ಒಮ್ಮೊಮ್ಮೆ ಬರದಿಂದ ತತ್ತರಿಸುವ ಅನ್ನದಾತರು, ಮಗದೊಮ್ಮೆ ನೆರೆಯಿಂದ ಸಂಕಷ್ಟ ಅನುಭವಿಸುತ್ತಾರೆ. ಇದರ ನಡುವೆ ಎಲ್ಲ ಸರಿಯಾಗಿ ಉತ್ತಮ ಇಳುವರಿ ಬಂತು ಎನ್ನುತ್ತಿರುವಾಗಲೇ ಸಮರ್ಪಕ ಬೆಲೆ ಸಿಗದೆ ಕಂಗಾಲಾಗುವ ಪರಿಸ್ಥಿತಿ ಎದುರಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ರೈತರು ಗೋವಿನಜೋಳ ಬೆಳೆದಿದ್ದು, ಉತ್ತಮ ಬೆಳೆ ಬಂದಿದೆ. ಆದರೆ ಬೆಲೆ ಕುಸಿದಿರುವುದರಿಂದ ರೈತರಲ್ಲಿ ಆತಂಕ ಮೂಡಿಸಿದೆ. ಆರಂಭದಲ್ಲಿ ₹3000ದಿಂದ ₹2800ದವರೆಗೆ ಇದ್ದ ಬೆಲೆ ಸದ್ಯ ₹2300ಕ್ಕೆ ಇಳಿದಿದ್ದು, ರೈತರು ಸರ್ಕಾರದ ಬೆಂಬಲ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜೊತೆ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ರೈತ ರಮೇಶ್ ಚಾಕಲಬ್ಬಿ ಮಾತನಾಡಿ, “ನಾವು ಸುಮಾರು 16 ಎಕರೆ ಭೂಮಿಯಲ್ಲಿ ಗೋವಿನಜೋಳ ಬೆಳೆದಿದ್ದೇವೆ. ಪ್ರತಿ ಎಕರೆಗೆ 20,000ದಿಂದ ₹25,000 ರೂಪಾಯಿಗಳವರೆಗೆ ಖರ್ಚಾಗುತ್ತದೆ. ಗೋವಿನಜೋಳ ತೆನೆ ಮುರಿಯಲು ಮತ್ತು ರಾಶಿ ಮಾಡಲು ಕೂಲಿ ಆಳುಗಳೂ ಕೂಡಾ ಸರಿಯಾಗಿ ಸಿಗುವುದಿಲ್ಲ. ಇದರಿಂದಾಗಿ ತೆನೆ ಮುರಿದು ರಾಶಿ ಮಾಡಲು ಯಂತ್ರದ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ” ಎಂದು ಹೇಳಿದರು.
“ಒಂದು ಎಕರೆಯ ಜೋಳ ರಾಶಿ ಮಾಡಲು ಕಟ್ರಾ ಮೆಶಿನ್‌ಗೆ ₹3,200 ಕೊಡಬೇಕು. ಇದೀಗ ಮಳೆ ಹೆಚ್ಚಾಗಿದ್ದು, ರಾಶಿ ಮಾಡಿದ ಕಾಳುಗಳನ್ನು ರಕ್ಷಣೆ ಮಾಡಿಕೊಳ್ಳಲು ಒದ್ದಾಡುತ್ತಿದ್ದೇವೆ. ಸರ್ಕಾರವು ಬೆಂಬಲ ಬೆಲೆ ನೀಡುವುದಾಗಿ ತಿಳಿಸಿತ್ತು. ಆದರೆ ಈವರೆಗೂ ಯಾವುದೇ ಬೆಂಬಲ ಬೆಲೆ ಸಿಗದೆ ರೈತರು ಆತಂಕಪಡುವ ಪರಿಸ್ಥಿತಿ ಇದೆ” ಎಂದು ತಿಳಿಸಿದ್ದಾರೆ.

ರಾಮದುರ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ಗೋವಿನ ಜೋಳದ ಬೆಲೆ ಒಂದು ಕ್ವಿಂಟಾಲ್‌ಗೆ ₹2,350ರವರೆಗೆ ಬೆಲೆಯಿದ್ದು, ಮಾರುಕಟ್ಟೆಗೆ ಗೋವಿನಜೋಳ ಬರುವ ಪ್ರಮಾಣದ ಮೇಲೆ ಬೆಲೆಯ ಏರಿಳಿತವಾಗುವ ಸಾಧ್ಯತೆ ಇದೆ
ಕರ್ನಾಟಕ ರಾಜ್ಯ ರೈತ ಸಂಘಟನೆಯ ಬಾಳಪ್ಪ ಪಾಟೀಲ ಮಾತನಾಡಿ, “ಮಾರುಕಟ್ಟೆಯಲ್ಲಿ ರೈತರು ಬೆಳೆದ ಗೋವಿನಜೋಳದ ಬೆಳೆಗೆ ಸರಿಯಾದ ಬೆಲೆ ನೀಡುತ್ತಿಲ್ಲ. ರೈತರಿಗೆ ಅನ್ಯಾಯವಾಗುತ್ತಿದೆ. ಮಾರುಕಟ್ಟೆಯಲ್ಲಿ ₹2,800 ರಿಂದ ₹3000ದವರೆಗೆ ಬೆಲೆ ಇರಬೇಕಿತ್ತು. ಆದರೆ ಬೆಲೆ ಕಡಿಮೆ ಮಾಡಿದ್ದಾರೆ. ಸರ್ಕಾರವು ಮಧ್ಯೆ ಪ್ರವೇಶಿಸಿ ವೈಜ್ಞಾನಿಕ ಬೆಲೆ ನಿಗದಿ ಮಾಡಿ ರೈತರ ನೆರವಿಗೆ ಬರಬೇಕು” ಎಂದು ತಿಳಿಸಿದರು.

ಹಾಸನ, ಚಿತ್ರದುರ್ಗ, ಮಂಡ್ಯ ಜಿಲ್ಲೆ ಸೇರಿದಂತೆ ಇತರೆ ಭಾಗಗಳಲ್ಲಿ ಸಾಂಪ್ರದಾಯಿಕ ಬೆಳೆಗಳಿಗೆ ಅನುಗುಣವಾಗಿ ರೈತರು ಮೆಕ್ಕೆಜೋಳ ಬೆಳೆಯಲು ಆರಂಭಿಸಿದ್ದಾರೆ. ಪ್ರಸ್ತುತ ದಿನಗಳಲ್ಲಿ ಕೃಷಿ ಮಾಡುವುದು ದುಬಾರಿಯಾಗಿದ್ದು, ಕೊನೆಯಲ್ಲಿ ಸರಿಯಾದ ಬೆಲೆ ಸಿಗದ ಕಾರಣ ರೈತರು ಮೆಕ್ಕೆಜೋಳ ಬೆಳೆಯಲು ಮುಂದಾಗಿದ್ದಾರೆ.

ಕೃಷಿ ಪರಿಕರಗಳು, ಕೂಲಿ, ಬೀಜ ಗೊಬ್ಬರಗಳ ಬೆಲೆ ದುಬಾರಿಯಾಗಿದ್ದು, ಅತಿವೃಷ್ಠಿ, ಅನಾವೃಷ್ಠಿಗಳು ತಲೆದೋರುತ್ತವೆ. ಈ ನಡುವೆ, ಜೋಳ ಬೆಳೆಯಲು ಕಡಿಮೆ ವೆಚ್ಚ ಮತ್ತು ಸುಲಭವಾಗಿರುವುದರಿಂದ ಬಹುತೇಕ ರೈತರು ಜೋಳ ಬೆಳೆಯುತ್ತಿದ್ದಾರೆ. ಈ ಬಾರಿ ರಾಜ್ಯಾದ್ಯಂತ 15,40,000 ಎಕರೆ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡುವುದಾಗಿ ನಿರೀಕ್ಷಿಸಲಾಗಿದ್ದು, 8,98,900 ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ. ಕಳೆದ ವರ್ಷ ರಾಜ್ಯಾದ್ಯಂತ 1,25,400 ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲಾಗಿತ್ತು.

ಮಂಡ್ಯ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಬೆಳೆಯಾದ ಕಬ್ಬು ಬೆಳೆಯನ್ನು ಅತಿಯಾಗಿ ಬೆಳೆಯುತ್ತಾರೆ. ಆದರೆ, ಪ್ರಸ್ತುತ ದಿನಗಳಲ್ಲಿ ಸಕ್ಕರೆ ನಾಡಿನಲ್ಲಿಯೂ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಕಳೆದ ವರ್ಷ 800 ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲು ನಿರೀಕ್ಷಿಸಲಾಗಿದ್ದು, 68 ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲಾಗಿತ್ತು. ಪ್ರಸ್ತುತ ವರ್ಷದಲ್ಲಿ 1000 ಎಕರೆ ಪ್ರದೇಶದಲ್ಲಿ ಜೋಳ ಬೆಳೆಯುವ ಗುರಿ ಹೊಂದಿದ್ದು, 594 ಎಕರೆಯಲ್ಲಿ ಜೋಳ ಬೆಳೆದಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಈರುಳ್ಳಿ ಬೆಳೆ ಬೆಳೆಯಲಾಗುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಅಲ್ಲಿಯ ರೈತರೂ ಕೂಡ ಜೋಳದ ಬೆಳೆಯ ಮೊರೆ ಹೋಗಿದ್ದಾರೆ. ಜಿಲ್ಲಾದ್ಯಂತ 90,385 ಎಕರೆ ಪ್ರದೇಶದಲ್ಲಿ ಗುರಿ ಹೊಂದಲಾಗಿತ್ತು. ಆದರೆ, ಗುರಿಗಿಂತಲೂ ಅಧಿಕವಾಗಿ ಜೋಳ ಬೆಳೆದಿದ್ದು, 1,02,397 ಎಕರೆ ಪ್ರದೇಶದಲ್ಲಿ ನಿರೀಕ್ಷೆಗಿಂತ ಅಧಿಕವಾಗಿ ಜೋಳ ಬೆಳೆದಿದ್ದಾರೆ.

ಸಾಲ ಮಾಡಿ ಬೀಜ, ಗೊಬ್ಬರ ಹಾಕಿ ಹಗಲಿರುಳು ಬೆವರು ಸುರಿಸಿ ರೈತರು ಶ್ರಮದಿಂದ ಮೆಕ್ಕೆಜೋಳ ಬೆಳೆದಿದ್ದಾರೆ. ಫಸಲೂ ಕೂಡ ಉತ್ತಮವಾಗಿ ಬಂದಿದೆ. ಆದರೆ, ಜೋಳ ಬೆಳೆಯುವ ಪ್ರಮಾಣ ಅಧಿಕವಾಗಿವುದರಿಂದ ಹಾಗೂ ಮೆಕ್ಕೆಜೋಳ ರಫ್ತು ವಹಿವಾಟಿನಲ್ಲೂ ಬೇಡಿಕೆ ಕಡಿಮೆಯಾಗಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.