ಕರಾಟೆ ಕ್ರೀಡೆಯಲ್ಲಿ ಕೋಲಾರ ಜಿಲ್ಲೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದವರು ಕೀರ್ತಿ ಕೆ ರುಮಾನ ಕೌಸರ್ ಬೇಗಂ ಅವರು. ಲ್ಯಾಬ್ ಟೆಕ್ನಿಷಿಯನ್ ಅಧ್ಯಯನ ಮಾಡಿರುವ ಅವರು ಕರಾಟೆ ಶಿಕ್ಷಕಿಯಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ಅವರ ಗರಡಿಯಲ್ಲಿ ತರಬೇತಿ ಪಡೆದಿರುವ ತಂಡಗಳು ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಕರಾಟೆ ಪಂದ್ಯದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದುಕೊಂಡಿವೆ.
ಕೀರ್ತಿ ರುಮಾನ ಅವರು ವಿವಿಧ ಕ್ರಿಡಾಕೂಟಗಳಲ್ಲಿ ಭಾಗವಹಿಸಿ 35 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಜೊತೆಗೆ, 20 ಬೆಳ್ಳಿ ಪದಕಗಳು ಹಾಗೂ 15 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಚಿನ್ನದ ಪದಕವನ್ನೂ ಸಹ ಗಳಿಸಿದ್ದಾರೆ.
ಪ್ರಮುಖವಾಗಿ, ಮಲೇಶಿಯಾದಲ್ಲಿ ನಡೆದ 16ನೇ ಓಕಿನವಾ ಗುಯೋ ರಿಯಾ ಕರಾಟೆ ಓಪನ್ ಇಂಟರ್ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಕೋಚ್ ಆಗಿ ಚಿನ್ನ ಗೆದ್ದಿದ್ದಾರೆ. ಅಲ್ಲದೆ, ಅದೇ ಚಾಂಪಿಯನ್‌ಶಿಪ್‌ನಲ್ಲಿ ಜಡ್ಜ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕೀರ್ತಿ ಅವರು ಕೋಲಾರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್, ಏಕಲವ್ಯ ವಸತಿ ಶಾಲೆಗಳ 3,000ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡುತ್ತಿದ್ದಾರೆ. ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯಲ್ಲಿ ಕೋಲಾರ ಕ್ಷೇತ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೊಂದ ಮಹಿಳೆಯರಿಗೆ ಸಾಂತ್ವನ ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
“ಕರಾಟೆ ಎಂಬುದು ಆತ್ಮ ರಕ್ಷಣೆಗಾಗಿ ಬೆಳೆದು ಬಂದ ಒಂದು ಚಾಕಚಕ್ಯತೆ. ಅದು ಈಗ ಕ್ರೀಡೆಯಾಗಿ ಮಾರ್ಪಟ್ಟಿದೆ. ಹೆಣ್ಣುಮಕ್ಕಳು ತಮ್ಮ ಆತ್ಮರಕ್ಷಣೆಗೆ ಈ ಕಲೆಯನ್ನು ಕಲಿಯುವುದು ಸಾಮಾಜಿಕ ದೃಷ್ಟಿಯಿಂದ ತುಂಬಾ ಮಹತ್ವ ಪಡೆಯುತ್ತದೆ” ಎಂದು ಕೀರ್ತಿ ರುಮಾನ ಅಭಿಪ್ರಯಪಟ್ಟಿದ್ದಾರೆ.
“ಮುಸ್ಲಿಂ ಜನಾಂಗದಲ್ಲಿ ಹೆಣ್ಣು ಮಕ್ಕಳಿಗೆ ಅಷ್ಟೊಂದು ಸ್ವಾತಂತ್ರ್ಯವಿಲ್ಲದಿದ್ದರೂ ತಾಯಿ ಕೊಟ್ಟ ಮಾರ್ಗದರ್ಶನ ಮತ್ತು ಪತಿಯ ಕುಟುಂಬಸ್ಥರ ಸಹಕಾರದಿಂದ ನಾನು ಸಾಧನೆ ಮಾಡಲು ಸಾಧ್ಯವಾಯಿತು” ಎಂದು ಅವರು ಹೇಳಿದ್ದಾರೆ.