ದೇಶದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವುದು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್ ಎಸ್ ಬೋಸರಾಜು ತಿಳಿಸಿದರು.
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಹುಬ್ಬಳ್ಳಿಯಲ್ಲಿ ತೀರಾ ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ಹೊರತು ರಾಮಭಕ್ತರನ್ನು ಗುರಿಯಾಗಿಸಿ ಕ್ರಮ ಕೈಗೊಂಡಿಲ್ಲ” ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
“ಜಾರಿ ನಿರ್ದೇಶನಾಲಯ ಸೇರಿದಂತೆ ಸರ್ಕಾರಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿರುವುದು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಈವರೆಗೂ ಈ ಪರಿಯ ದ್ವೇಷದ ರಾಜಕಾರಣ ಮಾಡಿಲ್ಲ. ವಿರೋಧ ಪಕ್ಷದ ನಾಯಕರಿಗೆ ಗೌರವ ಕೊಟ್ಟಿದೆ” ಎಂದು ಹೇಳಿದರು.
“ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ಕುರಿತು ಬಿಜೆಪಿಯ ಒಬ್ಬರೂ ಮಾತನಾಡುವುದಿಲ್ಲ. ಆದರೆ ಜನರ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ಮಾತ್ರ ಅವರು ನೀಡುತ್ತಿದ್ದಾರೆ” ಎಂದು ಹರಿಹಾಯ್ದರು.
ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಮಾತನಾಡಿ, “ನಾವು ರಾಮಮಂದಿರದ ಪರವಾಗಿದ್ದೇವೆ. ಮುಖ್ಯಮಂತ್ರಿ ಅವರೂ ಇದನ್ನೇ ಹೇಳಿದ್ದಾರೆ. ನಾನೂ ಇದನ್ನೇ ಹೇಳುತ್ತಿದ್ದೇನೆ. ರಾಮಮಂದಿರ ಉದ್ಘಾಟನೆಗೆ ಶುಭವಾಗಲಿ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದ.ಕ | ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ: ಶಾಸಕ ವೇದವ್ಯಾಸ್ ಕಾಮತ್
“ಬಿಜೆಪಿಯವರು ರಾಜಕೀಯಕ್ಕಾಗಿ ಸಹಜವಾಗಿ ಆರೋಪ ಮಾಡುತ್ತಾರೆ. ಕಾನೂನು ಬೇರೆ, ರಾಜಕೀಯ ಬೇರೆ. ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇರಲಿಲ್ಲ, ಯಾವುದೇ ರೀತಿ ಅಪರಾಧ ಪರಾಮರ್ಶೆ ನಡೆದಿರಲಿಲ್ಲ” ಎಂದರು.
“ಈಗ 31 ವರ್ಷಗಳಿಂದ ಇದ್ದ ಪ್ರಕರಣಗಳಿಗೆ ಅಂತ್ಯವಾಡಲು ಕ್ರಮ ಕೈಗೊಳ್ಳಬೇಕಿದೆ. ಕರವೇ ಸೇವಕರನ್ನು ಬಂಧಿಸಬೇಕು ಅಂತ ಯಾರೂ ಬಂಧಿಸಿಲ್ಲ. ಕಾನೂನು ಪ್ರಕ್ರಿಯೆಗಳಿಗೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.