ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕು, ಕಸಬಾ ಹೋಬಳಿಯ ಮುದ್ದಹಳ್ಳಿ, ಏಲಚಗೆರೆ ಮತ್ತು ಸಿಂಧುವಳ್ಳಿಪುರ ಗ್ರಾಮಗಳಲ್ಲಿ ಸರಿ ಸುಮಾರು 448.38 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂಸ್ವಾಧೀನಪಡಿಸಿಕೊಂಡು, ರೈತರ ವಿರೋಧದ ನಡುವೆಯೂ ಭೂದರ ನಿಗದಿಪಡಿಸಿ ಭೂಮಿ ಕಬಳಿಸಲು ಮುಂದಾಗಿದೆ.
ಕೆಲ ದಿನಗಳಿಂದ ಸದ್ದಿಲ್ಲದೆ ಸುಮ್ಮನಿದ್ದ ಕೆಐಎಡಿಬಿ ದಲ್ಲಾಳಿಗಳ ಮೂಲಕ ರೈತರಿಂದ ಬಲವಂತವಾಗಿ ಫಲವತ್ತಾದ 448.38 ಎಕರೆ ಜಮೀನನ್ನು ಕಬಳಿಸಲು, ರೈತರಿಗೆ ಜುಲೈ. 2 ರಂದು ಮದ್ಯಾಹ್ನ 12 ಗಂಟೆ ಸಮಯಕ್ಕೆ ನಂಜನಗೂಡು ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಅಧಿಸೂಚಿತ ಖಾತೆದಾರರು ಗುರುತಿನ ಚೀಟಿಯೊಂದಿಗೆ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಕೆಐಎಡಿ ಕಾಯ್ದೆ 1966 ಕಲಂ 28(4) ರ ಸರ್ಕಾರಿ ಅಧಿಸೂಚನೆ ಸಂಖ್ಯೆ ಸಿಐ 172 ಎಸ್ಪಿಕ್ಯೂ (ಇ) 2022 ದಿನಾಂಕ-23-11-2022 ರಾಜ್ಯಪತ್ರ ಪ್ರಕಟಗೊಂಡ ದಿನಾಂಕ-28-11-2022 ಉಲ್ಲೇಖ (1) ರಂತೆ ಭೋಸ್ವಾಧೀನಪಡಿಸಿಕೊಂಡಿರುತ್ತಾರೆ.
ಸದರಿ ಜಮೀನುಗಳ ಸಂಭಂದವಾಗಿ ಕಲಂ 29(2) ರಡಿ ಒಪ್ಪಂದದ ದರದ ರೀತ್ಯಾ ಪರಿಹಾರವನ್ನು ನಿರ್ಧಾರಿಸುವ ಬಗ್ಗೆ ಉಲ್ಲೇಖ (2) ರಂತೆ ಸಭೆ ನಡೆಸಲು ವಿಶೇಷ ಜಿಲ್ಲಾಧಿಕಾರಿ, ಕೆಐಎಡಿಬಿ, ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ಭೂದರ ನಿರ್ಧಾರಣ ಸಲಹಾ ಸಮಿತಿ ಸಭೆಯನ್ನು ಕರೆಯಲಾಗಿದೆ.

ಕೆಐಎಡಿಬಿ ರೈತರ ಜಮೀನು ಕಬಳಿಸುವುದು ರೈತರಿಗೆ ಸರಿಯಾಗಿ ಭೂದರದ ಪರಿಹಾರ ವಿತರಿಸದೆ ಸತಾಯಿಸುವುದು. ಅಲ್ಲದೆ, ಭೂಮಿ ಕಳೆದುಕೊಂಡ ಕುಟುಂಬದ ಓರ್ವ ಸದಸ್ಯರಿಗೆ ಉದ್ಯೋಗ ಕಲ್ಪಿಸುವ ಭರವಸೆ ನೀಡಿ ಮೋಸ ಮಾಡುವುದರಲ್ಲಿ ನಿರತವಾಗಿದೆ. ಕೋಚನಹಳ್ಳಿ ರೈತರು ವರ್ಷಾನುಗಟ್ಟಲೆಯಿಂದ ಹೋರಾಟ ಮಾಡುತ್ತಲೇ ಇದ್ದಾರೆ. ಏಷಿಯನ್ ಪೈಂಟ್ಸ್, ಹೊರ ಮಾವು, ಹಿಮ್ಮಾವು, ಮೈಸೂರು ಚಿತ್ರ ನಗರಿ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಭೂ ವಿಚಾರವಾಗಿ ಹೋರಾಟಗಳು ನಡೆಯುತ್ತಲೇ ಇರುವಾಗ ನಂಜನಗೂಡು ಭಾಗದ ಹಳ್ಳಿಗಳ ಕಡೆಗೆ ಕೆಐಎಡಿಬಿ ಮದ್ಯವರ್ತಿಗಳ ಮೂಲಕ ಭೂ ಕಬಳಿಕೆಗೆ ಮುಖ ಮಾಡಿದೆ.
ದಿನಾಂಕ-18-06-2025 ರಂದು ವಿಶೇಷ ಭೂಸ್ವಾಧೀನಾಧಿಕಾರಿ ಸಂಖ್ಯೆ: ಭೂಸ್ವಾ (4) ಸಿ. ಆರ್ /157/2025-26 ರ ಅನುಸಾರ ರೈತರಿಗೆ ನೋಟಿಸ್ ನೀಡಿದ್ದು. ಸಭೆಯಲ್ಲಿ ಕಡ್ಡಾಯವಾಗಿ ಭಾಗಿಯಾಗುವಂತೆ ತಿಳಿಸಿದೆ.
ಮುದ್ದಹಳ್ಳಿ ಗ್ರಾಮದ ರೈತರಾದ ಗುರುಸಿದ್ದಯ್ಯ ಬಿನ್ ತಗಡೂರಯ್ಯ ಅವರಿಗೆ ಸೇರಿದ 4 ಎಕರೆ 13 ಗುಂಟೆ ಭೂಮಿಯನ್ನು ವಶಪಡಿಸಿಕೊಂಡು ಭೂದರ ನಿಗದಿ ಸಭೆಗೆ ಬರುವಂತೆ ನೋಟಿಸ್ ನೀಡಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ?ಕೊಡಗು | ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ; ಈವರೆಗೆ ತಿರುಗಿ ನೋಡದ ಉಸ್ತುವಾರಿ ಸಚಿವರು
ಬೆಂಗಳೂರು ದೇವನಹಳ್ಳಿಯಲ್ಲಿ ನಡೆಯುತ್ತಿರುವ ಸಂಯುಕ್ತ ಹೋರಾಟದಂತೆ ಬಲವಂತವಾಗಿ ನಂಜನಗೂಡು ಭಾಗದಲ್ಲಿ ಕೆಐಎಡಿಬಿ ಭೂಮಿ ಕಬಳಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಹೋರಾಟದ ಮೂಲಕ ಪಾಠ ಕಲಿಸಬೇಕಾಗುತ್ತದೆ ಎಂದು ರೈತರು ಕಿಡಿಕಾರಿದ್ದಾರೆ.