ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿರುವ ಕಂಚಿನಡ್ಕ ಎಂಬಲ್ಲಿ ಟೋಲ್ ನಿರ್ಮಿಸಲು ಸರ್ಕಾರ ಮುಂದಾಗಿದ್ದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಇದರ ವಿರುದ್ಧ ಜನಾಂದೋಲನ ರೂಪಿಸಲು ಆಗಸ್ಟ್ 24ರ ಶನಿವಾರ ಪಡುಬಿದ್ರೆ ಸಮೀಪ ಕಂಚಿನಡ್ಕದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಟೋಲ್ ಗೇಟ್ ಹೋರಾಟ ಸಮಿತಿಯ ಸುಹಾಸ್ ಹೆಗ್ಡೆ ನಂದಳಿಕೆ ಹೇಳಿದರು.
ಅವರು ಇಂದು ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, “ಪಡುಬಿದ್ರೆ-ಕಾರ್ಕಳ ಹಳ್ಳಿ ಪ್ರದೇಶವಾಗಿದ್ದು ಹೆದ್ದಾರಿ ಆದ ಬಳಿಕ ಸ್ವಲ್ಪ ಮಟ್ಟಿನ ಬೆಳವಣಿಗೆ ಕಾಣುತ್ತಿದೆ. ಸುಮಾರು 40ಕ್ಕೂ ಹೆಚ್ಚಿನ ಹಳ್ಳಿಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು, ಸುಂಕ ವಸೂಲಾತಿ ಕೇಂದ್ರ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಿಂದ 4 ಕಿಲೋ ಮೀಟರ್ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ ಹೆಜಮಾಡಿ ಟೋಲ್ ಗೇಟ್ ಕಾರ್ಯನಿರ್ವಹಿಸುತ್ತಿದೆ. ಈ ರಾಜ್ಯ ಹೆದ್ದಾರಿಯಲ್ಲಿ ದಿನನಿತ್ಯ ಹಳ್ಳಿಯ ಜನರು ತಮ್ಮ ದಿನ ನಿತ್ಯದ ಕೆಲಸಗಳಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದು, ಸುಂಕದ ಹೊರೆ ಜನಸಾಮಾನ್ಯರ ಮೇಲೆ ಅತೀ ಗಂಭೀರ ಪರಿಣಾಮ ಬೀರುತ್ತದೆ. ಅದಕ್ಕಾಗಿ ಕಾರ್ಕಳ-ಪಡುಬಿದ್ರೆ ಹೆದ್ದಾರಿ ಅವಲಂಬಿಸಿರುವ ಸುಮಾರು 40ಕ್ಕೂ ಹೆಚ್ಚಿನ ಹಳ್ಳಿಯ ಎಲ್ಲಾ ಜನ ಸಾಮಾನ್ಯರು ಪಕ್ಷಾತೀತವಾಗಿ ಹೋರಾಡಲು ತಯಾರಿ ನಡೆಸಿದ್ದೇವೆ” ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, “ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಎಲ್ಲ ಧರ್ಮದ ಧಾರ್ಮಿಕ ಮುಖಂಡರು, ಎಲ್ಲ ಜಾತಿ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು, ಸಮಾಜ ಸೇವಾ ಸಂಸ್ಥೆಗಳು, ಉದ್ಯಮಿಗಳು, ಕೈಗಾರಿಕೆಗಳು, ವರ್ತಕರು, ಎಲ್ಲ ಸಂಘ-ಸಂಸ್ಥೆಗಳು, ಬಸ್ಸು ಚಾಲಕ-ಮಾಲೀಕರು, ರಿಕ್ಷಾ ಚಾಲಕ-ಮಾಲೀಕರು, ಟ್ಯಾಕ್ಸಿ ಅಸೋಸಿಯೇಶನ್, ಕ್ರಷರ್ ಉದ್ಯಮಿಗಳು, ಕಲ್ಲು ಗಣಿಗಾರಿಕೆಯ ಉದ್ಯಮಿಗಳು, ಕೃಷಿಕರು ಎಲ್ಲರೂ ಬೆಂಬಲ ಸೂಚಿಸಿದ್ದಾರೆ. ಅದರಂತೆ ಎಲ್ಲ ಸಿದ್ಧತೆ ಮಾಡಿದ್ದು, ಆಗಸ್ಟ್ 24ರಂದು ಪಡುಬಿದ್ರೆ ಸಮೀಪ ಕಂಚಿನಡ್ಕ ಎಂಬಲ್ಲಿ ಬೆಳಗ್ಗೆ 9.30ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸುಮಾರು 10 ಸಾವಿರಕ್ಕಿಂತಲೂ ಹೆಚ್ಚಿನ ಜನರು ಬರುವ ನಿರೀಕ್ಷೆಯಿದ್ದು, ಬಹಳ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸನ್ನದ್ಧರಾಗಿದ್ದೇವೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಹಾವೇರಿ | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶ ಆಯ್ಕೆ ಪಟ್ಟಿ ಬಿಡುಗಡೆಗೆ ಎಸ್ಎಫ್ಐ ಆಗ್ರಹ
ನಮ್ಮ ಶಾಂತಿಯುತ ಹೋರಾಟದಿಂದ ಪಡುಬಿದ್ರಿ-ಕಾರ್ಕಳ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಕೇಂದ್ರದ ಪ್ರಸ್ತಾವನೆಯಿಂದ ಸರಕಾರ ಕೂಡಲೇ ಹಿಂದೆ ಸರಿಯಬೇಕು. ಈ ರಸ್ತೆಯಲ್ಲಿ ಜನ ಸಾಮಾನ್ಯರಿಗೆ ಹೊರೆಯಾಗುವ ಟೋಲ್ ಗೇಟ್ ಪ್ರಸ್ತಾವನೆ ಶಾಶ್ವತವಾಗಿ ರದ್ದಾಗಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೋರಾಟಗಾರರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಲಕ್ಷಣ್ ಎಲ್ ಶೆಟ್ಟಿ, ಶಶಿಧರ್ ಶೆಟ್ಟಿ, ದಿನೇಶ್ ಕೊಟ್ಯನ, ಜಯ ಎಸ್ ಶೆಟ್ಟಿ, ಸರ್ವಜ್ಞ ತಂತ್ರಿ ಬೆಳ್ಮಣ್ ಉಪಸ್ಥಿತರಿದ್ದರು.