ಕಾರವಾರ ತಾಲೂಕಿನ ಶೇಜವಾಡದಲ್ಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣವಾಗಿ ವರ್ಷಗಳು ಉರುಳುತ್ತಿದ್ದರೂ ಈವರೆಗೆ ಕಟ್ಟಡವನ್ನು ಬಳಕೆಗೆ ನೀಡದೆ ಪಾಳುಬಿಳುತ್ತಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸುಮಾರು 2 ಕೋಟಿ ವೆಚ್ಚದಲ್ಲಿ 2018ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ನಗರದ ಬಾಡಿಗೆ ಕಟ್ಟಡವೊಂದರಲ್ಲಿ ಬಾಲಕರ ನಿಲಯ ನಡೆಸುತ್ತಿದ್ದು ವಾರ್ಷಿಕವಾಗಿ ಲಕ್ಷಾಂತರ ರೂ. ಬಾಡಿಗೆಯನ್ನು ಕಟ್ಟಲಾಗುತ್ತಿದೆ. ಕೋಟ್ಯಂತರ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದರೂ ಈ ಸೌಲಭ್ಯ ಉಪಯೋಗಕ್ಕೆ ಇಲ್ಲದಂತಾಗಿದೆ. ಬಳಕೆಯಾಗದೆ, ಕಟ್ಟಡದ ಆವರಣದಲ್ಲಿ ಆಳೆತ್ತರದವರೆಗೆ ಗಿಡಗಂಟಿಗಳು ಬೆಳೆದು ನಿಂತಿವೆ.
ಶಿರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಜವಾಡದಲ್ಲಿನ ಗಜನಿ ಭೂಮಿಯಲ್ಲಿ ಕಟ್ಟಡ ನಿರ್ಮಿಸಿರುವುದಕ್ಕೆ ಆರಂಭದಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಮಳೆಗಾಲದಲ್ಲಿ ಈ ಪ್ರದೇಶ ಜಲಾವೃತಗೊಳ್ಳುವ ಸಮಸ್ಯೆ ಎದುರಿಸುತ್ತಿದೆ. ಅಲ್ಲದೆ ಜನವಸತಿಯಿಂದ ದೂರವಿರುವ ಜಾಗದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಿರುವುದಕ್ಕೂ ಜನರ ವಿರೋಧವಿದೆ.
ಕಟ್ಟಡ ಪೂರ್ಣಗೊಂಡರೂ ವಿದ್ಯುತ್ ಸಂಪರ್ಕ, ರಸ್ತೆ ಸೌಕರ್ಯ ಇರಲಿಲ್ಲ. ಇತ್ತೀಚೆಗೆ ವಿದ್ಯುತ್ ಸಂಪರ್ಕ, ಕಟ್ಟಡದ ದುರಸ್ತಿಗೆ ಕೆಆರ್ಐಡಿಎಲ್‌ಗೆ ಕಾರ್ಯಾದೇಶ ನೀಡಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಎಫ್.ಯು.ಪೂಜಾರ ಮಾದ್ಯಮಗಳಿಗೆ ಉತ್ತರಿಸಿದ್ದು, ಮುಖ್ಯ ರಸ್ತೆಯಿಂದ ವಿದ್ಯಾರ್ಥಿ ನಿಲಯಕ್ಕೆ ರಸ್ತೆ ನಿರ್ಮಿಸಲು 47ಲಕ್ಷ ರೂ. ಪ್ರಸ್ತಾವ ಸಲ್ಲಿಸಲಾಗಿದೆ ಎಂದಿದ್ದಾರೆ.
ಕೋಟ್ಯಂತರ ರೂ. ಅನುದಾನ ಬಳಸಿ ಯೋಜನೆ ರೂಪಿಸುವ ಮೊದಲು ಮೂಲಸೌಕರ್ಯಗಳ ಬಗ್ಗೆ ಗಮನಹರಿಸಿಲ್ಲ. ರಸ್ತೆಯೇ ಇಲ್ಲದ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ನಿರ್ಜನವಾಗಿರುವ ಮತ್ತು ಗಜನಿ ಭೂಮಿಯಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಿರುವುದು ಸರಿಯಲ್ಲ. ಕಟ್ಟಡ ನಿರ್ಮಿಸಿ ನಾಲ್ಕು ವರ್ಷ ಕಳೆದರೂ ಅಗತ್ಯ ವ್ಯವಸ್ಥೆ ಕಲ್ಪಿಸದೇ ಖಾಸಗಿ ಕಟ್ಟಡದಲ್ಲಿ ವಿದ್ಯಾರ್ಥಿ ನಿಲಯ ನಡೆಸುತ್ತಿದ್ದು ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸುತ್ತಾರೆ.