ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾದಲ್ಲಿ ಈಗ ಎರಡು ಲೋಕಸಭಾ ಸ್ಥಾನಗಳು ಮತ್ತು 40 ವಿಧಾನಸಭಾ ಕ್ಷೇತ್ರಗಳಿವೆ. ಆದರೆ, ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಜಿಲ್ಲೆಗೆ ಲೋಕಸಭಾ ಕ್ಷೇತ್ರವಿಲ್ಲದೆ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆ ಗೋಣಿಕೊಪ್ಪಲಿನ ಶೆಟ್ಟಿಗೇರಿ ತವಳಗೇರಿ ಮುಂಡ್ ನಾಡ್ ಕೊಡವ ಸಮಾಜ ಆಯೋಜಿಸಿದ್ದ ಚಂಗ್ರಾಂದಿ ಪತ್ತಲೋಡಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಗೋವಾ ರಾಜ್ಯದಲ್ಲಿ ಪ್ರತಿ 35 ಸಾವಿರ ಜನಸಂಖ್ಯೆಗೆ ಒಂದು ವಿಧಾನಸಭಾ ಕ್ಷೇತ್ರವಿದೆ ಮತ್ತು 15 ಲಕ್ಷ ಜನಸಂಖ್ಯೆ ಇದ್ದರೂ ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಆದರೆ 6 ಲಕ್ಷ ಜನಸಂಖ್ಯೆ ಹೊಂದಿರುವ ಕೊಡಗಿಗೆ ಕೇವಲ ಎರಡು ವಿಧಾನಸಭಾ ಸ್ಥಾನಗಳನ್ನು ನೀಡಲಾಗಿದೆ. ಕೊಡಗು ಜಿಲ್ಲೆಗೂ ಲೋಕಸಭಾ ಕ್ಷೇತ್ರವನ್ನು ನೀಡಬೇಕು. ಕೊಡಗು ಲೋಕಸಭಾ ಕ್ಷೇತ್ರವನ್ನು ಪಡೆದರೆ ಕೊಡಗಿನ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತದೆ” ಎಂದು ಪ್ರತಿಪಾದಿಸಿದರು.
“ಸರಿಯಾದ ರಾಜಕೀಯ ಪ್ರಾತಿನಿಧ್ಯವಿಲ್ಲದೆ ಎಲ್ಲ ರಾಜಕೀಯ ಪಕ್ಷಗಳು ಕೊಡಗು ಜಿಲ್ಲೆಯನ್ನು ನಿರ್ಲಕ್ಷಿಸಿವೆ. ದಿವಂಗತ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು 1971ರಲ್ಲಿ ಮುಂಬೈ ಪಶ್ಚಿಮ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ 90,000 ಮತಗಳ ಅಂತರದಲ್ಲಿ ಸೋತರು. ಮಾಜಿ ಸಚಿವ ಎಂ ಸಿ .ನಾಣಯ್ಯ ಉತ್ತಮ ಆಡಳಿತಗಾರರಾಗಿದ್ದರೂ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕಲುಷಿತ ನೀರು ಕುಡಿದು 70 ಜನ ಅಸ್ವಸ್ಥ: ಪಿಡಿಓ ಅಮಾನತು
ಮಾಜಿ ಶಾಸಕ ಎ ಕೆ ಸುಬ್ಬಯ್ಯನವರು ಉತ್ತಮ ಕಾನೂನು ಪರಿಣತಿ ಮತ್ತು ಸಾಂವಿಧಾನಿಕ ಜ್ಞಾನವನ್ನು ಹೊಂದಿದ್ದ ನಾಯಕರಾಗಿದ್ದರು. ಅವರು ಮಹಾನ್ ನಾಯಕರಾಗಬಹುದಿತ್ತು. ಐದು ಬಾರಿ ಗೆದ್ದಿರುವ ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರಿಗೆ ಕೇವಲ ಆರು ತಿಂಗಳ ಅವಧಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹಾಲಿ ಶಾಸಕ ಎ ಎಸ್ ಪೊನ್ನಣ್ಣನವರು ಹೆಚ್ಚು ಅರ್ಹತೆ ಹೊಂದಿದ್ದರೂ ಕೂಡಾ ಸಚಿವ ಸ್ಥಾನ ನೀಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ರಾಜಕೀಯ ಪ್ರಾತಿನಿಧ್ಯವಿಲ್ಲದೆ, ಅವರು ಅರ್ಹರಾಗಿದ್ದರೂ ಅವಕಾಶಗಳಿಂದ ವಂಚಿತರಾಗುತ್ತಾರೆ ಎಂದು ಅವರು ವಿವರಿಸಿದರು. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರ್ಷಿಹ್ ಅಪ್ಪಯ್ಯ ಉಪಸ್ಥಿತರಿದ್ದರು.