ಬೀದರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ಶನಿವಾರ ಬೀದರ್ ಉತ್ತರ ಕ್ಷೇತ್ರದ ಚಿಮಕೋಡ್, ಮಾಳೆಗಾಂವ, ಜನವಾಡ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
“ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಆಗಿರುವ ಅಭಿವೃದ್ಧಿಯನ್ನು ನೋಡಿ ಮತ ನೀಡಿ, ದೇಶದ ಅಭಿವೃದ್ದಿಗೆ, ರಕ್ಷಣೆಗೆ ಮೋದಿ ಬೇಕಾಗಿದ್ದಾರೆ. ದೇಶಕ್ಕೆ ಬೇಕಾಗಿರುವುದು ಬಿಜೆಪಿ ಹಾಗೂ ನರೇಂದ್ರ ಮೋದಿ, ಬೀದರ ಕ್ಷೇತ್ರಕ್ಕೆ ಬೇಕಾಗಿರುವುದು ಬಿಜೆಪಿ ಹಾಗೂ ಭಗವಂತ ಖೂಬಾ, ಇದು ಜನರ ಮನಸ್ಥಿತಿಯಾಗಿದೆ” ಎಂದು ಸಚಿವ ಖೂಬಾ ತಿಳಿಸಿದರು.
“ಕಾಂಗ್ರೆಸ್‌ನಲ್ಲಿ ನನ್ನ ಎದುರು ಸ್ಪರ್ಧಿಸಲು ಸಚಿವ ಈಶ್ವರ ಖಂಡ್ರೆಗೆ ಧೈರ್ಯವಾಗಲಿಲ್ಲ, ಆದರೆ ಅಧಿಕಾರ ಬೇರೆಯವರ ಮನೆಗೂ ಕೊಡಲು ಮನಸ್ಸಿರಲಿಲ್ಲ, ಆದ್ದರಿಂದ ಕಾಂಗ್ರೆಸ್‌ನಲ್ಲಿರುವ ಹಿರಿಯ ಮುಖಂಡರಿಗೆ ಮೂಲೆಗುಂಪು ಮಾಡಿ, ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿದ್ದಾರೆ. ಸಚಿವ ಈಶ್ವರ ಖಂಡ್ರೆ ಒಬ್ಬ ಸ್ವಾರ್ಥ ರಾಜಕಾರಣಿ” ಎಂದು ಖಂಡ್ರೆ ವಿರುದ್ಧ ಕಿಡಿಕಾರಿದರು.
“ಈಶ್ವರ ಖಂಡ್ರೆಗೆ ತನ್ನ ಮಗನ ಮೇಲಿನ ವ್ಯಾಮೋಹದಿಂದ ಕಾಂಗ್ರೆಸ್ ಕಾರ್ಯಕರ್ತರು ಬಲಿಯಾಗುತ್ತಿದ್ದಾರೆ. ಇವರಿಗೆ ಸತ್ಯ ಹಾಗೂ ಸುಳ್ಳಿನ ಮಧ್ಯದ ಅಂತರ ಗೊತ್ತಾಗುತ್ತಿಲ್ಲ, ಜಿಲ್ಲೆಯಲ್ಲಿ ಎಫ್.ಎಮ್ ಕೇಂದ್ರ ಪ್ರಾರಂಭವಾಗಿದೆ. ಜನ ಎಫ್. ಎಮ್ ಆಲಿಸುತ್ತಿದ್ದಾರೆ. ಸಿಪೇಟ್ ಕಾಲೇಜು ಪ್ರಾರಂಭವಾಗಿದೆ, ಬಿ.ಎಸ್.ಯಡಿಯೂರಪ್ಪ ನೇತ್ರತ್ವದ ಸರ್ಕಾರವಿದ್ದಾಗ ಬೀದರ್ ಏರಪೋರ್ಟ್ ನಾನು ಪ್ರಾರಂಭಿಸಿರುವೆ, ಆದರೆ ಖಂಡ್ರೆ ಇದ್ಯಾವುದು ಆಗಿಲ್ಲ ಅಂತಾರೆ. ಇಂತಹ ಸುಳ್ಳು ಹೇಳುವ ವ್ಯಕ್ತಿಯ ಕುಟುಂಬಕ್ಕೆ ತಾವ್ಯಾರು ಬೆಂಬಲಿಸಬಾರದು” ಎಂದು ವಿನಂತಿಸಿದರು.
ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪೂರೆ ಮಾತನಾಡಿ, “ಭಗವಂತ ಖೂಬಾ ಅವರು ಬೀದರ್ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ದಿ ಕಾರ್ಯಗಳು ಹಿಂದೆ ಯಾರು ಮಾಡಿಲ್ಲ, ಮೊದಲ ಬಾರಿ ಬೀದರ ಕ್ಷೇತ್ರದಿಂದ ಕೇಂದ್ರ ಮಂತ್ರಿ ಆಗಿದ್ದಾರೆ. ಇವರಿಗೆ ಮತ್ತೊಮ್ಮೆ ಗೆಲ್ಲಿಸಿ” ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, “ಬೀದರ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಖೂಬಾ ಅವರನ್ನು ಗೆಲ್ಲಿಸುವುದು ಅವಶ್ಯಕವಾಗಿದೆ. 60 ವರ್ಷದಿಂದ ದೇಶ ಹಾಗೂ ಬೀದರ ಜಿಲ್ಲೆಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಅಧಿಕಾರದಿಂದ ದೂರವಿಡಬೇಕು” ಎಂದು ಹೇಳಿದರು.
ಈ ಸುದ್ದಿ ಒದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಕಾಲದಲ್ಲಿ ಮೋದಿಯ ಬಾಂಡ್ ಭಯೋತ್ಪಾದನೆ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕ ಎಮ್.ಜಿ.ಮೂಳೆ, ಮಂಡಲ ಅಧ್ಯಕ್ಷ ರಾಜೇಂದ್ರ ಪೂಜಾರಿ, ಮುಖಂಡರಾದ ಪೀರಪ್ಪ ಯರನಳ್ಳಿ, ಉಪೇಂದ್ರ ದೇಶಪಾಂಡೆ, ವಿಶ್ವನಾಥ ಪಾಟೀಲ್ ಮಾಡಗೂಳ, ಅರವಿಂದ ಪಾಟೀಲ್ ಚಿಲ್ಲರ್ಗಿ, ವಿಜಯಕುಮಾರ ಪಾಟೀಲ್ ಗಾದಗಿ, ಸುರೇಶ ಮಾಶೆಟ್ಟಿ, ಅಶೋಕ ಪಾಟೀಲ್, ದೀಪಕ ಅಲಿಯಂಬರ, ರವಿ ಚಿನ್ನಪ್ಪನೊರ, ಶಿವಕುಮಾರ ಸ್ವಾಮಿ, ಸಂದೀಪ ಪಸಾರಗೆ, ದಿನೇಶ ಮೂಲಗೆ, ನಿಜಲಿಂಗಪ್ಪ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.