ಮುಸ್ಲಿಂ ಮಹಿಳೆಯರ ಬಗ್ಗೆ ಕೀಳಾಗಿ, ಅವಹೇಳನಕಾರಿಯಾಗಿ ಮತ್ತು ಮಾನಹಾನಿಕರವಾಗಿ ಮಾತನಾಡಿರುವ ಹಾಗೂ ಯುವತಿಗೆ ಬೆದರಿಕೆ ಹಾಕಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕಾನೂನು ಕ್ರಮ ಜರುಗಿಸಿ ಕೂಡಲೇ ಬಂಧಿಸಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಒತ್ತಾಯಿಸಿದೆ.
ಅಧ್ಯಕ್ಷ ಪಿ ಎ ಹನೀಫ್ ನೇತೃತ್ವದಲ್ಲಿ ಮಡಿಕೇರಿ ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದರು.
“ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಹನುಮ ಸಂಕೀರ್ತನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಿಂದೂ ಸಂಘಟನೆ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬಹಿರಂಗವಾಗಿ ಮುಸ್ಲಿಂ ಮಹಿಳೆಯರ ಬಗ್ಗೆ ತೀರಾ ತುಚ್ಛವಾಗಿ ಮಾತನಾಡಿರುವುದು, ಈಗಾಗಲೇ ಎಲ್ಲ ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಕಲ್ಲಡ್ಕ ಪ್ರಭಾಕರ ಭಟ್ ಆಡಿರುವ ಈ ಅವಹೇಳನಾಕಾರಿ ಮಾತುಗಳು ಖಂಡನೀಯ” ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಆಕ್ರೋಶ ವ್ಯಕ್ತಪಡಿಸಿದರು.
“ಕಲ್ಲಡ್ಕ ಪ್ರಭಾಕರ್ ಭಟ್ಟರ ಈ ಹೇಳಿಕೆಯು ಮಹಿಳೆಯ ಅತ್ಯಾಚಾರಕ್ಕಿಂತಲೂ ವಿಕೃತವಾಗಿದೆ. ಮಹಿಳೆಯರನ್ನು ಈ ರೀತಿ ಬಹಿರಂಗವಾಗಿ ನಿಂದಿಸುವುದೂ ಕೂಡ ಅತ್ಯಾಚಾರಕ್ಕಿಂತ ಘನಘೋರ ಅಪರಾಧವಾಗಿರುತ್ತದೆ. ಮುಸ್ಲಿಂ ಮಹಿಳೆಯರ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಕಪೋಕಲ್ಪಿತ ಮತ್ತು ಸುಳ್ಳು ಹೇಳಿಕೆಯ ಮೂಲಕ ಕಲ್ಲಡ್ಕ ಪ್ರಭಾಕರ ಭಟ್ಟರು ನಾಗರಿಕ ಸಮಾಜದ ಎದುರು ಮಹಿಳೆಯರನ್ನು ವಿವಸ್ತ್ರಗೊಳಿಸಿದಂತೆ ಮಾಡಿದ್ದಾರೆ. ಹಿಂದಿನಿಂದಲೂ ಮಹಿಳೆಯರ ಬಗ್ಗೆ ಕೀಳಾಗಿ ಮತ್ತು ಅವಹೇಳನಕಾರಿಯಾಗಿ ಮಾತನಾಡುವುದು, ಅವರನ್ನು ಎರಡನೇ ದರ್ಜೆ ಪ್ರಜೆಗಳಾಗಿ ಕಾಣುವುದು ಕಲ್ಲಡ್ಕ ಪ್ರಭಾಕರ ಭಟ್ಟರ ಮನಸ್ಥಿತಿಯಾಗಿರುತ್ತದೆ. ಇವರ ಈ ಹೇಳಿಕೆಯಿಂದ ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರವಲ್ಲ ಇಡೀ ಮಹಿಳೆಯರಿಗೆ ಅಪಮಾನವಾಗಿರುತ್ತದೆ” ಎಂದು ಹನೀಫ್ ಅವರು ಅಭಿಪ್ರಾಯಪಟ್ಟರು.
“ಮಂಡ್ಯದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅನಗತ್ಯವಾಗಿ ಮುಸ್ಕಾನ್ ಎಂಬ ಮುಸ್ಲಿಂ ಯುವತಿಯನ್ನು ಆಲ್‌ಖೈದಾ ಸಂಘಟನೆ ಜೊತೆ ಸಂಬಂಧ ಕಲ್ಪಿಸಿ ಅವಹೇಳನ ಮಾಡಿರುವುದು ಹಾಗೂ ಕಾಲೇಜಿಗೆ ಹೋಗದಂತೆ ತಡೆಯುತ್ತೇವೆಂದು ಬೆದರಿಕೆ ಹಾಕಿರುವುದೂ ಕೂಡ ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಈ ಸಂಬಂಧ ಪ್ರಭಾಕರ್ ಭಟ್ ವಿರುದ್ಧ ಪ್ರತ್ಯೇಕ ದೂರು ದಾಖಲಾಗಬೇಕು” ಎಂದು ಒತ್ತಾಯಿಸಿದರು.
“ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ತಕ್ಷಣವೇ ಸ್ವಯಂ ಪ್ರೇರಿತ ದೂರು ದಾಖಲಿಸಿ ಅಂದೇ ಬಂಧಿಸಬೇಕಿತ್ತು. ಕೋಮುದ್ವೇಷ ಹರಡುವುದು ಸಂವಿಧಾನ ವಿರೋಧಿ ನಡೆಯಾಗಿದ್ದು, ಇದು ಸಾಮರಸ್ಯದ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನವಾಗಿರುತ್ತದೆ. ಇವರು ಹಿಂದೆಯೂ ನಾಡಿನ ಸೌಹಾರ್ದಕ್ಕೆ ಧಕ್ಕೆ ತಂದ ಅನೇಕ ಉದಾಹರಣೆಗಳಿದ್ದರೂ ಈವರೆಗೂ ಪೊಲೀಸರು ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ತೀವ್ರ ಆಶ್ಚರ್ಯ ತಂದಿದೆ” ಎಂದು ಹೇಳಿದ್ದಾರೆ.
“ಮುಸ್ಲಿಂ ಮಹಿಳೆಯರ ಬಗ್ಗೆ ಮಾನಹಾನಿಕರವಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಇನ್ನಾದರೂ ಕಾನೂನು ಕ್ರಮ ಜರುಗಿಸಿ ಕೂಡಲೇ ಬಂಧಿಸಬೇಕು. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮೂಲಕ ರಾಜ್ಯದಲ್ಲಿ ಸದಾ ಅಶಾಂತಿಯ ವಾತಾವರಣ ಸೃಷ್ಟಿಸಲು ಹಿಂದಿನಿಂದಲೂ ಷಡ್ಯಂತರ ರೂಪಿಸುತ್ತಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ಮುಂದಿನ ದಿನಗಳಲ್ಲಿ ಕಡಿವಾಣ ಹಾಕಬೇಕಾಗಿರುವುದು ಸರ್ಕಾರದ ಮೊದಲ ಕರ್ತವ್ಯವಾಗಿದ್ದು, ಮುಂದೆ ಇವರು ಇಂತಹ ಹೇಳಿಕೆ ನೀಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ತಹಸೀಲ್ದಾರ್ ವರ್ಗಾವಣೆಗೆ ಆಗ್ರಹ
“ಬೇರೆ ಬೇರೆ ಸಂಘಟನೆ ಹೆಸರಿನಲ್ಲಿ ರಾಜ್ಯದ ಹಲವೆಡೆ ಮುಂದೆ ನಡೆಯಬಹುದಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ಪ್ರಭಾಕರ್ ಭಟ್ ವಿರುದ್ದ ಸರ್ಕಾರ ಕೂಡಲೇ ನಿರ್ಬಂಧ ಹೇರಬೇಕು. ರಾಜ್ಯದಲ್ಲಿ ಕೋಮು ಸಾಮರಸ್ಯ ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ರಾಜ್ಯದ ಯಾವುದೇ ಜಿಲ್ಲೆಗಳಿಗೆ ಇವರು ಪ್ರವೇಶಿಸಿದಂತೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಮುಖರುಗಳಾದ ಕೆ ಎಂ ಸಯ್ಯದ್ ಭಾವ ಮತ್ತು ಕೋಳುಮಂಡ ರಫೀಕ್ ಇದ್ದರು.