ಕಾರ್ಕಳ ತಾಲೂಕಿನ ಅಜೆಕಾರುವಿನ ಶಿರ್ಲಾಲು ಎಂಬಲ್ಲಿ ಮೈಕ್ ಗೆ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪೊಲೀಸರು ಯಕ್ಷಗಾನಕ್ಕೆ ತಡೆಯೊಡ್ಡಿದ ಪ್ರಸಂಗ ನಡೆದ ಬಗ್ಗೆ ವರದಿಯಾಗಿದೆ.
ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರ್ಲಾಲುವಿನಲ್ಲಿ ಮುಂಡ್ಲಿಯ ಈಶ್ವರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಆಯೋಜನೆಗೊಂಡಿತ್ತು. ಇಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಸಾರ್ವಜನಿಕರಿಂದ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಧ್ವನಿವರ್ದಕ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಜೆಕಾರು ಉಪನಿರೀಕ್ಷಕ ಶುಭಕರ ಅವರ ನೇತೃತ್ವದಲ್ಲಿ ಪೊಲೀಸರ ತಂಡ ಇಲ್ಲಿಗೆ ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ ಆಯೋಜಕರನ್ನು ಅರೆಸ್ಟ್ ಮಾಡಲು ಮುಂದಾಗಿದ್ದರು. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳದಿಂದ ಪೊಲೀಸರು ತೆರಳಿದ್ದಾರೆ. ಇದೀಗ ಯಕ್ಷಗಾನ ಆಯೋಜಕರ ವಿರುದ್ಧ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2025 ಕಲಂ: 112, 292 BNS ಮತ್ತು 37 ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲು ಮಾಡಲಾಗಿದೆ.

ಈ ಪ್ರಕರಣದ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು ಕರಾವಳಿ ಭಾಗದಲ್ಲಿ ಗಂಡು ಕಲೆ ಎಂದು ಪ್ರಸಿದ್ದಿಗೊಂಡಿರುವ ಯಕ್ಷಗಾನಕ್ಕೆ ಈ ರೀತಿ ಅವಮಾನ ಆದರೆ ಮುಂದಿನ ಸ್ಥಿತಿಗತಿಗಳನ್ನು ಎಣಿಸುವಾಗ ಚಿಂತಾಜನಕವಾಗಿ ಕಾಣುತ್ತಿದೆ. ಅಧಿಕಾರಿಗಳ ಈ ವರ್ತನೆ ಯಾರನ್ನು ಓಲೈಕೆ ಮಾಡಲಿಕ್ಕಾಗಿ ? ನಿಮಗೆ ತುಳುನಾಡಿನ ಸಂಸ್ಕೃತಿ, ಕಲೆಗಳ ಬಗ್ಗೆ ಗೌರವ ಇಲ್ಲದಿದ್ದರೆ ವರ್ಗಾವಣೆ ತೆಗೆದುಕೊಂಡು ಹೋಗಿ, ಅದನ್ನು ಬಿಟ್ಟು ಇಲ್ಲಿ ನಡೆಯುವ ಕಲೆಗಳಿಗೆ, ಅದನ್ನು ಪೂಜಿಸುವ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡಬೇಡಿ.
ಓಲೈಕೆಯ ಅಧಿಕಾರ ಹೆಚ್ಚು ದಿನ ಶಾಶ್ವತವಾಗಿ ಉಳಿಯುವುದಿಲ್ಲ, ನಮ್ಮ ತುಳುನಾಡಿನ ಕಲೆಗಳಿಗೆ ತುಳುನಾಡಿನಲ್ಲಿ ಯಾವುದೇ ಅನುಮತಿಗಳ ಅಗತ್ಯವಿಲ್ಲ. ಯಾಕೆಂದರೆ ನಾವು ಬೆಳೆದಿರುವುದು ಅದರ ಮಧ್ಯದಲ್ಲಿ. ಅದು ನಮ್ಮ ಉಸಿರು, ಅದು ನಮ್ಮ ಜೀವನಾಡಿ. ಈ ಯಕ್ಷಗಾನ ಕಲಾವಿದರಿಗೆ ಮತ್ತು ಅಭಿಮಾನಿಗಳಿಗೆ ಅವಮಾನ ಮಾಡಿದ್ದೀರಿ.
ನಿಮ್ಮಂತಹ ಸಂವಿಧಾನವನ್ನು ಕಲಿತವರು ಹೀಗೆ ಮಾಡಿದಲ್ಲಿ ಸಮಾಜಕ್ಕೆ ಕಾನೂನಿನ ಪಾಠ ಯಾರು ಮಾಡುವುದು? ಇದು ಹೀಗೇ ಮುಂದುವರೆದಲ್ಲಿ ನಿಮ್ಮ ಠಾಣೆ ಎದುರಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
