಸಭೆಯಲ್ಲಿ ಇದ್ದರು.
