ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಒಂದಾಗಿರುವ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ. ತಮ್ಮ ಜೈಲು ವಾಸದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಘಟ್ಟ ತಲುಪುತ್ತಿದೆ. ಸದ್ಯ, 134 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕನಕಪುರದಲ್ಲಿ ಡಿ ಕೆ ಶಿವಕುಮಾರ್ ಗೆಲುವಿನ ನಗೆ ಬೀರಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ಆರ್ ಅಶೋಕ್ ಹೀನಾಯ ಸೋಲುಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆಶಿ ಅವರು, “ನಾನು ಈಗ ಏನು ಮಾತನಾಡುವುದಿಲ್ಲ. ನನ್ನ ಜನ ನನಗಾಗಿ ಕಾಯುತಿದ್ದಾರೆ ರಾಮನಗರಕ್ಕೆ ತೆರಳಿ ವಾಪಸ್ಸು ಬಂದ ನಂತರ ಭಾರತ್ ಜೋಡೋ ಕಚೇರಿಯಲ್ಲಿ ಭೇಟಿಯಾಗುತ್ತೇನೆ” ಎಂದರು.
“ಬಿಜೆಪಿಯ ಮಾಸ್ಟರ್ ಪ್ಲಾನ್ಗಳೆಲ್ಲವೂ ತಲೆಕೆಳಗಾಗಿವೆ. ಘಟಾನುಘಟಿಗಳ ರೋಡ್ ಶೋ, ಪ್ರಚಾರಕ್ಕೆ ಮತದಾರರು ಕ್ಯಾರೆ ಎಂದಿಲ್ಲ. ಸೋನಿಯಾ ಗಾಂಧಿ ಅವರು ಜೈಲಿನಲ್ಲಿ ನೋಡೋಕೆ ಬಂದಿದ್ದರು. ನಾನು ಇದನ್ನು ಮರೆಯುವುದಿಲ್ಲ. ನನ್ನ ಗೆಲುವಿಗೆ ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕಗಾಂಧಿ, ಸಿದ್ದರಾಮಯ್ಯ ಎಲ್ಲರೂ ಪಾತ್ರವಹಿಸಿದ್ದಾರೆ. ಬಹುಮುಖ್ಯವಾಗಿ ನನ್ನ ಜನ ನನ್ನ ಗೆಲುವಿಗೆ ಕಾರಣ” ಎಂದು ಭಾವುಕರಾದರು.