ಮಾರ್ಚ್ 22ರಂದು ಕರ್ನಾಟಕ ಬಂದ್ ನಡೆಯುವ ದಿನದಂದು ಹೋಟೆಲ್ ಉದ್ಯಮಕ್ಕೆ ರಕ್ಷಣೆ ನೀಡಬೇಕೆಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷ ಬಿ ಚಂದ್ರಶೇಖರ ಹೆಬ್ಬಾರ್ ಸರ್ಕಾರಕ್ಕೆ ಒತ್ತಾಯಿಸಿದ್ದು, ಬೆಂಗಳೂರಿನಲ್ಲಿ ಗೃಹ ಸಚಿವರಿಗೆ ಮನವಿ ನೀಡಿದ್ದಾರೆ.
ಬೆಳಗಾವಿಯ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರಿಗೆ ಮಸಿ ಬಳಿದು ಹಲ್ಲೆ ಮಾಡಿರುವುದನ್ನು ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದ ಗುಂಪು ಮಾರ್ಚ್ 22ರಂದು ನಡೆಸಲು ಕರೆಕೊಟ್ಟಿರುವ ಕರ್ನಾಟಕ ಬಂದ್ ವೇಳೆ ಹೋಟೆಲ್ ಉದ್ಯಮಕ್ಕೆ ರಕ್ಷಣೆ ನೀಡಬೇಕೆಂದು ಕೋರಿದ್ದಾರೆ.
“ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘವು ಎಂದಿನಿಂದಲೂ ಕನ್ನಡ ಪರವಾದ ಕಾರ್ಯಕ್ರಮಗಳನ್ನು ಮತ್ತು ಹೋರಾಟಗಳನ್ನು ಸದಾ ಬೆಂಬಲಿಸುತ್ತದೆ. ಆದರೆ ಶನಿವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲವಿದೆ. ಆದರೆ ಹೋಟಲ್ ಬಂದ್ ಇಲ್ಲ” ಎಂದು ತಿಳಿಸಿದ್ದಾರೆ.
“ದೈನಂದಿನ ಸಾರ್ವಜನಿಕ ಚಟುವಟಿಕೆಯಲ್ಲಿ ಆಹಾರ ಪೂರೈಕೆ ಅತ್ಯವಶ್ಯಕವಾಗಿರುವುದರಿಂದ ಹಾಗೂ ಶೇ.50ರಿಂದ ಶೇ.60ರಷ್ಟು ಕೂಲಿಕಾರ್ಮಿಕರು, ಕಾರ್ಪೊರೇಟ್ ಮತ್ತು ಉದ್ಯಮದವರು, ಪ್ರವಾಸಿಗರು ಹೋಟೆಲ್ ಉದ್ಯಮಗಳನ್ನೇ ನಂಬಿಕೊಂಡಿರುವುದರಿಂದ ಕರ್ನಾಟಕ ರಾಜ್ಯ ಹೋಟೆಲ್ ಸಂಘವು ಎಲ್ಲ ಜಿಲ್ಲಾ ಸಂಘಗಳ ಜತೆ ಎರಡ್ಮೂರು ಸುತ್ತಿನ ಚರ್ಚೆಗಳನ್ನು ನಡೆಸಿದೆ. ಎಲ್ಲರ ಅಭಿಪ್ರಾಯದಂತೆ ಸಾರ್ವಜನಿಕ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾರ್ಚ್ 22ರಂದು ಕನ್ನಡ ಸಂಘ ಸಂಸ್ಥೆಗಳು ಕರೆ ನೀಡಿರುವ ಬಂದ್‌ಗೆ ನಮ್ಮ ಹೋಟೆಲ್ ಉದ್ಯಮದವರು ನೈತಿಕ ಬೆಂಬಲವನ್ನು ಘೋಷಿಸುತ್ತೇವೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಬಲ್ಡೋಟಾ ವಿರೋಧಿ ಪ್ರತಿಭಟನೆ ಅಂಗವಾಗಿ ಪರಿಸರ ಜಾಗೃತಿ
“ನಮ್ಮ ಆತಿಥ್ಯದ ಹೋಟೆಲ್ ಉದ್ಯಮವು ಅಗತ್ಯ ಸೇವೆಗಳಡಿಯಲ್ಲಿ ಬರುತ್ತದೆ. ವಿವಿಧ ರಾಜ್ಯಗಳಿಂದ, ಹೊರಗಿನಿಂದ ಆಗಮಿಸುವ ಪ್ರವಾಸಿಗರಿಗೆ, ಆಸ್ಪತ್ರೆಯ ರೋಗಿಗಳಿಗೆ ಊಟೋಪಚಾರ, ವಸತಿ, ಕುಡಿಯುವ ನೀರಿನ ವ್ಯವಸ್ಥೆ ಅತ್ಯಂತ ಅಗತ್ಯವಾಗಿರುತ್ತದೆ. ಸೇವೆ/ಸರ್ವಿಸ್ ನೀಡುವವರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು” ಎಂದು ಮನವಿ ಮಾಡಿದರು.