ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರು ಅತೀ ಹೆಚ್ಚು ಮೌಢ್ಯವನ್ನು ಹೊಂದಿದ್ದಾರೆ. ಅದರಲ್ಲೂ ಎರಡೂ ರಾಜ್ಯಗಳ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳು ಮೌಢ್ಯಗಳಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಯುನೆಸ್ಕೋ ಬಿಡುಗಡೆ ಮಾಡಿರುವ ಸಮೀಕ್ಷೆ ವರದಿ ಹೇಳಿದೆ.
2019ರಲ್ಲಿ ಪ್ರಾಕ್ಟರ್ ಮತ್ತು ವಿಸ್ಪರ್ ನೆರವಿನೊಂದಿಗೆ ಯುನೆಸ್ಕೋ ಸಮೀಕ್ಷೆ ಆರಂಭಿಸಿತ್ತು. #KeepGirlsinSchool ಅಭಿಯಾನದ ಸ್ಪಾಟ್‌ಲೈಟ್ ರೆಡ್’ ಎಂಬ ಶೀರ್ಷಿಕೆಯಡಿ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಸಮೀಕ್ಷೆ ನಡೆಸಿತ್ತು.
ಇದೀಗ, ಸಮೀಕ್ಷೆಯ ವರದಿಯನ್ನು ಯುನೆಸ್ಕೋ ಬಿಡುಗಡೆ ಮಾಡಿದೆ. ಮುಟ್ಟಿನ ವಿಚಾರದಲ್ಲಿ ಈ ಆರು ರಾಜ್ಯಗಳ ಪೈಕಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಹೆಚ್ಚು ಮೌಢ್ಯಗಳನ್ನು ಹೊಂದಿವೆ ಎಂದು ವರದಿ ಹೇಳಿದೆ.
“ಕರ್ನಾಟಕದಲ್ಲಿ ಇನ್ನೂ ಕೆಲವು ಸಮುದಾಯಗಳು ಮುಟ್ಟಾದ ಮಹಿಳೆಯರನ್ನು ಪ್ರತ್ಯೇಕವಾಗಿ ಇರಿಸುವ ಅನಿಷ್ಟ ಪದ್ದತಿಯನ್ನು ಅನುಸರಿಸುತ್ತಿವೆ. ಅವರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳಲಾಗುತ್ತಿದೆ. ಮುಟ್ಟಾದ ಮಹಿಳೆಯರು ಕುಟುಂಬದ ಇತರ ಸದಸ್ಯರೊಂದಿಗೆ ಕುಳಿತು ಊಟ ಮಾಡಲು ಸಹ ಬಿಡುವುದಿಲ್ಲ. ಮನೆಯೊಳಗೆ ಇರಲು ಅವಕಾಶ ನೀಡುವುದಿಲ್ಲ” ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕ ಬಿ.ಬಿ ಕಾವೇರಿ ಹೇಳಿದ್ದಾರೆ.
ಸಮೀಕ್ಷೆಗೆ ಒಳಗಾದ ಕರ್ನಾಟಕದ ಗ್ರಾಮೀಣ ಭಾಗದ ಒಟ್ಟು 1,800 ಜನರಲ್ಲಿ 33% ಮಹಿಳೆಯರು ಮುಟ್ಟಿನ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಮೌಢ್ಯ, ಹಿಂಜರಿಕೆ, ತಪ್ಪುಗ್ರಹಿಕೆಗಳನ್ನು ಹೊಂದುವಲ್ಲಿ ಜಾತಿಯೂ ಪ್ರಧಾನ ಪಾತ್ರ ವಹಿಸಿದೆ.
“ಮಹಿಳೆಯರು ದೇವಾಲಯಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸುವುದು, ಧಾರ್ಮಿಕ ತೀರ್ಥ-ಪ್ರಸಾದಗಳನ್ನು ಮುಟ್ಟದಂತೆ ತಡೆಯುವುದು, ಅಡುಗೆ ಕೋಣೆ ಅಥವಾ ಪೂಜಾ ಕೋಣೆಗೆ ಹೋಗದಂತೆ ನಿರ್ಬಂಧಿಸುವುದು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡುಬಂದಿದೆ” ಎಂದು ಯುನೆಸ್ಕೋದ ಡಾ. ಹುಮಾ ಮಸೂದ್ ಹೇಳಿದ್ದಾರೆ.
“ಮುಟ್ಟಿಗೆ ಸಂಬಂಧಿಸಿದ ಮೌಢ್ಯ ಅಥವಾ ಅನಿಷ್ಠ ಆಚರಣೆಗಳನ್ನು ತಡೆಯುವಲ್ಲಿ ಸರ್ಕಾರವು ಕೈಗೊಂಡ ಹಲವಾರು ಯೋಜನೆಗಳು ಮತ್ತು ಕ್ರಮಗಳು ವಿಫಲವಾಗಿವೆ” ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ ಮಹತ್ವದ ‘ಶುಚಿ ಯೋಜನೆ’ಯನ್ನು ಸರ್ಕಾರ ಜಾರಿಗೆ ತಂದಿತ್ತು. ಆದರೆ, ಅದನ್ನು 2020ರಲ್ಲಿ ಬಿಜೆಪಿ ಸರ್ಕಾರ ನಿಲ್ಲಿಸಿತು. ಮತ್ತೆ ಅದನ್ನು ಪುನರಾರಂಭಿಸಲಾಗಿಲ್ಲ ಎಂಬುದನ್ನು ವರದಿ ಗಮನಿಸಿದೆ.
ಯೋಜನೆ ಜಾರಿಯಾಗದಿರುವುದಕ್ಕೆ ಪ್ಯಾಡ್‌ಗಳ ಕಳಪೆ ಗುಣಮಟ್ಟ ಮತ್ತು ಇಲಾಖೆ ವರ್ಗಾವಣೆಯಂತಹ ಅನೇಕ ಕಾರಣಗಳನ್ನು ರಾಜ್ಯ ಸರ್ಕಾರ ನೀಡಿದೆ.
ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಮಹಿಳೆಯರನ್ನು ಅಪಹಾಸ್ಯ ಮಾಡಿದರೆ, ಪರಿಣಾಮ ಎದುರಿಸಬೇಕಾದೀತು
ಮಹಿಳೆಯರು ಋತುಚಕ್ರದ ಬಗ್ಗೆ ಚರ್ಚೆಗಳನ್ನು ಆರಂಭಿಸಲು, ಮುಟ್ಟಿನ ವಿಚಾರದಲ್ಲಿನ ಮೌಢ್ಯಗಳ ವಿರುದ್ಧ ಮಾತನಾಡಲು ಪ್ರಾರಂಭಿಸಲು ಇದು ಸಕಾಲವಾಗಿದೆ. ಭಾರತದಲ್ಲಿ ಋತುಚಕ್ರದ ಬಗೆಗಿನ ತಪ್ಪುಗ್ರಹಿಕೆಗಳನ್ನು ತೊಡೆದುಹಾಕುವ ಮೂಲಕ ಮುಟ್ಟು ಹೆಣ್ಣಿನಲ್ಲಾಗುವ ನೈಸರ್ಗಿಕ ಕ್ರಿಮೆ ಎಂಬುದನ್ನು ಎಲ್ಲ ಲಿಂಗದವರು ಒಪ್ಪಿಕೊಳ್ಳುವಂತೆ ಮಾಡುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.