ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಇದೇ ಮೊದಲ ಬಾರಿಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಪತ್ರಕರ್ತರ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಇಸ್ಮಾಯಿಲ್ ಕಂಡಕರೆ ನಾಯಕತ್ವದ ಮಾಸ್ಟರ್ಸ್ ಎಫ್‌ಸಿ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿದ್ದು, ಸುರ್ಜಿತ್ ನಾಯಕತ್ವದ ರಾಕ್ ಸ್ಟಾರ್ ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.
ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಮಾಸ್ಟರ್ ಎಫ್‌ಸಿ ತಂಡದ ಮುನ್ನಡೆ ಆಟಗಾರ ಸವಾದ್ ಉಸ್ಮಾನ್ ಮೊದಲಾರ್ಧದಲ್ಲಿ ಒಂದು ಗೋಲು ಬಾರಿಸಿ ಮಾಸ್ಟರ್ಸ್ ಎಫ್‌ಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿಯೂ ಕೂಡ ಸವಾದ್ ಉಸ್ಮಾನ್ ಮತ್ತೊಂದು ಗೋಲು ಬಾರಿಸುವುದರ ಮೂಲಕ ಮಾಸ್ಟರ್ಸ್ ಎಫ್‌ಸಿ ತಂಡವು 2-0 ಗೋಲುಗಳ ಅಂತರದಿಂದ ಫೈನಲ್ ಪಂದ್ಯವನ್ನು ಗೆದ್ದು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸುವುದರ ಮೂಲಕ ಕೆನೇಡಿಯನ್ ಮಾದರಿಯ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ರಾಕ್ ಸ್ಟಾರ್ ತಂಡವು ಫೀನಿಕ್ಸ್ ಹಂಟರ್ ತಂಡವನ್ನು ಮಣಿಸಿತು.
ಸೆಮಿಫೈನಲ್ ಪಂದ್ಯದ ಮೊದಲಾರ್ಧದಲ್ಲಿ ಫೀನಿಕ್ಸ್ ತಂಡದ ನಾಯಕ ವಿಜಯ್ ಅವರ ಆಕರ್ಷಕ ಗೋಲಿನ ನೆರವಿನಿಂದ ಮುನ್ನಡೆ ಪಡೆದಿದ್ದರು. ದ್ವಿತೀಯಾರ್ಧದಲ್ಲಿ ರಾಕ್ ಸ್ಟಾರ್ ತಂಡದ ಅಂತೋಣಿ ಬಾರಿಸಿದ ಗೋಲಿನ ನೆರವಿನಿಂದ ಸಮಬಲ ಸಾಧಿಸಿತು. ಅಂತಿಮವಾಗಿ ರಾಕ್ ಸ್ಟಾರ್ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ 4ರಿಂದ 3 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.
ಸೆಮಿಫೈನಲ್ ಪಂದ್ಯದ ಹಿರೋ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಅಂತೋಣಿ ಪಡೆದುಕೊಂಡರು. ಫೀನಿಕ್ಸ್ ಹಂಟರ್ ತಂಡವು ತೃತೀಯ ಸ್ಥಾನ ಪಡೆದುಕೊಂಡರೆ, ಮೀಡಿಯಾ ಯುನೈಟೆಡ್ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಮೊದಲ ಬಾರಿಗೆ ನಡೆದ ಜಿಲ್ಲಾಮಟ್ಟದ ಪತ್ರಕರ್ತರ ಫುಟ್‌ಬಾಲ್ ಕಲರವದಲ್ಲಿ ಪ್ಲೇಯರ್ ಆಫ್ ದಿ-ಟೂರ್ನಮೆಂಟ್ ಪ್ರಶಸ್ತಿಯನ್ನು ಮಾಸ್ಟರ್ಸ್ ಎಫ್‌ಸಿ ತಂಡದ ನಾಯಕ ಇಸ್ಮಾಯಿಲ್ ಕಂಡಕರೆ ಪಡೆದುಕೊಂಡರು.
ಪಂದ್ಯಾವಳಿಯಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಮತ್ತು ಫೈನಲ್ ಪಂದ್ಯದ ಮ್ಯಾನ್ ಆಫ್-ದಿ ಮ್ಯಾಚ್ ಪ್ರಶಸ್ತಿಯನ್ನು ಮಾಸ್ಟರ್ಸ್ ಎಫ್‌ಸಿ ತಂಡದ ಮುನ್ನಡೆ ಆಟಗಾರ ಸವಾದ್ ಉಸ್ಮಾನ್ ಪಡೆದುಕೊಂಡರು.
ಅತ್ಯುತ್ತಮ ಡಿಫೆಂಡರ್ ರಾಕ್ ಸ್ಟಾರ್ ತಂಡದ ಸುರ್ಜಿತ್, ಅತ್ಯುತ್ತಮ ಮಹಿಳಾ ಆಟಗಾರ್ತಿ ಮಾಸ್ಟರ್ಸ್ ಎಫ್‌ಸಿ ತಂಡದ ಉದಿಯಂಡ ಜಯಂತಿ, ಎಮೆರ್ಜಿಂಗ್ ಆಟಗಾರ ರಾಕ್ ಸ್ಟಾರ್ ತಂಡದ ಎ ಎಸ್ ಮುಸ್ತಫಾ ಸಿದ್ದಾಪುರ ಹಾಗೂ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಫೀನಿಕ್ಸ್ ಹಂಟರ್ ತಂಡದ ಕಿರಣ್ ರಾಜ್ ಪಡೆದುಕೊಂಡರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷೆ ಬಿ ಆರ್ ಸವಿತಾ ರೈ ಮಾತನಾಡಿ, “ನಾವೆಲ್ಲರೂ ಕ್ರಿಕೆಟ್ ಪಂದ್ಯವನ್ನು ಆಡಿದ್ದೇವೆ. ಇದೇ ಮೊದಲ ಬಾರಿಗೆ ಫುಟ್‌ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ವಿಶೇಷ ಅನುಭವ ಕೊಟ್ಟಿದೆ. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ನೇತೃತ್ವದಲ್ಲಿ, ಇಸ್ಮಾಯಿಲ್ ಕಂಡಕರೆ ಮತ್ತು ವಿನೋದ್ ಕೆ ಎಂ ಅವರ ಸಂಚಾಲಕತ್ವದಲ್ಲಿ ಫುಟ್‌ಬಾಲ್ ಪಂದ್ಯಾವಳಿಯು ಅಚ್ಚುಕಟ್ಟಾಗಿ ಆಯೋಜಿಸಿರುವುದು ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಗದಗ | ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆಯು ಕರ್ನಾಟಕ ಏಕೀಕರಣಕ್ಕೆ ಸ್ಪೂರ್ತಿ: ಸಚಿವ ಎಚ್ ಕೆ ಪಾಟೀಲ
ವಿರಾಜಪೇಟೆ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, “ಕೇರಳ ರಾಜ್ಯದಲ್ಲಿ ಪತ್ರಕರ್ತರಿಗೆ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಿದ್ದನ್ನು ಗಮನಿಸಿದ್ದೇನೆ. ಇದೀಗ ಕರ್ನಾಟಕದಲ್ಲಿ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಪತ್ರಕರ್ತರಿಗೆ ಪ್ರೆಸ್ ಕ್ಲಬ್ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಿರುವುದು ಹೆಮ್ಮೆಯ ವಿಷಯ” ಎಂದು ಅಭಿಪ್ರಾಯಪಟ್ಟರು.
ಬೊಳ್ಳಜಿರ ಬಿ ಅಯ್ಯಪ್ಪ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, “ದಾನಿಗಳು ಕೈ ಜೋಡಿಸಿದರೆ ಮಾತ್ರ ಕ್ರೀಡಾಕೂಟಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ. ದಾನಿಗಳ ಸಹಕಾರ ಮುಖ್ಯವಾಗಿ ಬೇಕಾಗಿದೆ” ಎಂದು ಹೇಳಿದರು.
ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಇದ್ದರು.