ನನ್ನ ಕರ್ತವ್ಯದಲ್ಲಿ ನಾನು ತಪ್ಪು ಮಾಡಿದ್ದು ಸಾಬೀತಾದರೆ ನನಗೆ ಮರಣ ದಂಡನೆ ನೀಡಿ ಎಂದು ಮಡಿಕೇರಿ ನಗರಸಭೆ ಪೌರಾಯುಕ್ತ ವಿಜಯ್ ಹೇಳಿಕೆ ನೀಡಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತರ ಮೇಲೆ ನೇರ ಆರೋಪ ಮಾಡಿದಾಗ ಪೌರಾಯುಕ್ತರು ಉತ್ತರಿಸಿದ್ದಾರೆ.
“ನಾನು ಇಲ್ಲಿಗೆ ಕರ್ತವ್ಯಕ್ಕೆ ಹಾಜರಾದಾಗ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೆ. ಆದರೆ ಅಧಿಕಾರಿ, ಸಿಬ್ಬಂದಿಗಳು ವರ್ಗಾವಣೆ ಆದರು. ನಾನು ಒಬ್ಬಂಟಿಯಾಗಿ ಕೆಲಸ ಮಾಡಲು ಅಸಾಧ್ಯವಾಗಿದೆ” ಎಂದು ಹೇಳಿದರು.
“ಜನಪ್ರತಿನಿಧಿಗಳು ಮತ್ತು ಜನರ ನಡುವೆ ಪೌರಾಯುಕ್ತರು ಕೆಟ್ಟ ಅಭಿಪ್ರಾಯ ಬರಲು ಕಾರಣರಾಗಿದ್ದಾರೆ. ನನ್ನ ಸ್ವಂತ ಕಟ್ಟಡಕ್ಕೆ ಫಾರಂ 3 ಪಡೆಯಲು ಅಸಾಧ್ಯವಾಗುವ ಸ್ಥಿತಿ ಇದೆ” ಎಂದು ಸದಸ್ಯೆ ಶ್ವೇತಾ ಪ್ರಶಾಂತ್ ಅಸಮಾಧಾನ ವ್ಯಕ್ತಪಡಿಸಿದರು.
“ಜನಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಗೂಟ ಹೊಡೆದು ಕುಳಿತ ಅಧಿಕಾರಿಗಳನ್ನು ಇಲ್ಲಿಂದ ಕಳುಹಿಸಬೇಕು. ನಗರಸಭೆಯಲ್ಲಿ ಜನರ ಕೆಲಸಗಳು ಆಗುತ್ತಿಲ್ಲ. ನನಗೆ ನಗರಸಭೆಗೆ ಬರಲು ಕಷ್ಟವಾಗುತ್ತಿದೆ” ಎಂದು ಬಿಜೆಪಿ ಸದಸ್ಯ ಅಪ್ಪಣ್ಣ ಆರೋಪಿಸಿದರು.
“ಅಧಿಕಾರಿಗಳ ಬಗ್ಗೆ ಅಸಮಾಧಾನ ಉಂಟಾಗಿದೆ. ನಗರಸಭೆ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ.
ಅಧಿಕಾರಿಗಳು ಕೆಲಸ ಮಾಡದೆ ಆಡಳಿತ ಮಂಡಳಿಗೆ ಕೆಟ್ಟ ಹೆಸರು ತರುತ್ತಿದ್ದಾರೆ” ಎಂದು ಬಿಜೆಪಿ ಸದಸ್ಯರುಗಳಾದ ಸತೀಶ್, ಉಮೇಶ್ ಸುಬ್ರಮಣಿ ನೇರ ಆರೋಪ ಮಾಡಿದರು.
“ಯಾರದ್ದೋ ಮಾತು ಕೇಳಿಕೊಂಡು ಅದ್ಯಕ್ಷರು ದಾರಿ ತಪ್ಪಿದ್ದಾರೆ. ಇನ್ನಾದರೂ ಅಧಿಕಾರಿಗಳನ್ನು ಸರಿಯಾದ ಮಾರ್ಗ ದರ್ಶನ ಮಾಡುವ ಮೂಲಕ ಆಡಳಿತ ಸರಿಪಡಿಸಿಕೊಳ್ಳಲಿ” ಎಂದು ಸದಸ್ಯ ಅಮೀನ್ ಮೋಸಿನ್ ಹೇಳಿದರು.
ಕಾಂಗ್ರೆಸ್ ಸದಸ್ಯ ರಾಜೇಶ್ ಎಲ್ಲಪ್ಪ ಮಾತನಾಡಿ, “ಆಡಳಿತ ಅವಧಿ ಮುಕ್ತಾಯ ಹಂತದಲ್ಲಿದೆ. ಹೀಗಾಗಿ ನೀವು ಆಸಕ್ತಿ ಕಳೆದುಕೊಂಡ ಹಾಗೆ ಕಾಣುತ್ತಿದೆ. 25 ವರ್ಷಗಳಲ್ಲಿ ಇಂಥ ಆಡಳಿತವನ್ನು ಮಡಿಕೇರಿ ಜನ ನೋಡಿಲ್ಲ. ನನಗೂ ನಗರಸಭೆಗೆ ಬರಲು ಆಗದ ಪರಿಸ್ಥಿತಿ ಇದೆ. ಇಂಥ ಸ್ಥಿತಿ ಮುಂದುವರೆದರೆ ಜನ ನಗರಸಭೆಗೆ ಕಲ್ಲು ಹೊಡೆದು ದಂಗೆ ಏಳುವ ಪರಿಸ್ಥಿತಿ ಎದುರಾಗಿದೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಔಷಧಿ ಕ್ಷೇತ್ರದಲ್ಲಿ ಅಕ್ರಮ ದಂಧೆ ನಿಯಂತ್ರಣಕ್ಕೆ ಒತ್ತಾಯಿಸಿ ಪ್ರತಿಭಟನೆ
ಕೆ ಎಸ್ ರಮೇಶ್ ಮಾತನಾಡಿ, “ಅಧಿಕಾರಿಗಳ ವಿರುದ್ಧ ಕೋರ್ಟ್‌ಗೆ ಹೋಗಿ. ಕೆಲಸ ಮಾಡದ ಅಧಿಕಾರಿಗಳು ಮಡಿಕೇರಿಗೆ ಬೇಡ. ನಮ್ಮ ಆಡಳಿತದ ಮೇಲೆ ಆರೋಪ ಮಾಡುವ ದುಸ್ಥಿತಿ ಇದೆ.
ಇದಕ್ಕೆ ಪೌರಾಯುಕ್ತರೇ ಮೂಲ ಕಾರಣ” ಎಂದು ನೇರವಾಗಿ ಆರೋಪಿಸಿದರು.
ಮಹೇಶ್ ಜೈನಿ ಮಾತನಾಡಿ, “ಸದಸ್ಯರು ಹೇಳಿದ ಕೆಲಸ ಮಾಡಬಾರದೆಂದು ಸಿಬ್ಬಂದಿಗೆ ಪೌರಾಯುಕ್ತ ಕುಮ್ಮಕ್ಕು ನೀಡಿದ್ದಾರೆ. ಸಿಬ್ಬಂದಿಗಳು ವಿಚಿತ್ರವಾಗಿ ವರ್ತನೆ ತೋರಿಸುತ್ತಿದ್ದಾರೆ. ಫಾರಂ ನಂಬರ್ 3 ಕೆಲಸವಾಗದೆ ಜನ ಹೈರಾಣಾಗಿದ್ದಾರೆ” ಎಂದು ಆರೋಪ ಮಾಡಿದರು.