ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಭೇಟಿ ನೀಡುವ ಪ್ರತಿ ಪ್ರವಾಸಿಗರು ರಾಜಾಸೀಟಿಗೆ ಭೇಟಿ ನೀಡಲಿದ್ದಾರೆ. ಆದ್ದರಿಂದ ರಾಜಾಸೀಟು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಇತರ ಸಂಬಂಧ ವಿಶೇಷ ಗಮನಹರಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕೊಡಗು ಜಿಲ್ಲೆಯ ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದರು.
“ರಾಜಾಸೀಟು ಮಾರ್ಗದ ರಸ್ತೆಯನ್ನು ಸರಿಪಡಿಸಬೇಕು. ರಾಜಾಸೀಟು ಉದ್ಯಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗಿರುವ ನೀರು ಪೂರೈಕೆ ಮತ್ತು ಲೈಟಿಂಗ್ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು” ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ರಾಜಾಸೀಟು ಉದ್ಯಾನವನದ ಫೌಂಟೇನ್ ಅನ್ನು (ಕಾರಂಜಿ) ಉತ್ತಮವಾಗಿ ನಿರ್ವಹಣೆ ಮಾಡುವಂತೆ ತೋಟಗಾರಿಕೆ ಉಪ ನಿರ್ದೇಶಕರಿಗೆ ಸೂಚಿಸಿದರು.
ಫಲಪುಷ್ಪ ಪ್ರದರ್ಶನ ಏರ್ಪಡಿಸುವ ಸಂಬಂಧ ಕೊಡಗು ಜಿಲ್ಲೆಯ ಕಲೆ, ಸಂಸ್ಕೃತಿ, ಪರಿಸರ ಮತ್ತಿತರ ವಿಷಯಗಳ ಕುರಿತು ಹಲವು ಮಾಹಿತಿ ನೀಡಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್ ಆರ್ ಯೋಗೇಶ್ ಅವರು ಮನವಿ ಮಾಡಿದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಮಾತನಾಡಿ, “ರಾಜಾಸೀಟು ಮುಂಭಾಗದಲ್ಲಿ ರಸ್ತೆ ಬದಿ ರೈಲಿಂಗ್ಸ್ ನಿರ್ಮಾಣ ಮಾಡುವುದು ಅತ್ಯಗತ್ಯ ಎಂದು ಸಲಹೆ ನೀಡಿದ್ದು, ರಾಜಾಸೀಟು ಬಳಿ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ಸಂಬಂಧ ‘ಮಾಹಿತಿ ಫಲಕ’ ಅಳವಡಿಸುವುದು ಅಗತ್ಯ” ಎಂದು ಕೋರಿದರು.
ಇದೇ ಸಂದರ್ಭದಲ್ಲಿ ನಗರದ ರಾಜಸೀಟು ಉದ್ಯಾನವನದಲ್ಲಿ ಪ್ರಸಕ್ತ ಸಾಲಿನ ‘ಫಲಪುಷ್ಪ ಪ್ರದರ್ಶನ’ವನ್ನು ಜನವರಿ 26ರಿಂದ ಮೂರು ದಿನಗಳ ಕಾಲ ಆಯೋಜಿಸಲು ತೀರ್ಮಾನಿಸಿದರು.
ಈ ಸುದ್ದಿ ಓದಿದ್ದೀರಾ? ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸಿಡಬ್ಲ್ಯೂಆರ್‌ಸಿ ಸೂಚನೆ
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮುತ್ತಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ, ಕೆಆರ್‌ಐಡಿಎಲ್ ಕಾರ್ಯಪಾಲಕ ಎಂಜಿನಿಯರ್ ಸುರೇಶ್, ಜಿ.ಪಂ.ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ನಗರಸಭೆಯ ಪರಿಸರ ಎಂಜಿನಿಯರ್ ಸೌಮ್ಯ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಸೇರಿದಂತೆ ಇತರರು ಇದ್ದರು.