ಡಿಸೆಂಬರ್ 9ರಂದು ದೇಶದಾದ್ಯಂತ ರಾಷ್ಟೀಯ ಲೋಕ್ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶರ್ಮಿಳಾ ಸಿ.ಎಸ್ ಹೇಳಿದರು.
ಈ ಕುರಿತು ಕಾರ್ಕಳ ನ್ಯಾಯಾಲಯದ ಸಂಕೀರ್ಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಹಳೆಯ ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ. ಲೋಕ ಅದಾಲತ್ ಮೂಲಕ ಸಾರ್ವಜನಿಕರಿಗೆ ಹಾಗೂ ಅರ್ಜಿದಾರರ ಸಮಸ್ಯೆಗಳಿಗೆ ತ್ವರಿತ ಹಾಗೂ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದರು.
ಬ್ಯಾಂಕ್ ವಸೂಲಾತಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಕಾರ್ಮಿಕ ವಿವಾದಗಳು, ಭೂಸ್ವಾಧೀನ ಪ್ರಕರಣಗಳು, ಕೌಟುಂಬಿಕ ವ್ಯಾಜ್ಯಗಳು ಹಾಗೂ ವೈವಾಹಿಕ ಪ್ರಕರಣಗಳು, ಕಂದಾಯ ಹಾಗೂ ಭೂ ವ್ಯಾಜ್ಯಗಳು, ಗ್ರಾಹಕ ವ್ಯಾಜ್ಯಗಳು, ರಾಜಿ ಮಾಡಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳಿಗೆ ಲೋಕ ಅದಾಲತ್ ಮೂಲಕ ರಾಜಿ ಮಾಡಿಕೊಳ್ಳಲು ಅವಕಾಶವಿದೆ. ಇದರಿಂದ ಪ್ರಕರಣಗಳು ಇತ್ಯರ್ಥಗೊಂಡು ನೆಮ್ಮದಿಯಿಂದ ಜೀವನ ನಡೆಸಲು ಅವಕಾಶವಿದೆ ಎಂದರು.
ಆದ್ದರಿಂದ ಈ ಅದಾಲತ್ ಮೂಲಕ ಅರ್ಜಿದಾರರು ಪರಿಹಾರ ಕಂಡುಕೊಳ್ಳಲು ನ್ಯಾಯಾಲಯದ ವತಿಯಿಂದ ಅವಕಾಶ ಕಲ್ಪಿಸಲಾಗಿದೆ ಎಂದು ನ್ಯಾಯಾಧೀಶೆ ಶರ್ಮಿಳಾ ಸಿ.ಎಸ್ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಕೋಮಲ ಆರ್.ಸಿ, ಸರ್ಕಾರಿ ಅಭಿಯೋಜಕಿ ಸೀತಾ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಿಟ್ಟೆ ಉಪಸ್ಥಿತರಿದ್ದರು.