ಕಾರವಾರ ನಗರಸಭೆ ಮಾಜಿ ಸದಸ್ಯ ಸತೀಶ್ ಕೊಳಂಬಕರ್ ಹತ್ಯೆ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಮೇಲೆ ಎಸ್‌ಐ ಸೇರಿ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಕಾರವಾರ ಪೊಲೀಸ್ ಠಾಣೆಯ ಎಸ್‌ಐ, ಇಬ್ಬರು ಗುಪ್ತ ಮಾಹಿತಿ ವಿಭಾಗದ ಸಿಬ್ಬಂದಿ, ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮನತು ಮಾಡಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಆದೇಶಿಸಿದ್ದಾರೆ.
ನಗರಸಭೆ ಮಾಜಿ ಸದಸ್ಯ ಸತೀಶ್ ಹೆಸರು ರೌಡಿಶೀಟರ್‌ಗಳ ಪಟ್ಟಿಯಲ್ಲಿತ್ತು. ಹೀಗಾಗಿ, ಅವರ ಚಲನವಲನದ ಮೇಲೆ ನಿಗಾ ಇಡಬೇಕಿತ್ತು. ಆದರೆ, ಅವರ ಮೇಲೆ ಪೊಲೀಸರು ನಿಗಾ ಇಟ್ಟಿರಲಿಲ್ಲ ಎಂದು ಆರೋಪಿಸಲಾಗಿದೆ.
ಮೃತ ಸತೀಶ್ ಮತ್ತು ಹತ್ಯೆ ಆರೋಪಿ ನಿತೇಶ್ ನಡುವೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಇತ್ತು. ಸತೀಶ್ ವಿರುದ್ಧ ನಿತೇಶ್ ಕೆಲವು ತಿಂಗಳ ಹಿಂದೆಯೇ ದೂರು ದಾಖಲಿಸಿದ್ದರು. ಆದರೆ, ಪ್ರಕರಣದ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ಧೋರಣೆ ಹೊಂದಿದ್ದರು. ಅವರ ನಿರ್ಲಕ್ಷ್ಯವೂ ಕೊಲೆಗೆ ದಾರಿ ಮಾಡಿಕೊಟ್ಟಿದೆ ಎಂದು ದೂರಲಾಗಿದೆ.
ತನಿಖೆಯಲ್ಲಿ ನಿರ್ಲಕ್ಷ್ಯ, ಕರ್ತವ್ಯಲೋಪ ಆರೋಪದ ಮೇಲೆ ಎಸ್‌ಐ ಸೇರಿ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.