ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಸಾವಂತವಾಡಾ ಹೋಬಳಿ ವ್ಯಾಪ್ತಿಯಲ್ಲಿರುವ ಸದಾಶಿವಗಡದಲ್ಲಿ ಮಂಗಳವಾರ ಉಷ್ಣಾಂಶ 41.3 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ರಾಜ್ಯದಲ್ಲೇ ಗರಿಷ್ಠ ತಾಪಮಾನ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (ಕೆಎಸ್‌ಎನ್ಎಂಡಿಸಿ) ಮಾಹಿತಿ ನೀಡಿದೆ.
ಕರಾವಳಿಯ ಮೂರು ಜಿಲ್ಲೆಗಳ ಏಳು ಸ್ಥಳಗಳಲ್ಲಿ ಸರಾಸರಿ ಉಷ್ಣಾಂಶ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ಮೀರಿದೆ. ಉತ್ತರ ಕನ್ನಡ ಜಿಲ್ಲೆಯ 6, ದಕ್ಷಿಣ ಕನ್ನಡದ 4, ಉಡುಪಿಯ 2 ಹಾಗೂ ರಾಯಚೂರು ಜಿಲ್ಲೆಯ 1 ಕಡೆಯಲ್ಲಿ ಸರಾಸರಿ ಉಷ್ಣಾಂಶ ಸರಾಸರಿ 39 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿತ್ತು ಎಂದು ನೈಸರ್ಗಿಕ ವಿಕೋಪ ನಿಗಾ ಕೇಂದ್ರ ತಿಳಿಸಿದೆ.
ಚಳಿ ಕಡಿಮೆಯಾಗಿ, ಏಕಾಏಕಿ ಸೆಕೆಯ ವಾತಾವರಣ ಆವರಿಸುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಕರಾವಳಿ ಭಾಗದಲ್ಲಿ ಉಷ್ಣಾಂಶ ಕಡಿಮೆ ಇದ್ದರೂ ಆರ್ದ್ರತೆ ಅಧಿಕ ಇರುವ ಕಾರಣ ಸೆಕೆ ಹೆಚ್ಚಿತ್ತು. ಈಗ ಉಷ್ಣಾಂಶ ಅಧಿಕ ಆಗಿರುವುದಿಂದ ಸೆಕೆ ಹೆಚ್ಚಾಗಬಹುದು ಎಂಬ ಆತಂಕವಿದೆ.
ಮೂರು ಜಿಲ್ಲೆಗಳಿಗೆ ಬಿಸಿಗಾಳಿ ಎಚ್ಚರಿಕೆ
ರಾಜ್ಯದ ಬಹುತೇಕ ಕಡೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚುತ್ತಿರುವ ಬೆನ್ನಲ್ಲೇ ಕರಾವಳಿಯ 3 ಜಿಲ್ಲೆಗಳಿಗೆ ಬುಧವಾರದಿಂದ ಮೂರು ದಿನಗಳ ಕಾಲ ಬಿಸಿಗಾಳಿಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
#ಬಿಸಿಗಾಳಿ ಮುನ್ಸೂಚನೆ ಮತ್ತು ಸಲಹೆಗಳು: ಇಂದು ಮತ್ತು ನಾಳೆ ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಗಾಳಿ ಮತ್ತು ಆರ್ದ್ರ ಪರಿಸ್ಥಿತಿಗಳು ಹೆಚ್ಚಾಗಿರೋ ಸಾಧ್ಯತೆಯಿದೆ.@KarnatakaVarthe #ರಣಬಿಸಿಲು #ಶಾಖತರಂಗ #ಸುರಕ್ಷಿತವಾಗಿರಿ #ಮುನ್ನೆಚ್ಚರಿಕೆವಹಿಸಿ #KSNDMC #KarnatakaRains pic.twitter.com/SoADNUo0oM
— Karnataka State Natural Disaster Monitoring Centre (@KarnatakaSNDMC) February 26, 2025
ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಖಾ ಅಲೆ ಕಾಣಿಸಿಕೊಳ್ಳುವ ಸಂಭವವಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಹಲವೆಡೆ ಉಷ್ಣಾಂಶವು ಸಾಮಾನ್ಯಕ್ಕಿಂತ ಐದು ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಳವಾಗುವ ಬಗ್ಗೆ ಅಂದಾಜಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
