ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ಹಾಗೂ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೃಹತ್ ಕಸ ವಿಲೇವಾರಿ ಘಟಕ ಅವೈಜ್ಞಾನಿಕವಾಗಿದ್ದು, ಬಹಳ ಕೆಟ್ಟದಾಗಿ ನಿರ್ವಹಣೆಯಾಗುತ್ತಿದೆ. ಅಲ್ಲದೆ ಬಾಳುಗೋಡು ಗ್ರಾಮದ ನಡುವೆ ಕಿರು ಕಸ ವಿಲೇವಾರಿ ಘಟಕ ಇದ್ದರೂ ಕೂಡಾ ಯಾರಿಗೂ ತಿಳಿಯದಂತೆ ಏಕಾಏಕಿ ಶಂಕುಸ್ಥಾಪನೆ ನೆರವೇರಿಸಿ ಬೃಹತ್ ಯೋಜನೆಯ ಕಾಮಗಾರಿ ಕೈಗೊಳ್ಳಲಾಗಿದೆ.
ಸುತ್ತಲೂ ಸುಂದರವಾದ ಪರಿಸರ, ಅಚ್ಚ ಹಸುರಿನಿಂದ ಕಂಗೊಳಿಸುವ ಕಾಫಿ ತೋಟ, ಕಿಮೀ ವ್ಯಾಪ್ತಿಯಲ್ಲಿ ಬ್ರಹ್ಮಗಿರಿ ಅರಣ್ಯ ವಲಯ, ಸುತ್ತಲೂ ಫಲವತ್ತಾದ ಕೃಷಿ ಭೂಮಿ, ಅಂತರ್ಜಲ ಸುಸ್ಥಿತಿಯಲ್ಲಿದೆ. ಇದರಿಂದ ಸದಾಕಾಲ ಜಿನುಗುತ್ತಿದ್ದು, ಮಳೆಯ ಸಮಯದಲ್ಲಿ ತೋಡಿನ ಮೂಲಕ ನೀರು ಹರಿದು ಕೃಷಿಗೆ, ನಿತ್ಯ ಬಳಕೆಗೆ, ಕುಡಿಯುವ ನೀರಿನ ಆಸರೆಯಾಗಿ ಕಾವೇರಿ ನದಿಯನ್ನು ಸೇರುತ್ತದೆ.
ಪರಿಶುದ್ಧ ಗಾಳಿ ಪಟ್ಟಿಯಲ್ಲಿ ಈ ಬಾರಿ ಕೊಡಗಿನ ಮಡಿಕೇರಿ ನಗರ ಮೊದಲ ಸ್ಥಾನ ಪಡೆದಿತ್ತು. ಅದೇ ಪಕ್ಕದ ತಾಲೂಕು ವಿರಾಜಪೇಟೆಯಲ್ಲಿ ತಮ್ಮ ಕೈಯ್ಯಾರೆ ವಾತಾವರಣ ಹಾಳು ಮಾಡಲು ವ್ಯವಸ್ಥಿತ ಸಂಚು ನಡೆದಿದೆ. ಒಂದು ಕಿಮೀ ಪರಿಮಿತಿಯಲ್ಲಿ ಈಗಾಗಲೇ ಬೃಹತ್ ಕಸ ವಿಲೇವಾರಿ ಘಟಕ ಇದ್ದರೂ ಮತ್ತೊಂದು ಕಾಮಗಾರಿಗೆ ಹೊರಟಿದ್ದಾರೆ. ಅಂದರೆ ಇದು
ವ್ಯವಸ್ಥಿತವಾಗಿ ಬೇಕಂತಲೇ ಮಾಡ ಹೊರಟಿರುವ ಯೋಜನೆ.

ಇಲ್ಲಿಯ ಜನರಿಗೂ ತಿಳಿಯದ ಹಾಗೆ ಯಾವುದೇ ಸಭೆ, ನೋಟಿಸ್ ನೀಡದೆ ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಆರಂಭವಾಗಿದೆ.
ಇದೇ ಜಾಗದಲ್ಲಿ ಕಿರು ಕಸ ವಿಲೇವಾರಿ ಘಟಕ ಈಗಾಗಲೇ ಇದೆ. ಅದನ್ನೇ ಸರಿಯಾಗಿ ನಿರ್ವಹಣೆ ಮಾಡಿಲ್ಲ, ಅದೆಷ್ಟೋ ದಿನದ ಕಸವನ್ನು ಚೀಲದಲ್ಲಿ ತುಂಬಿ ಹಾಗೆ ಇಟ್ಟಿದ್ದಾರೆ. ಈಗ 36 ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಹಳ್ಳಿಗಳ ಕಸ ತಂದು ಸುರಿಯುವ ಕೆಲಸಕ್ಕೆ ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಚಾಲನೆ ನೀಡಿದ್ದಾರೆ.
ಇದು ಕೇವಲ 50 ಸೆಂಟ್ ಜಾಗ. ಇಲ್ಲಿ ಯುವಕರೆಲ್ಲ ಸೇರಿ ತಮ್ಮ ಸ್ವಂತ ಖರ್ಚಿನಲ್ಲಿ ಪುಟ್ಟದೊಂದು ಆಟದ ಮೈದಾನ ಮಾಡಿಕೊಂಡಿದ್ದರು. ಅಲ್ಲಿಯೇ 41 ಆದಿವಾಸಿ ಕುಟುಂಬಗಳಿಗೆ ನಿವೇಶನ ನೀಡಿದ್ದು, ಮನೆ ಸೇರಿದಂತೆ ಇತರೆ ಮೂಲಭೂತ ವ್ಯವಸ್ಥೆ ಕಲ್ಪಿಸುವ ಕೆಲಸವಾಗುತ್ತಿದೆ. ವಿಪರ್ಯಾಸವೆಣದರೆ ಆರ್ಜಿ ಪಂಚಾಯಿತಿ ಹಾಗೂ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೇ ಒಂದು ಆಟದ ಮೈದಾನವಿಲ್ಲ. ಯುವಕರು ಕಾರ್ಯಕ್ರಮ ಮಾಡಬೇಕು, ಯಾವುದಾದರೂ ಪಂದ್ಯಾವಳಿ ನಡೆಸಬೇಕು, ಸ್ವತಃ ತಾವೇ ಆಟವಾಡಬೇಕೆಂದರೆ ಬೇರೆ ಕಡೆ ಹೋಗಬೇಕು. ವ್ಯವಸ್ಥಿತವಾಗಿ ಇಲ್ಲೇ ಕಸ ವಿಲೇವಾರಿ ಘಟಕ ಮಾಡಬೇಕು ಎನ್ನುವ ಹಠಕ್ಕೆ ಬಿದ್ದು ಸ್ಥಳೀಯ ಆಡಳಿತ, ತಾಲೂಕು ಆಡಳಿತ, ಜನಪ್ರತಿನಿಧಿಗಳು ಒಗ್ಗೂಡಿ ಕಸ ವಿಲೇವಾರಿ ಘಟಕ ತಂದು ಇಡೀ ಗ್ರಾಮದ ವಾತಾವರಣ ಹಾಳು ಮಾಡಿದ್ದಾರೆ.

ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಶಾಲೆ ಪಕ್ಕದಲ್ಲಿ ಸರಿ ಸುಮಾರು ಏಳು ಎಕರೆ ಭೂಮಿಯಲ್ಲಿ ಬೃಹತ್ತಾದ ಕಸ ವಿಲೇವಾರಿ ಘಟಕ ಈಗಾಗಲೇ ಇದ್ದು, ಸುತ್ತಲ ಪರಿಸರ ಗಬ್ಬೆದ್ದು ನಾರುತ್ತಿದೆ. ವೈಜ್ಞಾನಿಕವಾಗಿ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ವಸತಿ ಶಾಲೆಗೆ ಹೋದರೆ ಸಾಕು ಜೇನು ಕಟ್ಟಿದ ಹಾಗೆ ನೊಣಗಳ ಹಿಂಡು, ಸೊಳ್ಳೆಗಳ ಕಾಟ, ಕೆಟ್ಟ ವಾಸನೆಯಿಂದ ಉಸಿರುಗಟ್ಟುವ ಪರಿಸ್ಥಿತಿಯಿದೆ. ಸಾಕಷ್ಟು ದೊಡ್ಡ ಭೂಮಿಯಲ್ಲಿ ಕಸ ವಿಲೇವಾರಿ ಘಟಕವಿದ್ದರೂ ಇದನ್ನೇ ಸರಿಯಾಗಿ ನಿರ್ವಹಣೆ ಮಾಡಲಾಗದೆ, ವೈಜ್ಞಾನಿಕವಾಗಿ ಯಂತ್ರಗಳನ್ನು ಬಳಸಿ ತ್ಯಾಜ್ಯ ವಿಲೇವಾರಿಗೊಳಿಸದೆ, ಕೇವಲ 50 ಸೆಂಟ್ ಜಾಗಕ್ಕೆ ಮತ್ತೊಂದು ಬೃಹತ್ ಕಸ ವಿಲೇವಾರಿ ಘಟಕ ಮಾಡಲು ಹೊರಟಿರುವುದು ರಾಜಕೀಯಕ್ಕೆ ಕಾರಣವಾಗಿದೆ.

ಬಾಳುಗೋಡುವಿನಲ್ಲಿ ಈಗ ನಿರ್ಮಾಣ ಹಂತದಲ್ಲಿರುವ ಜಾಗ ವರ್ತಿ ಜಾಗ ಕಟ್ಟಡ ಕಟ್ಟಲು ಯೋಗ್ಯವಾಗಿಲ್ಲ. ಭೂ ವಿಜ್ಞಾನಿಗಳು ಅದು ಹೇಗೆ ಸ್ಥಳ ಪರಿಶೀಲನೆ ಮಾಡಿ ಬೃಹತ್ ಕಟ್ಟಡಕ್ಕೆ, ಪಿಲ್ಲರ್ ಹಾಕಲು ಯೋಗ್ಯವೆಂದು ಪ್ರಮಾಣೀಕರಿಸಿದ್ದಾರೆ ಎನ್ನುವುದು ಅನುಮಾನಕ್ಕೆ ಎಡೆ ಮಾಡಿದೆ. ಇಲ್ಲಿ ಎಲ್ಲರೂ ಶಾಮೀಲಾಗಿ ಸುತ್ತಲಿನ ಪರಿಸರಕ್ಕೆ ಮಾರಕವಾದ ಕೆಲಸ ಮಾಡ ಹೊರಟಿದ್ದಾರೆ.
ಆರ್ಜಿ ಕಸ ವಿಲೇವಾರಿ ಘಟಕವನ್ನು ಒಂದು ಸುತ್ತು ಹಾಕಿದರೆ ಸಾಕು ಅದೆಷ್ಟೋ ವರ್ಷಗಳಿಂದ ರಾಶಿ ರಾಶಿ ಸುರಿದಿರುವ ಕಸ ಇನ್ನೂ ಹಾಗೆಯೇ ಇದೆ. ಮರು ಬಳಕೆ ಮಾಡಲಾಗದ ತ್ಯಾಜ್ಯ ಅಲ್ಲೇ ಉಳಿದಿದೆ. ಇನ್ನು ಅಂತರ್ಜಲಕ್ಕೆ ಮಾರಕವಾದ ಆಸ್ಪತ್ರೆ ಮತ್ತು ಕೃಷಿ ತ್ಯಾಜ್ಯಗಳು ನೀರಿಗೆ ಸೇರುತ್ತಿವೆ. ಇದಷ್ಟೇ ಅಲ್ಲದೆ ಸತ್ತವರನ್ನೂ ಕೂಡಾ ಅಲ್ಲಿಯೇ ಸುಡುತ್ತಿದ್ದಾರೆ.

ಇನ್ನು ಕಸವನ್ನು ಗೊಬ್ಬರ(ಕಾಂಪೋಸ್ಟ್)ಮಾಡುವ ವಿಧಾನ ಅತ್ಯದ್ಬುತ ರಾಜ್ಯಕ್ಕೆ ಮಾದರಿಯಾಗಿದೆ. ಒಂದು ಕೊಠಡಿಯಲ್ಲಿ ಅಂದರೆ ಕಾಂಕ್ರಿಟ್ ನೆಲ ಹಾಸಿನ ಮೇಲೆ ಹಸಿ ಕಸದ ರಾಶಿ ಹಾಕಿ, ಅದು ಅಲ್ಲಿಯೇ ಕೊಳೆಯಲು ಬಿಟ್ಟಿದ್ದಾರೆ. ಅದು ಗೊಬ್ಬರವಾಗಲು ಅದೆಷ್ಟು ವರ್ಷಗಳು ಬೇಕೆಂಬುದನ್ನು ನಿರ್ವಹಣೆ ಮಾಡುವವರೇ ಹೇಳಬೇಕು. ಗೊಬ್ಬರ ಮಾಡಲು ತೊಟ್ಟಿ ಮಾಡಿ, ಹಲವು ಪದರಗಳ ಅನುಸಾರ ಮಾಡುವ ವಿಧಾನ ಇದೆ. ಆದರೆ ಇಲ್ಲಿ ಎಲ್ಲವನ್ನೂ ಒಂದು ಕೊಠಡಿಯಲ್ಲಿ ಸುರಿದು ಇಲ್ಲಿ ಗೊಬ್ಬರ ಮಾಡಲಾಗುತ್ತದೆ ಅನ್ನುತ್ತಾರೆ.
ಇಂತಹ ಬೃಹತ್ ಕಸ ವಿಲೇವಾರಿ ಘಟಕದಲ್ಲಿ ಸಿಬ್ಬಂದಿಗಳೂ ಕೂಡಾ ಮೂರು ಮತ್ತೊಂದು ಜನರಿದ್ದಾರೆ. ಯಾವುದೇ ಯಂತ್ರೋಪಕರಣಗಳಿಲ್ಲ. ತಮಗೆ ಹೇಗೆ ಬೇಕೋ ಹಾಗೆ ಕೆಟ್ಟದಾಗಿ ನಿರ್ವಹಣೆ ಮಾಡುತ್ತಿದ್ದಾರೆ.
ಯಾವುದು ಆಗುತ್ತೋ ಬಿಡುತ್ತೋ ಕಸದ ರಾಶಿಯಲ್ಲಿ ಸಿಗುವ ಗುಜರಿ ವಸ್ತುಗಳನ್ನು ತಕ್ಷಣವೇ ಆಯ್ದು ಅದನ್ನೆಲ್ಲ ತಕ್ಷಣ ಸಾಗಿಸಿ ದುಡ್ಡು ಮಾಡಿಕೊಳ್ಳುವ ಆತುರದ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಆದರೆ ಕಸ ವಿಂಗಡಣೆ, ವಿಲೇವಾರಿ ಮಾಡುವುದು ಮಾತ್ರ ಖಂಡಿತ ಮಾಡಿಲ್ಲ. ಹಾಗೆಯೇ ಬಿಟ್ಟು ಮಳೆಗಾಲದಲ್ಲಿ ಅದೆಲ್ಲ ಕೊಳೆತು ನೊಣ, ಸೊಳ್ಳೆ ಉತ್ಪಾದನಾ ಕೇಂದ್ರವನ್ನಾಗಿಸಿ, ನಾಯಿಗಳು ಅದನ್ನೆಲ್ಲ ಎಳೆದು ರಸ್ತೆ, ಶಾಲೆ, ಮನೆ ಮುಂದೆ ತಂದು ಇಡೀ ವಾತಾವರಣ ಹದಗೆಡುವಲು ಕಾರಣರಾಗಿದ್ದಾರೆ.

ಸ್ಥಳೀಯ ನಿವಾಸಿ ರಾಯ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಬಾಳುಗೋಡು ಗ್ರಾಮದಲ್ಲಿ ನೂರಾರು ಮನೆಗಳಿವೆ, ಪಕ್ಕದಲ್ಲಿ ಕಾಡಿದೆ. ಇಲ್ಲಿಯ ತೋಡಿನ ನೀರು ಕಾವೇರಿ ನದಿಗೆ ಸೇರುತ್ತದೆ. ಇಂತಹ ಜಾಗದಲ್ಲಿ ಕಸ ವಿಲೇವಾರಿ ಘಟಕ ಮಾಡುತ್ತಿದ್ದಾರೆ. ಈಗಾಗಲೇ ಅರ್ಧ ಕಿಮೀ ದೂರದಲ್ಲಿ ಕಸ ವಿಲೇವಾರಿ ಘಟಕವಿದೆ. ಅದನ್ನೇ ಸರಿಯಾಗಿ ಬಳಸಿದರೆ ಅದಕ್ಕಿಂತ ಬೇರೆ ಬೇಕಿಲ್ಲ. ಅಲ್ಲಿ ಬೇಕಾದಷ್ಟು ಜಾಗವಿದೆ. ಇಲ್ಲಿ ಜಾಗವೇ ಇಲ್ಲ. ಊರಿನ ಮಧ್ಯಕ್ಕೆ ಬಂದು ಈ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.
“ಪಂಚಾಯಿತಿಗಳು ಸರಿಯಾಗಿ ನಿರ್ವಹಣೆ ಮಾಡದೆ ಅಲ್ಲಿನ ಕೆಟ್ಟ ವಾಸನೆ ಇಲ್ಲಿವರೆಗೆ ಬರುತ್ತದೆ. ನೊಣ, ಸೊಳ್ಳೆ ಕಾಟ ಹೆಚ್ಚಿದೆ. ಈಗ ಮತ್ತೆ ಯೋಜನೆ ಎನ್ನುವ ನೆಪ ಹುಡುಕಿಕೊಂಡು ಊರನ್ನು ಹಾಳುಮಾಡಲು ಬಂದಿದ್ದಾರೆ” ಎಂದು ಆರೋಪಿಸಿದರು.
ಗ್ರಾಮಸ್ಥ ಮನೋಜ್ ಮಾತನಾಡಿ, “ಇಲ್ಲಿ ಈಗಾಗಲೇ ಕಸ ವಿಲೇವಾರಿ ಕಿರು ಘಟಕವಿದೆ. ಅದನ್ನೇ ಈವರೆಗೆ ನಿರ್ವಹಣೆ ಮಾಡಿಲ್ಲ.
ಪಂಚಾಯಿತಿ ಊರಿನ ಅನುಕೂಲ ಮಾಡುತ್ತಿದೆಯೆಂದು ನಾವು ಸುಮ್ಮನೆ ಇದ್ದೆವು. ಈಗ ನೋಡಿದರೆ ಇಡೀ ವಿರಾಜಪೇಟೆ ತಾಲೂಕಿನ ಕಸ ತಂದು ಇಲ್ಲಿ ಸುರಿಯುತ್ತಿದ್ದಾರೆ. ಯಾವುದೇ ಮುನ್ನೆಚ್ಚರಿಕೆ ನೀಡದೆ ಇಲ್ಲಿನ ಜನ ಎಲ್ಲಿಯಾದರೂ ಹೋಗಲಿ, ಇಲ್ಲ ಇದೇ ಜಾಗದಲ್ಲಿ ಅನಾರೋಗ್ಯದಿಂದ ಸಾಯಲಿ ಎನ್ನುವ ಉದ್ದೇಶವಾಗಿದೆ. ಇಂತಹ ಕಾಮಗಾರಿ ನಡೆಸುವ ಸ್ಥಳದಲ್ಲಿ ಆದಿವಾಸಿಗಳು ವಾಸವಿದ್ದಾರೆ. ಇದನ್ನು ಅಧಿಕಾರಿಗಳು ಮರೆತಿದ್ದಾರೆಯೇ?” ಎಂದರು.

ಆದಿವಾಸಿ ಮಹಿಳೆ ಶೋಭಾ ಮಾತನಾಡಿ, “ಈ ಹಿಂದೆ ಸಾಲು ಮನೆಗಳಲಿ ಜೀತ ಮಾಡಿಕೊಂಡು ಬದುಕಿದ್ದೆವು. ಈಗ ಸರ್ಕಾರದಿಂದ ಇಲ್ಲಿ ನಿವೇಶನ ಸಿಕ್ಕಿದೆ. ಆದರೆ ನಾವು ಇರುವ ಜಾಗದಲ್ಲಿ ಕಸ ವಿಲೇವಾರಿ ಘಟಕ ಮಾಡುತ್ತಿದ್ದಾರೆ. ಇನ್ಮೇಲೆ ಇಲ್ಲೇ ಕಸ ಸುರಿಯುತ್ತಾರೆ.
ನಾವು ಕುಡಿಯುವ ನೀರಿಗೆ ಒಂದೇ ಒಂದು ಬೋರ್ವೆಲ್ ಇದೆ. ಅದು ಈಗ ಕಾಮಗಾರಿ ಮಾಡುತ್ತಿರುವ ಜಾಗದಲ್ಲಿದೆ. ಆ ಬೋರ್ವೆಲ್ ಬಿಟ್ಟರೆ ನಮಗೆ ನೀರು ಕುಡಿಯೋದಕ್ಕೆ, ನಿತ್ಯ ಬಳಕೆಗೆ ಬೇರೆ ದಾರಿಯಿಲ್ಲ. ಹೀಗಿರುವಾಗ ನಾವಿರುವ ಜಾಗದಲ್ಲಿ ಬೇಕಂತಲೇ ವೇಗವಾಗಿ ಕಾಮಗಾರಿ ಮಾಡುತ್ತಿದ್ದಾರೆ. ಮುಂದೆ ಕುಡಿಯೋ ನೀರಿಗೂ ತೊಂದರೆಯಾಗುತ್ತದೆ. ಕಸದ ಜತೆ ಬರುವ ಕೆಟ್ಟದ್ದೆಲ್ಲ ನೀರಿಗೆ ಸೇರುತ್ತದೆ. ಇಲ್ಲಿ ವಯಸ್ಸಾದವರು, ಆರೋಗ್ಯ ಕೆಟ್ಟಿರುವವರು, ಚಿಕ್ಕ ಮಕ್ಕಳು ಇದ್ದಾರೆ. ಮುಂದೆ ಏನಾಗುತ್ತೋ ಅನ್ನೋದೇ ಭಯವಾಗಿದೆ” ಎಂದರು.
ಇದನ್ನೂ ಓದಿದ್ದೀರಾ? ಕೊಡಗು | ಗ್ರಾಮದ ನಟ್ಟನಡುವೆ ಕಸ ವಿಲೇವಾರಿ ಘಟಕ; ಅವೈಜ್ಞಾನಿಕ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸ್ಥಳೀಯ ನಿವಾಸಿ ಮನು ಮಾತನಾಡಿ, “ಊರಿನವರೆಲ್ಲಾ ಸೇರಿ ದುಡ್ಡು ಹಾಕಿ ನೆಲವನ್ನು ಸಮತಟ್ಟು ಮಾಡಿಸಿ, ಮಣ್ಣು ತರಿಸಿ ಆಟದ ಮೈದಾನ ಮಾಡಿದ್ದೆವು. ಪಂಚಾಯಿತಿಯವರು ಊರಿಗೆ ಮೈದಾನದ ವ್ಯವಸ್ಥೆ ಮಾಡಬೇಕು. ಆದರೆ ಅವರು ಮಾಡಲಿಲ್ಲ. ಊರಿನ ಯುವಕರು, ಗ್ರಾಮಸ್ಥರು ಸೇರಿ ಮೈದಾನ ಮಾಡಿದ್ದು, ಕೆಲವು ಜನಪ್ರತಿನಿಧಿ ಎನಿಸಿಕೊಂಡವರಿಗೆ ಇದರ ಮೇಲೆ ಕಣ್ಣು ಬಿದ್ದಿದೆ.
ಇಲ್ಲಿರೋ ಐವತ್ತು ಸೆಂಟ್ ಜಾಗಕ್ಕೆ ಇಷ್ಟು ದೊಡ್ಡ ಯೋಜನೆ ತಂದು ಇರೋ ಮೈದಾನ ಕಿತ್ತುಕೊಂಡು ಜನರಿಗೆ ತೊಂದರೆ ಮಾಡುವ ಕಾಮಗಾರಿ ಶುರು ಮಾಡಿದ್ದಾರೆ. ಇಬ್ಬರಿಗೂ ವಿಷಯ ಗೊತ್ತಿಲ್ಲ, ಪೊನ್ನಣ್ಣ ಬಂದು ಶಂಕುಸ್ಥಾಪನೆ ಮಾಡಿದಾಗಲೇ ನಮ್ಮ ಗಮನಕ್ಕೆ ಬಂದಿರುವುದು” ಎಂದು ಹೇಳಿದರು.
ಹಿರಿಯರಾದ ಜಯರಾಜು ಮಾತನಾಡಿ, “ಇದೆಲ್ಲ ಕೃಷಿ ಭೂಮಿ, ನಾವೆಲ್ಲ ಕಾಫಿ ತೋಟ, ಭತ್ತದ ಗದ್ದೆ ಹೊಂದಿರುವ ಜಾಗ. ನೀವೇ ಬೇಕಾದರೆ ನೋಡಿ. ಕುಡಿಯೋ ನೀರಿಗೆ ಬಾವಿಗಳು ಇಲ್ಲೇ ಇವೆ. ಮಳೆ ಬಂದರೆ ಇಲ್ಲಿ ಓಡಾಡಲೂ ಆಗುವುದಿಲ್ಲ. ಇಂತಹ ಜಾಗದಲ್ಲಿ ಕಸ ವಿಲೇವಾರಿ ಘಟಕ ಮಾಡಿ ಊರಿಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.
