ಕೊಡಗು ಜಿಲ್ಲೆ,ವಿರಾಜಪೇಟೆ ತಾಲ್ಲೂಕು,ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ತೋಟಗಳಲ್ಲಿ ಕಾಫಿ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಭಂದಿಸಿದ ನಾಲ್ವರನ್ನು ಬಂಧಿಸಿ, ಮೂರು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಿನಾಂಕ 16-01-2025 ರಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಣಂಗಾಲ ಹುಂಡಿಯ ನಿವಾಸಿ ಸಜಿ ಥೋಮಸ್ ರವರ ತೋಟದ ಕಣದಲ್ಲಿ ಒಣಗಿಸಲಿಟ್ಟಿದ್ದ 12 ಚೀಲ ಹಸಿ ಕಾಫಿ ಮತ್ತು 26-02-2025 ರಲ್ಲಿ ಹುಸೇನ್ ರವರ ತೋಟದಲ್ಲಿ 800 ಕೆಜಿ ಕಾಫಿಯನ್ನು ಕಳ್ಳತನ ಮಾಡಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿದ್ದವು.
ತಿತಿಮತಿ ಗ್ರಾಮದ ಶಾಂತಿನಗರದ ಕೆ ಬಿ ಶಫೀಕ್ (26), ಟಿ ಜೆ ಥೋಮಸ್ (29) ನೊಕ್ಯ ಗ್ರಾಮದ ಎಂ ಜಿ ಅನೀಸ್ (24), ಪೊನ್ನಪ್ಪ ಸಂತೆಯ ಎಂ ಬಿ ಯಾಸಿನ್ (28) ಬಂಧಿತ ಆರೋಪಿಗಳಾಗಿದ್ದಾರೆ.
51 ಚೀಲ ಕಾಫಿ (2550 ಕೆಜಿ), ಒಂದು ಪಿಕ್ ಅಪ್ ವಾಹನ, ಒಂದು ಮಾರುತಿ 800 ಕಾರು ಹಾಗೂ ಒಂದು ಮೋಟಾರ್ ಬೈಕ್ ನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಅರಣ್ಯ ಪಾಲಾದ ಲಕ್ಷ್ಮಣಪುರ ಗ್ರಾಮ : ಪರಿಹಾರವೂ ಇಲ್ಲ, ಪುನರ್ವಸತಿಯು ಇಲ್ಲ
ಮಡಿಕೇರಿ ಪೊಲೀಸ್ ಉಪ ವಿಭಾಗದ ಡಿಎಸ್ಪಿ ಪಿ ಎ ಸೂರಜ್, ವೃತ್ತ ನಿರೀಕ್ಷಕ ಪಿ ಕೆ ರಾಜು, ಸಬ್ ಇನ್ಸ್ಪೆಕ್ಟರ್ ಗಳಾದ ರಾಘವೇಂದ್ರ ಮತ್ತು ಹೆಚ್ ಟಿ ಶಿವಣ್ಣ , ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಡಿಸಿಆರ್ಬಿ ಘಟಕದ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು, ಮಾಹಿತಿ ಸಂಗ್ರಹಿಸಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.