ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಆನೆಕೆರೆ ಮಸೀದಿ ಬಳಿ ನಿನ್ನೆ ರಾತ್ರಿ ಅಪರಿಚಿತ ಘನ ವಾಹನವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಕಳದ ಹಿರಿಯಂಗಡಿ ನಿವಾಸಿ ಕೂಲಿ ಕಾರ್ಮಿಕ ಹರೀಶ್ ಪೂಜಾರಿ (63) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಹರೀಶ್ ಪೂಜಾರಿ ತಮ್ಮ ದೈನಂದಿನ ಕೆಲಸ ಮುಗಿಸಿ ಮನೆಯ ಕಡೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಅಪರಿಚಿತ ಘನ ವಾಹನವು ಹಿಂದಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದೆ. ಹರೀಶ್ ಪೂಜಾರಿ ಅವರ ದೇಹದ ಮೇಲೆಯೇ ವಾಹನದ ಚಕ್ರ ಚಲಿಸಿದ ಪರಿಣಾಮ ದೇಹವು ಸಂಪೂರ್ಣ ಛಿದ್ರವಾಗಿದೆ.
ಕಾರ್ಕಳ ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಕ್ಕಿ ಹೊಡೆದು ಪರಾರಿಯಾದ ವಾಹನದ ಶೋಧ ಕಾರ್ಯ ನಡೆಯುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
