ನವೆಂಬರ್ 01ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಅದಕ್ಕಾಗಿ, ಅಗತ್ಯವಿರುವ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ತಯಾರಿಗಾಗಿ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿದರು. “ಕಳೆದ ಬಾರಿಯಂತೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು. ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ದಸರಾ ಸಂದರ್ಭದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ವಾಹನಗಳ ಪಾರ್ಕಿಂಗ್ ಮತ್ತು ಹೆಚ್ಚಿನ ಮಳೆಯಿಂದಾಗಿ ಕ್ರೀಡಾಂಗಣದಲ್ಲಿ ಗುಂಡಿಗಳಾಗಿವೆ. ಅವುಗಳನ್ನು ಮುಚ್ಚಿ, ಮೈದಾನವನ್ನು ಸ್ವಚ್ಛಗೊಳಿಸಬೇಕು” ಎಂದು ಪೌರಾಯುಕ್ತರು ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗೆ ಸೂಚಿಸಿದರು.
“ಸಾಂಸ್ಕೃತಿಕ ಕಾರ್ಯಕ್ರಮ ಸಂಬಂಧಿಸಿದಂತೆ ಬೇರೆ ಬೇರೆ ಶಾಲೆಗಳಿಗೆ ಅವಕಾಶ ಮಾಡಬೇಕು. ಕನ್ನಡ ರಾಜ್ಯೋತ್ಸವ ಸಂಬಂಧ ಹಾಡುಗಳನ್ನು ಒಳಗೊಂಡಿರಬೇಕು. ಸಾಂಸ್ಕೃತಿಕ ಕಾಯಕ್ರಮ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೂರ್ವ ತಯಾರಿ ಮೇಲುಸ್ತುವಾರಿ ನಡೆಸಬೇಕು. ತಂಡಗಳನ್ನು ಆಯ್ಕೆ ಮಾಡಬೇಕು” ಎಂದರು.
“ಸ್ವಾಗತ, ಮೆರವಣಿಗೆ, ಸ್ತಬ್ಧಚಿತ್ರ, ಧ್ಜಜಾರೋಹಣ ಮತ್ತು ವೇದಿಕೆ, ಪಥ ಸಂಚಲನ, ಉಪಾಹಾರ, ಬಹುಮಾನ, ಸ್ವಚ್ಚತೆ ಹಾಗೂ ಕುಡಿಯುವ ನೀರು ಹೀಗೆ ವಿವಿಧ ಉಪ ಸಮಿತಿಗಳು ತಮ್ಮ ತಮ್ಮ ಹಂತದಲ್ಲಿ ಸಮಾಲೋಚನೆ ನಡೆಸಿ ಅಕ್ಟೋಬರ್ 25 ರೊಳಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು” ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್ ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಸಿ ರಂಗಧಾಮಪ್ಪ, ಜಿಪಂ ಉಪ ಕಾರ್ಯದರ್ಶಿ ಧನರಾಜ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ ಆರ್ ಶೆಟ್ಟಿ, ಜಿಪಂ ಎಂಜಿನಿಯರ್ ಜಿ ಕೆ ನಾಯಕ್, ಡಿವೈಎಸ್‍ಪಿ ಮಹೇಶ್ ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳ, ಡಾ ಮಧುಸೂದನ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ ಬಸಪ್ಪ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜು, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನಾರಾಯಣ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ತಹಶೀಲ್ದಾರ್ ಪ್ರವೀಣ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಪೌರಾಯುಕ್ತ ಎಚ್ ಆರ್ ರಮೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಶಿವಶಂಕರ, ಸ್ಕೌಟ್ಸ್ ಮತ್ತು ಗೈಡ್ಸನ ಸಮನ್ವಯಾಧಿಕಾರಿ ದಮಯಂತಿ ಮೊದಲಾದವರು ಇದ್ದರು.