ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಜತೆಗೆ ಉದ್ಯೋಗಾಧಾರಿತ ಕೌಶಲ್ಯಗಳನ್ನು ರೂಢಿಸಿಕೊಂಡು, ಯಶಸ್ವಿ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಡಾ ಮಂತರ್ ಗೌಡ ಸಲಹೆ ನೀಡಿದರು.
ಕೊಡಗು ಜಿಲ್ಲೆಯ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ನಡೆದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಪರಿಷತ್ತು, ಸಾಂಸ್ಕೃತಿಕ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
“ಮುಂದಿನ ಶೈಕ್ಷಣಿಕ ಸಾಲಿನ ಒಳಗಾಗಿ ನೂತನ ಕಟ್ಟಡವನ್ನು ಪೂರ್ಣಗೊಳಿಸಿ, ಮುಂದಿನ ವರ್ಷದಲ್ಲಿ ನೂತನ ಕಟ್ಟಡದಲ್ಲಿ ಕಾಲೇಜು ಪ್ರಾರಂಭಿಸಲಾಗುವುದು” ಎಂದು ತಿಳಿಸಿದರು.
ಪ್ರೊ ಸೀನಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳು ಉದಾತ್ತವಾದ ಆಲೋಚನೆ, ಆತ್ಮವಿಶ್ವಾಸ, ಶಿಸ್ತು, ಸತತ ಅಭ್ಯಾಸ, ಕನಸುಗಳನ್ನು ಸಾಕಾರಗೊಳಿಸುವಲ್ಲಿ ಸತತ ಪರಿಶ್ರಮಪಡಬೇಕಾಗುತ್ತದೆ. ಇದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.
ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಪಿ ಆರ್ ಮಾತನಾಡಿ, “ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ರೂಢಿಸಿಕೊಂಡು ತಮ್ಮ ಗುರಿಸಾಧನೆಗೆ ಪ್ರಯತ್ನ ಪಡಬೇಕು. ಯಾವುದೇ ಕಾರಣಕ್ಕೂ ತಂದೆ ತಾಯಿಗಳಿಗೆ ಅಗೌರವ ತೋರದೆ ಅವರ ಮಾರ್ಗದರ್ಶನದಂತೆ ಮನೆಯಲ್ಲಿ, ಗುರುಗಳ ಮಾರ್ಗದರ್ಶನದಂತೆ ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕು” ಎಂದು ತಿಳುವಳಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಹಿಳೆಯರ ಸಬಲೀಕರಣಕ್ಕೆ ಸಂಜೀವಿನಿ ಕಾರ್ಯಕ್ರಮ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ ಡಿ ಕೆ ಮಾತನಾಡಿ, “ಈ ದಿನ ಉದ್ಘಾಟನೆಗೊಂಡಿರುವ ಸಾಂಸ್ಕೃತಿಕ ಮತ್ತು ಕ್ರೀಡೆ, ಮತ್ತಿತರ ಚಟುವಟಿಕೆಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯಾಗಲಿದೆ. ಸಾಧ್ಯವಾದಷ್ಟು ಎಲ್ಲರೂ ತಮಗೆ ದೊರೆತಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇಂಗ್ಲೀಷ್ ಸಹ ಪ್ರಾಧ್ಯಾಪಕ ಎನ್ ಪಿ ಸತೀಶ್, ಗೆಜೆಟೆಡ್ ಮ್ಯಾನೇಜರ್ ಕೆ ಪಿ ರವಿಕಿರಣ್, ದೈಹಿಕ ಶಿಕ್ಷಣ ನಿರ್ದೇಶಕ ರಾಖಿ ಪೂವಣ್ಣ, ವಿದ್ಯಾರ್ಥಿ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.