ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಮಳೆ ಸುರಿದಿದೆ. ಕಳೆದ 125 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದೆ. 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲ ಮಳೆ ಅಬ್ಬರದಿಂದ ಉಂಟಾಗುತ್ತಿರುವ ಅನಾಹುತಗಳು ಮತ್ತು ಅಗತ್ಯ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ರಾಜ್ಯದಲ್ಲಿ 67 ಮಂದಿ ಮಳೆ ಅನಾಹುತಗಳಿಂದ ಸಾವನ್ನಪ್ಪಿದ್ದಾರೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಮುಂಗಾರು ಪೂರ್ವ ಮಳೆ ಮಾರ್ಚ್ ತಿಂಗಳಿನಲ್ಲಿಯೇ ಆರಂಭವಾಗಿತ್ತು. ಇದೀಗ, ಜೂನ್ ಮೊದಲ ವಾರದಲ್ಲಿ ರಾಜ್ಯವನ್ನು ಪ್ರವೇಶಿಸಬೇಕಿದ್ದ ಮುಂಗಾರು ಮಾರುತಗಳು 10 ದಿನ ಮುನ್ನವೇ ರಾಜ್ಯವನ್ನು ಪ್ರವೇಶಿಸಿವೆ. ಪರಿಣಾಮ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಜೊತೆಗೆ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿದಿದ್ದು, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ರಾಜ್ಯದ ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಅದರಲ್ಲೂ, ದಕ್ಷಿಣ ಕನ್ನಡ ಜಿಲ್ಲೆಯು ತತ್ತರಿಸಿ ಹೋಗಿದ್ದು, ಸಾವು-ನೋವು, ನಷ್ಟ ಸಂಭವಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ, ಗೋಡೆ ಕುಸಿತ, ಮಳೆ ಪ್ರವಾಹಗಳು ಎದುರಾಗಿವೆ. ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.