ಗುಜರಾತ್‌ ಮಾದರಿಗೆ ಪರ್ಯಾಯ ಮಾದರಿ ಸೃಷ್ಟಿಸುವ ಸಾಮರ್ಥ್ಯ ಕರ್ನಾಟಕಕ್ಕಿದೆ: ಯೋಗೇಂದ್ರ ಯಾದವ್

Date:

Advertisements

“ಗುಜರಾತ್ ಮಾದರಿಗೆ ಪರ್ಯಾಯವಾದ ಮಾದರಿಯನ್ನು ಸೃಷ್ಟಿಸುವ ಸಾಮರ್ಥ್ಯ ಕರ್ನಾಟಕ ರಾಜ್ಯಕ್ಕೆ ಇದೆ” ಎಂದು ರಾಜಕೀಯ ವಿಶ್ಲೇಷಕರಾದ ಪ್ರೊ.ಯೋಗೇಂದ್ರ ಯಾದವ್‌ ಅಭಿಪ್ರಾಯಪಟ್ಟಿದ್ದಾರೆ.

‘ಜಾಗೃತ ಕರ್ನಾಟಕ’ ವತಿಯಿಂದ ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆದ ’ನಮ್ಮ ಕರ್ನಾಟಕ ನಮ್ಮ ಮಾದರಿ- ಚಿಂತನಾ ಸಮಾವೇಶ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

“ಒಮ್ಮೆ ಈ ಮಾದರಿ – ಕರ್ನಾಟಕ ಮಾದರಿ ಜಾರಿಯಾದರೆ, ಅದು ಬೇರೇನೂ ಅಲ್ಲ. ಭಾರತದ ಸಂವಿಧಾನದ ಮುನ್ನುಡಿಯ ಅಭಿವ್ಯಕ್ತಿಯಲ್ಲದೇ ಇನ್ನೇನೂ ಅಲ್ಲ” ಎಂದು ಬಣ್ಣಿಸಿದ್ದಾರೆ.

Advertisements

ನಾನು ಸಾಕಷ್ಟು ಕಾಲದಿಂದ ʼದಕ್ಷಿಣಾಯನʼದ ಬಗ್ಗೆ ಹೇಳುತ್ತಿದ್ದೇನೆ. ನಮ್ಮಲ್ಲಿ ಉತ್ತರ ಭಾರತೀಯರು ಈ ದೇಶ ಹೇಗೆ ನಡೆಯಬೇಕೆಂದು ಹೇಳುತ್ತಿದ್ದರು. ಅದು ಕೆಲಸ ಮಾಡಿಲ್ಲ. ಹಾಗಾಗಿ ಅದನ್ನು ಬದಲಿಸಬೇಕು. ಈಗ ದಕ್ಷಿಣದಿಂದ ಶುರು ಮಾಡಬೇಕು. ಕರ್ನಾಟಕ ಮಾದರಿಯು ಸಾಕಾರವಾದರೆ ಅದು ದಕ್ಷಿಣಾಯನ ಸಂದರ್ಭವನ್ನು ರೂಪಿಸುತ್ತದೆ ಎಂದು ಶ್ಲಾಘಿಸಿದ್ದಾರೆ.

ಪ್ರೊ.ಯೋಗೇಂದ್ರ ಯಾದವ್ ಅವರ ಭಾಷಣದ ಪೂರ್ಣ ಪಠ್ಯ ಇಲ್ಲಿದೆ

ಡಾ.ವಾಸು ಅವರು ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ, ಅವರು ನನಗೆ ನಾನು ಇಷ್ಟಪಡದ ಟಾಪಿಕ್‌ ಸೂಚಿಸಿದರು. ಹಾಗಾಗಿ ನಾನು ನಾನೇನು ಮಾತಾಡಬೇಕೆಂದು ಅಂದುಕೊಂಡಿದ್ದೇನೋ ಅದನ್ನೇ ಆಡಿಬಿಡುತ್ತೇನೆ ಎಂದು ತೀರ್ಮಾನಿಸಿದೆ. ನನ್ನ ಕನ್ನಡ ಈಗ ಸಾಕಷ್ಟು ಬೆಳೆದಿದೆ. ಆದರೆ ಎಲ್ಲವನ್ನೂ ಅರ್ಥಮಾಡಿಕೊಳ್ಳುವಷ್ಟಲ್ಲ.
ನಾನು 2-3 ಸಂಗತಿಗಳನ್ನು ಮಾತ್ರ ಹೇಳುತ್ತೇನೆ.

ಕರ್ನಾಟಕ ಮಾದರಿ ಕುರಿತಂತೆ ಈಗ ಚರ್ಚೆ ನಡೆಯುತ್ತಿದೆ. ಈ ದೇಶದಲ್ಲಿ ಏನಾಗಿದೆಯೆಂದರೆ, ಪ್ರಾದೇಶಿಕವಾದದ ಕುರಿತಂತೆ ಏನಾದರೂ ಚರ್ಚೆ ನಡೆದರೆ, ಅದು ಕೆಲವರಿಗೆ ಮುಜುಗರ ತರುತ್ತದೆ. ಉತ್ತರ ಭಾರತದಲ್ಲಿ ಕೋಮುವಾದ, ಜಾತಿವಾದ, ಪ್ರಾದೇಶಿಕವಾದ ಎಲ್ಲವನ್ನೂ ಒಂದು ರೀತಿಯ ಬೈಗುಳದ ರೀತಿಯಲ್ಲಿ ಬಳಸಲಾಗುತ್ತದೆ. ಇದು ವಿಚಿತ್ರ. ಕೋಮುವಾದ ದೇಶಕ್ಕೆ ಅಪಾಯ. ಜಾತಿಯ ಕುರಿತ ಕೆಲವು ಅಭಿವ್ಯಕ್ತಿಗಳು ಅಪಾಯಕಾರಿ. ಆದರೆ ಪ್ರಾದೇಶಿಕವಾದವೇಕೆ ಸಮಸ್ಯೆಯಾಗಬೇಕೆಂದು ನನಗೆ ಗೊತ್ತಾಗುತ್ತಿಲ್ಲ. ಬಹುಶಃ ವಸಾಹತುಶಾಹಿ ಕಾಲದಿಂದ ನಾವು ಪಡೆದುಕೊಂಡ ಕೆಲವು ಸಂಗತಿಗಳು ನಮ್ಮಲ್ಲಿ ಈ ಅಭಿಪ್ರಾಯ ಮೂಡಿಸಿರಬಹುದು.

ವಸಾಹತುಶಾಹಿಗಳು ಒಂದು ಬಗೆಯ ರಾಷ್ಟ್ರದ ಪರಿಕಲ್ಪನೆಯನ್ನು ಇಲ್ಲಿಗೆ ತಂದರು. ಅವರು ಹೇಳಿದ್ದು ನೋಡಿ, ನೀವು ಒಂದು ರಾಷ್ಟ್ರವಾಗಲು ಸಾಧ್ಯವಿಲ್ಲ. ಏಕೆಂದರೆ ಬಂಗಾಳಿ, ಪಂಜಾಬಿ ಮತ್ತು ಕನ್ನಡದವರ ಮಧ್ಯೆ ಸಮಾನವಾದುದು ಏನಿದೆ? ಇದು ವಾಸ್ತವವಲ್ಲ.

ಮೇಲಿನ ವಾದಕ್ಕೆ ಕೆಲವರು ಹೀಗೆ ಉತ್ತರಿಸಿದರು: ʼಇಲ್ಲ, ನಾವೆಲ್ಲರೂ ಒಂದೇ. ಈ ಭೂಭಾಗದ ವಿವಿಧ ಪ್ರದೇಶಗಳ ಜನರಲ್ಲಿ ಹಲವು ಸಮಾನ ಅಂಶಗಳಿವೆʼ ಎಂದು ಆ ರಾಷ್ಟ್ರೀಯವಾದಿಗಳು ಹೇಳಿದರು. ಹೀಗೆ ಹೇಳುವಾಗ, ಅವರು ವಸಾಹತುಶಾಹಿಗಳು ಹೇಳುತ್ತಿದ್ದ ರಾಷ್ಟ್ರದ ಪರಿಕಲ್ಪನೆಯನ್ನು ಒಪ್ಪಿದ್ದರು. ಅದೇನೆಂದರೆ ಸಾಂಸ್ಕೃತಿಕ ಗಡಿಗಳು ಮತ್ತು ರಾಜಕೀಯ ಗಡಿಗಳು ಒಂದೇ ಆಗಿರಬೇಕು ಎಂದು.

ಇದನ್ನೂ ಓದಿರಿ: ಭ್ರಷ್ಟಾಚಾರ ನಿಯಂತ್ರಣಕ್ಕೆ ’ಪಂಚತಂತ್ರ’ ಜಾರಿಗೆ ತರಲಿದ್ದೇವೆ: ಸಚಿವ ಪ್ರಿಯಾಂಕ್ ಖರ್ಗೆ

ಫ್ರಾನ್ಸ್‌ನಲ್ಲಿರುವ ಎಲ್ಲರೂ ಫ್ರೆಂಚ್‌, ಜರ್ಮನಿಯಲ್ಲಿರುವ ಎಲ್ಲರೂ ಜರ್ಮನ್‌ ಮಾತಾಡಬೇಕು ಎಂಬುದೇ ಆ ಸಾಂಸ್ಕೃತಿಕ ಪರಿಕಲ್ಪನೆ. ವಾಸ್ತವದಲ್ಲಿ ಆ ದೇಶಗಳಲ್ಲೇ ಹಾಗೆ ಇಲ್ಲ. ಅಲ್ಲಿಯೂ ಬೇರೆ ಬೇರೆ ಭಾಷೆಗಳಿವೆ, ಉಪಭಾಷೆಗಳಿವೆ. ಹಾಗಾಗಿ ಯೂರೋಪಿನಲ್ಲಿ ಏನು ಮಾಡಿದ್ದಾರೆಂದರೆ, ಎಲ್ಲವೂ ಒಂದೇ ರೀತಿ ಇಲ್ಲದಿದ್ದರೆ, ಒಂದೇ ರೀತಿ ಮಾಡಿಬಿಡುವುದು. ಎಲ್ಲರೂ ಒಂದೇ ರೀತಿಯ ಭಾಷೆ, ಒಂದೇ ರೀತಿಯಲ್ಲಿ ಆ ಭಾಷೆಯನ್ನಾಡುವುದು. ಆ ರೀತಿ ಮಾಡಲಾಗದವರನ್ನು ಹೊರಹಾಕುವುದು. ಇದು ಯೂರೋಪಿನ ರಾಷ್ಟ್ರದ ಪರಿಕಲ್ಪನೆ.

ದುರಾದೃಷ್ಟಕರವಾಗಿ ಬಹಳ ಭಾರತೀಯರು ಇದನ್ನೇ ಒಪ್ಪಿಕೊಂಡಿದ್ದಾರೆ. ಐಕ್ಯತೆ ಎಂದರೆ ಒಂದೇ ಬಗೆಯಲ್ಲಿ ಇರುವುದು ಎಂದು. ಇದು ಹೀಗೆ ಇರಬೇಕಿಲ್ಲ. ಇದು ಸಾಂಸ್ಕೃತಿಕ ಗುಲಾಮಗಿರಿ. ಇಂತಹ ಸಾಂಸ್ಕೃತಿಕ ಗುಲಾಮರು ಭಾರತವನ್ನೂ ಯೂರೋಪಿನ ರೀತಿಯ ರಾಷ್ಟ್ರವನ್ನಾಗಿ ಕಟ್ಟಲು ಹೊರಟಿದ್ದಾರೆ.

ಆಗಸ್ಟ್‌ 15ರಂದು ಈ ದೇಶದ ಪ್ರಧಾನಿಯು 1000 ವರ್ಷಗಳ ಗುಲಾಮಗಿರಿ ಎಂದು ಭಾಷಣ ಮಾಡಿದರು. ಅವರಿಗೆ ನಾನು ಹೇಳಬೇಕೆಂದುಕೊಳ್ಳುವುದು ಏನೆಂದರೆ, ಇವರೇ ಯೂರೋಪಿನ ರೀತಿಯ ರಾಷ್ಟ್ರವನ್ನು ಇಲ್ಲಿ ಕಟ್ಟಲು ಹೊರಟಿದ್ದಾರೆ.
ಮತ್ತು ಈ ಸಾಂಸ್ಕೃತಿಕ ಗುಲಾಮರೇ ಇಂದು ದೇಶವನ್ನು ಆಳುತ್ತಿದ್ದಾರೆ. ಇದಲ್ಲದೇ ಇನ್ನೂ ಒಂದು ಮಾದರಿಯಿದೆ. ಟ್ಯಾಗೋರ್‌, ನೆಹರೂ ಹೇಳುವಂಥದ್ದು. ಸಾಂಸ್ಕೃತಿಕ ಮತ್ತು ರಾಜಕೀಯ ಗಡಿಗಳು ಒಂದೇ ಆಗಿರಬೇಕಿಲ್ಲ. ನಾವು ನಮ್ಮ ರೀತಿಯ ರಾಷ್ಟ್ರವಾಗಿರುತ್ತೇವೆ. ನಮ್ಮದು ಭಾರತ ಮಾದರಿಯ ರಾಷ್ಟ್ರೀಯತೆ. ಅಂದರೆ, ನಮ್ಮಲ್ಲಿ ಸಾಂಸ್ಕೃತಿಕ ವೈವಿಧ್ಯತೆಯಿರುವುದು ನಮಗೆ ಸರಿ ಮಾತ್ರವಲ್ಲಾ, ಅದನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ನಮ್ಮ ದೇಶ ಇರಬೇಕಾದ ರೀತಿಯೇ ಇದು ಎಂದು ನಾವು ಭಾವಿಸುತ್ತೇವೆ.

ನಾನು 12 ವರ್ಷಗಳ ಕೆಳಗೆ State Nation ಎಂಬ ಒಂದು ಪುಸ್ತಕವನ್ನು ಕೆಲವು ಸ್ನೇಹಿತರ ಜೊತೆ ಸೇರಿ ಬರೆದಿದ್ದೆ. ಇದು ಭಾರತೀಯ ಮಾದರಿಯ ರಾಷ್ಟ್ರ ಎಂಬುದು ನಮ್ಮ ಪ್ರತಿಪಾದನೆಯಾಗಿತ್ತು. ಆದರೆ ಇದೇ ದೇಶದಲ್ಲೇ ನಮ್ಮ ಈ ಹೆಮ್ಮೆಯ ಭಾರತ ಮಾದರಿಯನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಅದು ಬಿಜೆಪಿಯ ರಾಷ್ಟ್ರೀಯತೆ. ಅವರು ಈ ದೇಶದ ರಾಷ್ಟ್ರೀಯತೆಗೆ ಕೊಟ್ಟಿರುವ ಕೊಡುಗೆ ಶೂನ್ಯ. ರಾಷ್ಟ್ರದ ಕುರಿತಾದ ಅವರ ಕಲ್ಪನೆಯೇ ಹುಸಿಯಾದದ್ದು, ಹೊರಗಿನಿಂದ ಆಮದು ಮಾಡಿಕೊಂಡಿದ್ದು. ಹಾಗಾಗಿ ಅವರು ಸಾಂಸ್ಕೃತಿಕ ಗುಲಾಮರು. ಇದನ್ನೆಲ್ಲಾ ನಾನು ಏಕೆ ಹೇಳುತ್ತಿದ್ದೇನೆಂದರೆ, ಇಂದು ನಾವಿಲ್ಲಿ ಕರ್ನಾಟಕ ಮಾದರಿಯ ಕುರಿತು ಚರ್ಚಿಸುತ್ತಿದ್ದೇವೆ.

ಕರ್ನಾಟಕ ಮಾದರಿಯೆಂಬುದು ಸಾಧ್ಯವೇ? ಹೌದು, ಸಾಧ್ಯ ಮಾತ್ರ ಅಲ್ಲ, ಅದು ಬೇಕಿದೆ. ಪ್ರಾದೇಶಿಕವಾದವು ಈ ದೇಶದ ದೌರ್ಬಲ್ಯ ಅಲ್ಲ, ಅದು ಈ ದೇಶದ ಶಕ್ತಿ. ಒಂದು ವೇಳೆ ಈ ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ ಈ ದೇಶವು ಇಷ್ಟರಲ್ಲಿ ಛಿದ್ರಗೊಳ್ಳುತ್ತಿತ್ತು.

ಈಗ ಹಲವು ಮಾದರಿಗಳಿವೆ. ಕರ್ನಾಟಕದ್ದು ಎಂತಹ ಮಾದರಿ? ನನ್ನ ಪ್ರಕಾರ 4-5 ಮಾನದಂಡಗಳಿರಬೇಕು. ಒಂದು ಆರ್ಥಿಕವಾಗಿ ಅದು ಸುಸ್ಥಿರವಾಗಿರಬೇಕು. ಸಾಮಾಜಿಕ ನ್ಯಾಯ ಮತ್ತು ಸೌಹಾರ್ದತೆಯಿರಬೇಕು. ಅದರಿಂದ ಪಾರಿಸರಿಕ ಸುಸ್ಥಿರತೆಯೂ ಸಾಧ್ಯವಾಗಬೇಕು. ದೀರ್ಘಕಾಲದಲ್ಲೂ ರಾಜಕೀಯವಾಗಿ ಸಾಧ್ಯವಿರಬೇಕು. (Political viability)
ಅಂದರೆ ದೊಡ್ಡ ಸಂಖ್ಯೆಯ ಜನರು ಅದನ್ನು ಬೆಂಬಲಿಸುವಂತಿರಬೇಕು.

ಇಂದು ಇರುವ ಮಾದರಿಗಳೇನು? ʼಪ್ರಖ್ಯಾತ ಗುಜರಾತ್‌ ಮಾದರಿʼ. ಖಂಡಿತಾ ಗುಜರಾತ್‌ ಮಾದರಿ ಎಂಬುದೊಂದಿದೆ. ಅದು ಬೆಳವಣಿಗೆ ಆಧರಿತ. ಜನರ ಹಕ್ಕುಗಳು, ಪರಿಸರ ಎಲ್ಲಾ ಹಾಳಾಗಿ ಹೋಗಲಿ, ಬೆಳವಣಿಗೆ ಆಗಲಿ ಎಂಬುದು.

ಅದು ಜಿಡಿಪಿ ಬೆಳವಣಿಗೆಯನ್ನು ಸಾಧಿಸಿದ್ದು ನಿಜ. ಜೊತೆಗೆ ಕಾರಣಗಳು ಏನೇ ಇರಬಹುದಾದರೂ, ಜನರು ಅದನ್ನು 20 ವರ್ಷಗಳಿಗಿಂತ ಹೆಚ್ಚು ಕಾಲ ಬೆಂಬಲಿಸಿದ್ದಾರೆ. ಆದರೆ ಅಲ್ಲಿ ಸಾಮಾಜಿಕ ನ್ಯಾಯವಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಅದು 20ನೇ ಸ್ಥಾನಕ್ಕಿಂತ ಕೆಳಗೆ ಇದೆ. ಜೊತೆಗೆ ರಾಜಕೀಯ ಸ್ಥಿರತೆಯೂ ಹಿಂದೂ-ಮುಸ್ಲಿಂ ಬಿರುಕಿನಿಂದ ಹುಟ್ಟಿದೆ.

ಗುಜರಾತ್‌ದಲ್ಲದೇ ಇನ್ನೇನಾದರೂ ಮಾದರಿಯಿದೆಯೇ? ಹೌದು, ಕೇರಳದ ಮಾದರಿಯ ಕುರಿತೂ ಚರ್ಚೆ ಇದೆ. ಅದು ಒಳ್ಳೆಯ ಮಾದರಿಯೇ. ಆದರೆ, ಒಂದು ಪ್ರಶ್ನೆಯೆಂದರೆ – ಅದನ್ನು ನೀವು ಬೇರೆ ಕಡೆ ಪುನರಾವರ್ತಿಸಲು ಸಾಧ್ಯವೇ?ನನಗನ್ನಿಸುವುದು – ಅದು ತೀರಾ ಸ್ಥಳೀಯ ನಿರ್ದಿಷ್ಟತೆಯಿಂದ ಕೂಡಿರುವುದು. ನಾನು ತಪ್ಪೂ ಇರಬಹುದು. ಆದರೆ ನನಗೆ ಅನ್ನಿಸೋದು ಅದನ್ನು ಬೇರೆ ಕಡೆ ಜಾರಿ ಮಾಡುವುದು ಸುಲಭವಲ್ಲ. ಹಾಗಾಗಿ ಗುಜರಾತ್‌ ಮಾದರಿಗಿಂತ ಹೊರತಾಗಿ, ಕೇರಳದ್ದಲ್ಲದ ಮಾದರಿಗೆ ಹುಡುಕಾಟ ನಡೆದಿದೆ.

ದೆಹಲಿ ಮಾದರಿ ಬಗ್ಗೆ ಮಾತು ನಡೆಯುತ್ತದೆ. ಆದರೆ, ವಾಸ್ತವದಲ್ಲಿ ಹೇಳುತ್ತಿರುವುದಕ್ಕೂ ವಾಸ್ತವಕ್ಕೂ ವ್ಯತ್ಯಾಸಗಳಿವೆ.
ಶಿಕ್ಷಣ ಮತ್ತು ಆರೋಗ್ಯ ವಲಯಗಳಿಗೆ ಅವರು ಸಾಕಷ್ಟು ಹಣ ಕೊಡುತ್ತಿದ್ದಾರೆನ್ನುವುದು ನಿಜ. ಆದರೆ,

1) ಶಿಕ್ಷಣದ ಗುಣಮಟ್ಟದ ಹೆಚ್ಚಳದಲ್ಲಿ ಏನು ಸಾಧನೆ ಆಗಿದೆ ಅದಿನ್ನೂ ಗೊತ್ತಿಲ್ಲ. ರಾಷ್ಟ್ರ ನಿರ್ಮಾಣವೆಂದರೆ ಕಟ್ಟಡ ನಿರ್ಮಾಣವಾಗಿದೆ, ಈ ದೇಶದಲ್ಲಿ. ಅದರ ಆಚೆಗೆ ಏನು ಸಾಧನೆ ಇನ್ನೂ ಕಾದು ನೋಡಬೇಕು.

2) ದೆಹಲಿಗೆ ಸಿಕ್ಕಾಪಟ್ಟೆ ಆದಾಯವಿದೆ. ಹೀಗಾಗಿ ಬೇರೆ ಕಡೆಗೆ ಅದನ್ನು ಮಾಡಲಾಗುತ್ತಾ, ಇಲ್ಲ.

ಹಾಗಾಗಿ ಕರ್ನಾಟಕದ ವಿಚಾರ ಮುಖ್ಯ. ಇದಕ್ಕೊಂದು ಇತಿಹಾಸವಿದೆ. ಸಾಮಾಜಿಕ ನೀತಿಗಳ ಒಂದು ಇತಿಹಾಸವಿದೆ.
ಉದಾ: ಹಾವನೂರು ಆಯೋಗ, ರಾಜಕೀಯ ವಿಕೇಂದ್ರೀಕರಣ. ಕರ್ನಾಟಕಕ್ಕೆ ಒಂದು ಬೌದ್ಧಿಕ ಸಂಸ್ಕೃತಿಯ ಇತಿಹಾಸವಿದೆ. ಅಂದರೆ, ನಮ್ಮಂಥವರು ಅಸೂಯೆ ಪಟ್ಟುಕೊಳ್ಳುವ ಮಟ್ಟಿಗೆ ಇಲ್ಲಿ ಬೌದ್ಧಿಕ ವಾತಾವರಣವಿದೆ.
ಆದರೆ ಇವಿಷ್ಟೇ ಬೇರೆ ಕಡೆಗೂ ಅಳವಡಿಸಿಕೊಳ್ಳಬಹುದಾದ ಮಾದರಿಯನ್ನು ಹುಟ್ಟಿಸುವುದಿಲ್ಲ.

ಬೆಳಗ್ಗಿನಿಂದ ನಾನು (ಜೇಮ್ಸ್‌ ಮ್ಯಾನರ್‌ ಅವರದ್ದು ಬಿಟ್ಟರೆ) ಭಾಷಣಗಳಿಂದ ಇಲ್ಲಿನ ಚರ್ಚೆ ಅರ್ಥ ಮಾಡಿಕೊಳ್ಳಲು ಆಗಿಲ್ಲ. ಇಲ್ಲಿನ ಮಾದರಿಗೆ ಪಿರಮಿಡ್ಡಿನ ತಳಸ್ತರದ ಮಾದರಿ ಎಂದು ನಾನು ಕರೆಯುತ್ತೇನೆ. ಬಿಜೆಪಿಯ ಮಾದರಿ ಅದರ ವಿರುದ್ಧವಾದದ್ದು. ಅದು ಪಿರಮಿಡ್‌ನ ಮೇಲ್ಭಾಗದಲ್ಲಿರುವ ಜನರನ್ನು ಸರಿಯಾಗಿ ಸದೃಢೀಕರಣಗೊಳಿಸುವುದು ಮತ್ತು ಅದಕ್ಕಿಂತ ಕೆಳಗಿರುವ ಬಹುಸಂಖ್ಯಾತ ಜನರನ್ನು ಛಿದ್ರಗೊಳಿಸುವುದು (ಮುಸ್ಲಿಮರು ಮತ್ತು ಇತರ ತಳಸ್ತರದ ಜನರನ್ನು). ಇದನ್ನೇ ಅವರು ಉತ್ತರ ಪ್ರದೇಶದಲ್ಲೂ ಮಾಡಿದ್ದು.

ಇಲ್ಲಿ ದೇವರಾಜ ಅರಸರ ಕುರಿತು ಸಾಕಷ್ಟು ಚರ್ಚೆ ನಡೆಯಿತು. ಇಲ್ಲಿ ನಡೆದ ಚರ್ಚೆಗಿಂತ ಅದಿನ್ನೂ ಆಳವಾದದ್ದು ಅನಿಸುತ್ತದೆ. ಕರ್ನಾಟಕದ ಇತ್ತೀಚೆಗಿನ 2023ರ ವಿಧಾನಸಭಾ ಚುನಾವಣೆಯ ಸಾಮಾನ್ಯ ಜನರ ತೀರ್ಪು ಮುಖ್ಯವಾದದ್ದು. ಪಿರಮಿಡ್ಡಿನ ತಳದಲ್ಲಿರುವ, ಅಂದರೆ ಈ ರಾಜ್ಯದ ತಳಸ್ತರದ ಜನರು ಬಯಸಿದ ಸರ್ಕಾರವಿದು.
ಮಹಿಳೆಯರು, ಗ್ರಾಮೀಣ ಜನರು, ಬಡವರು, ಮೇಲ್ಜಾತಿಗಳಲ್ಲದವರೇ ಆ ಜನ.

ಚುನಾವಣೆಯ ನಂತರ (ಈದಿನ.ಕಾಮ್‌ ಸಮೀಕ್ಷೆ ಆಧರಿಸಿ) ನಾನು ಈ ಕುರಿತು ಲೇಖನವನ್ನೂ ಬರೆದೆ. ಈ ದೇಶದ ಇತಿಹಾಸದಲ್ಲಿ, ಅಂತಹ ಬಡವರಿಂದ ಓಟು ಪಡೆದು, ಮೇಲಿನವರಿಗೇ ಸೇವೆ ಸಲ್ಲಿಸುವುದೂ ಸಾಕಷ್ಟು ನಡೆದಿದೆ.
ಹಾಗಾಗಿ ನನ್ನ ಆತಂಕ ಮತ್ತು ಭಯ – ಈ ಸರ್ಕಾರದಿಂದ ಇಷ್ಟೊಂದು ನಿರೀಕ್ಷೆಯಿದೆ. ಈ ಜನಸಾಮಾನ್ಯರಿಂದ. ಅದನ್ನು ಈ ಸರ್ಕಾರವು ಈಡೇರಿಸುತ್ತದಾ? ಎಂಬುದಾಗಿತ್ತು.

ಅದು ಗ್ಯಾರಂಟಿಗಳನ್ನು ಈಡೇರಿಸುವುದರಲ್ಲಿ ಮೊದಲ ಸ್ಪಷ್ಟ ಸಕಾರಾತ್ಮಕ ಹೆಜ್ಜೆಗಳನ್ನಿಟ್ಟಿದೆ. ಈ 5 ಗ್ಯಾರಂಟಿಗಳು ಒಳ್ಳೆಯ ಆರ್ಥಿಕ ಕ್ರಮಗಳು. ದೇಶದ ತಳಸ್ತರದಲ್ಲಿರುವ ಶೇ.80ರಷ್ಟು ಜನರಿಗೆ ಒಳ್ಳೆಯದನ್ನು ಮಾಡುವ ಕ್ರಮಗಳು.
ಈದಿನ ಸರ್ವೆ ತೋರಿಸಿರುವ ಹಾಗೆ ಇವು ಒಳ್ಳೆಯದು ಎಂಬುದರ ಕುರಿತು ಜನರಿಗೆ ಯಾವುದೇ ಸಂದೇಹವಿಲ್ಲ. ಆದರೆ ಸಂದೇಹ ಯಾರಿಗಿದೆ? ಮಾಧ್ಯಮದವರಿಗಿದೆ.

ಇವರು 0.01% ಜನ. ಇವರು ಅಭಿಪ್ರಾಯ ರೂಪಿಸುತ್ತಾರೆ. ಇವರು ಹೇಳುತ್ತಾರೆ- ಇದು ರೇವ್ಡಿ ಸಂಸ್ಕೃತಿ ಎನ್ನಲಾಗುತ್ತದೆ. ನಿಮಗೆ ರೇವ್ಡಿ ಎಂದರೆ ಗೊತ್ತಿಲ್ಲದಿರಬಹುದು. ಇದು ಬೆಲ್ಲದಿಂದ ಮಾಡುವ ಸಿಹಿ ತಿಂಡಿ. ನನ್ನ ಭಾಷೆಯ ಈ ಪದ ದೇಶದ ಎಲ್ಲರಿಗೂ ಗೊತ್ತಾಯಿತು ಎಂಬುದನ್ನು ಬಿಟ್ಟರೆ ಈ ಮಾತಿನಿಂದ ಏನೂ ಪ್ರಯೋಜನವಾಗಲಿಲ್ಲ.

ವಿರೋಧ ಪಕ್ಷಗಳು ಇದನ್ನು ಮಾಡಿದರೆ ತಪ್ಪು, ಬಿಜೆಪಿ ಮಾಡಿದರೆ ಸರಿ ಎನ್ನುವ ಆಷಾಢಭೂತಿತನವನ್ನು ಅವರು ಪ್ರದರ್ಶಿಸುತ್ತಿದ್ದಾರೆ. ಸರ್ಕಾರವು ದೇಶದ ಶೇ.95 ಜನರ ಪರವಾಗಿ ಕೆಲಸ ಮಾಡಬೇಕಾ ಬೇಡವಾ ಎನ್ನುವ ಚರ್ಚೆಯೇ ಅರ್ಥಹೀನ.

ಇದನ್ನೂ ಓದಿರಿ: ಮಾಧ್ಯಮ ಗ್ಯಾರಂಟಿ ಅಂಕಿಅಂಶ ವಿಶ್ಲೇಷಿಸ್ತಿಲ್ಲ: ಡಾ ಬಿ.ಸಿ.ಬಸವರಾಜ

ಈಗ ವಿಕಾಸವಾಗುತ್ತಿರುವ ಕರ್ನಾಟಕ ಮಾದರಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳ ಕುರಿತಂತೆ ಹೆಮ್ಮೆಯಿಂದ (ಮುಂಬಾಗಿಲಿನಿಂದಲೇ) ಹೇಳಿಕೊಳ್ಳುವ ಧೈರ್ಯವಿದೆ. ಇದು ಸಕಾರಾತ್ಮಕವಾದುದು. ಈ ಸರ್ಕಾರಕ್ಕೆ ಇನ್ನೂ ಒಂದು ಧೈರ್ಯವಿದೆ. ಅದು ಸಣ್ಣ ಸಂಖ್ಯೆಯಲ್ಲಿರುವ ಬಲಾಢ್ಯ ಸಮುದಾಯಗಳ ಹಿಡಿತದಿಂದ ರಾಜ್ಯದ ಅಧಿಕಾರವನ್ನು ತಪ್ಪಿಸುವುದು. ಆದರೆ, ಇದು ಜಗಳದ ವಿಚಾರವೇ ಆಗಬೇಕಿಲ್ಲ. ಶೇ.20ರಷ್ಟಿರುವ ಜನರು ಶೇ.80ರಷ್ಟು ಹುದ್ದೆಗಳನ್ನು ಪಡೆದುಕೊಳ್ಳುವುದಾದರೆ ಪ್ರಶ್ನಿಸಲೇಬೇಕು.

ಇದರ ಜೊತೆಗೆ ಪರಿಸರ ಪೂರಕ ಕ್ರಮಗಳು ಇದರಲ್ಲಿ ಇದೆಯಾ ಇಲ್ಲವಾ ನನಗೆ ಗೊತ್ತಿಲ್ಲ. ಉತ್ತರ ಭಾರತದಲ್ಲಿ ಆ ಸೂಕ್ಷ್ಮತೆ ಇಲ್ಲ. ನಿಮ್ಮಲ್ಲಿದೆ. ನೀವು ಅದನ್ನು ಮತ್ತಷ್ಟು ಬೆಳೆಸಬೇಕು. ಹಾಗಾಗಿ ಕರ್ನಾಟಕಕ್ಕೆ ಈ ಸಾಮರ್ಥ್ಯ, ಅಂದರೆ ಗುಜರಾತ್‌ ಮಾದರಿಗೆ ಪರ್ಯಾಯವಾದ ಮಾದರಿಯನ್ನು ಸೃಷ್ಟಿಸುವ ಸಾಮರ್ಥ್ಯವಿದೆ. ಬೇರೆ ಕಡೆಯಲ್ಲೂ ಪುನರಾವರ್ತಿಸಬಹುದಾದ ಪರ್ಯಾಯ, ರಾಜಕೀಯವಾಗಿ ಸುಸ್ಥಿರವಾದದ್ದು, ಆರ್ಥಿಕವಾಗಿ ಸಾಧ್ಯವಿರುವಂಥದ್ದು.
ಅದು ಈಗಾಗಲೇ ಆಗಿಬಿಟ್ಟಿದೆಯಾ? ನಿಮಗೆ ಗೊತ್ತಿದೆ. ಆದರೆ, ಅಂಥದ್ದೊಂದು ಸಾಧ್ಯ ಎಂದಷ್ಟೂ ನಾವು ಹೇಳಲೇಬೇಕು. ಈ ಸರ್ಕಾರದ ಮೇಲೆ ಒತ್ತಡವನ್ನೂ ಹಾಕಬೇಕು.

ಒಮ್ಮೆ ಈ ಮಾದರಿ ಅಂದರೆ ಕರ್ನಾಟಕ ಮಾದರಿ ಜಾರಿಯಾದರೆ, ಅದು ಬೇರೇನೂ ಅಲ್ಲ. ಭಾರತದ ಸಂವಿಧಾನದ ಮುನ್ನುಡಿಯ ಅಭಿವ್ಯಕ್ತಿಯಲ್ಲದೇ ಇನ್ನೇನೂ ಅಲ್ಲ. ನಾನು ಸಾಕಷ್ಟು ಕಾಲದಿಂದ ʼದಕ್ಷಿಣಾಯನʼದ ಬಗ್ಗೆ ಹೇಳುತ್ತಿದ್ದೇನೆ. ನಮ್ಮಲ್ಲಿ ಉತ್ತರ ಭಾರತೀಯರು ಈ ದೇಶ ಹೇಗೆ ನಡೆಯಬೇಕೆಂದು ಹೇಳುತ್ತಿದ್ದರು. ಅದು ಕೆಲಸ ಮಾಡಿಲ್ಲ.
ಹಾಗಾಗಿ ಇದನ್ನು ಬದಲಿಸಬೇಕು. ಈಗ ದಕ್ಷಿಣದಿಂದ ಶುರು ಮಾಡಬೇಕು. ಕರ್ನಾಟಕ ಮಾದರಿಯು ಸಾಕಾರವಾದರೆ ಅದು ದಕ್ಷಿಣಾಯನ ಸಂದರ್ಭವನ್ನು ರೂಪಿಸುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

Download Eedina App Android / iOS

X