ಓದು ಅಧ್ಯಯನದಿಂದ ಪ್ರಜಾಪ್ರಭುತ್ವವಾದಿ ನಿಲುವು ತಳೆಯುವ ಸಾಧ್ಯತೆಯಿದೆ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಅಧ್ಯಯನ ಅಗತ್ಯ. ಜಗತ್ತಿನಲ್ಲಿ ಜ್ಞಾನ ದಾಸೋಹ ಎಲ್ಲಕ್ಕಿಂತ ದೊಡ್ಡದು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಹೇಳಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯ ಬಸವಕಲ್ಯಾಣ ಶಾಖೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಂಥಪಾಲಕ ಹಾಗೂ ಮಕ್ಕಳ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಾಗೂ ಸದಸ್ಯತ್ವ ಅಭಿಯಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಜ್ಞಾನ ಉತ್ಪಾದಿಸುವ, ಜ್ಞಾನ ಪರಂಪರೆ ಬೆಳೆಸುವ ಕೆಲಸ ಗ್ರಂಥಾಲಯಗಳಿಂದ ನಿರಂತರ ಸಾಧ್ಯʼ ಎಂದರು.
ʼಅಂಬೇಡ್ಕರರು, ಗಾಂಧೀಜಿ ಅವರು ಗ್ರಂಥಾಲಯಗಳ ಸಹವಾಸದಿಂದ ವಿಶ್ವದ ಅತ್ಯಂತ ದೊಡ್ಡ ಜ್ಞಾನಿಗಳು ಎಂದು ಗುರುತಿಸಲ್ಪಡುತ್ತಾರೆ. ಮಕ್ಕಳು ಓದಿ ಜ್ಞಾನ ಪಡೆಯುವ ಮೂಲಕ ಗ್ರಂಥಾಲಯ ಬಳಸಿಕೊಳ್ಳಲಿ. ಮಕ್ಕಳಿಗೆ ಬೋಧಿಸುವ ಇಂದಿನ ಬಹುತೇಕ ಶಿಕ್ಷಕರು ಗ್ರಂಥಾಲಯಗಳಿಗೆ ಬರದೇ ಇರುವುದು ನೋವಿನ ಸಂಗತಿʼ ಎಂದು ಬೇಸರ ವ್ಯಕ್ತಪಡಿಸಿದರು.
ʼಎಲ್ಲ ಗಣ್ಯರ ಜಯಂತಿಗಳು ನೆಪ ಮಾತ್ರಕ್ಕೆ ಆಗದೇ ಅವರ ತತ್ವ ಸಿದ್ಧಾಂತಗಳನ್ನು ಹೊಸ ಪೀಳಿಗೆಗೆ ತಿಳಿಸುವ ಜೊತೆಗೆ ಬದುಕಿನಲ್ಲಿ ಮೈಗೂಡಿಸಿಕೊಳ್ಳುವ ಅಗತ್ಯವಿದೆ. ಅಮೇರಿಕಾದ ಶಿಕ್ಷಣ ಪದ್ಧತಿ ಪ್ರತಿ ವರ್ಷ ಶಿಕ್ಷಕರು ಮಾಡಿದ ಹೊಸ ಸಂಶೋಧನೆ, ಅಧ್ಯಯನ ಮಂಡಿಸಬೇಕು. ಇಲ್ಲದಿದ್ದರೆ ಅವರು ತಮ್ಮ ವೃತ್ತಿಯಲ್ಲಿ ಮುಂದುವರಿಯುವಂತಿಲ್ಲ. ನಮ್ಮಲ್ಲಿ ಅಂಥ ಮಾದರಿಗಳಿಲ್ಲ. ಸಿಬಿಎಸ್ಇ, ರಾಜ್ಯ ಪಠ್ಯಕ್ರಮ ಮೊದಲಾದವುಗಳು ಸೇರಿ ಶಿಕ್ಷಣದಲ್ಲಿ ಹಾಗೂ ಕಲಿಕೆಯಲ್ಲಿ ಎಷ್ಟೊಂದು ತಾರತಮ್ಯ ಕಾಣುತ್ತೇವೆʼ ಎಂದರು.
ಬಸವೇಶ್ವರ ಪದವಿ ಕಾಲೇಜು ಅಧ್ಯಾಪಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಅರಿವಿನ್ನು ವಿಸ್ತರಿಸುವ, ಜ್ಞಾನ ಮಾರ್ಗಗಳನ್ನು ತಿಳಿಸಿಕೊಡುವ ಜೊತೆಗೆ, ಬದುಕಿನಲ್ಲಿ ಹೊಸ ಅಧ್ಯಯನ, ಆವಿಷ್ಕಾರ, ಸಂಶೋಧನೆಗಳಿಗೆ ಗ್ರಂಥಾಲಯ ವೇದಿಕೆಯಾಗಿದೆ. ಶ್ರೇಷ್ಠ ಕೃತಿಗಳ ಒಡನಾಟದಿಂದ ಶ್ರೇಷ್ಠ ವ್ಯಕ್ತಿತ್ವ ಹೊಂದಬಹುದು. ಡಾ.ಬಿ.ಆರ್.ಅಂಬೇಡ್ಕರರು ತಮ್ಮ ಅಗಾಧ ಓದು ಅಧ್ಯಯನಗಳಿಂದ ವಿಶ್ವ ಮಾನ್ಯರಾಗಿದ್ದಾರೆʼ ಎಂದರು.
ʼಗ್ರಂಥಾಲಯಗಳಲ್ಲಿ ದೊರೆಯುವ ಮೂಲ ಕೃತಿಗಳು ಸಂಶೋಧನೆಗೆ ಆಕರವಾಗಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಗಿಂತ ಪುಸ್ತಕಗಳು ಹೆಚ್ಚು ಅಧಿಕೃತತೆ ಹೊಂದಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ಜ್ಞಾನಕ್ಕೆ, ತಿಳುವಳಿಕೆಗೆ ನೆಮ್ಮದಿಯ ಬದುಕಿಗೆ ಓದು ಅಧ್ಯಯನ ಅಗತ್ಯʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಂಥಾಲಯ ಸಹಾಯಕ ನಿಂಗಪ್ಪ ತುಂಬಗಿ ಮಾತನಾಡಿ, ʼಗ್ರಂಥಾಲಯಗಳು ಶ್ರೀ ಸಾಮಾನ್ಯನ ವಿಶ್ವವಿದ್ಯಾಲಯ. ಕೆಕೆಆರ್‌ಡಿ ಅಡಿಯಲ್ಲಿ 2ಕೋಟಿ ಅನುದಾನ ಬಿಡುಗಡೆಯಾಗಿದೆ. ಎರಡು ತಿಂಗಳಲ್ಲಿ ಬಸವಕಲ್ಯಾಣದ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗುತ್ತದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಣಿಪುರದ ನಾಗಾ, ಕುಕಿಗಳೂ ಬುಡಕಟ್ಟು ಜನರು ಎಂದು ಪ್ರಧಾನಿಗೆ ನೆನಪಿಸಬೇಕಿದೆ
ಕಾರ್ಯಕ್ರಮದಲ್ಲಿ ಮುಖಂಡ ಲೋಕೇಶ್ ಕನಕ, ಸಾಹಿತಿ ವೀರಣ್ಣ ಮಂಠಾಳಕರ್, ದೀಪಾಲಿ ಮಾನೆ, ನವನಾಥ ಬಿರಾದಾರ ಸೇರಿದಂತೆ ಓದುಗರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂಬರೀಶ್ ಮೇತ್ರೆ ನಿರೂಪಿಸಿ ಸ್ವಾಗತಿಸಿದರು.