ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಿರ್ಮಾಣವಾಗಿರುವ ಗ್ರೇಟರ್ ರಾಜಾಸೀಟ್ ಕಾಮಗಾರಿಯಲ್ಲಿ ಬಹುಕೋಟಿ ಅಕ್ರಮದ ಬಗ್ಗೆ ಲೋಕಾಯುಕ್ತ ತನಿಖಾಧಿಕಾರಿ ತೇಜಶ್ರೀ ಬಿ ಮದ್ದೋಡಿಯವರು ವಿಚಾರಣೆ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು.
ಗ್ರೇಟರ್ ರಾಜಾಸೀಟ್ ಕಾಮಗಾರಿಯಲ್ಲಿ ಬಹುಕೋಟಿ ಅಕ್ರಮ ನಡೆದಿದ್ದು, ನಕಲಿ ಎಂ ಬಿ ಪುಸ್ತಕ ಸೃಷ್ಠಿಸಿ ಅಪರಾಧ ಎಸಗಿದ್ದಾರೆಂದು ಅಂದಿನ ಲೋಕೋಪಯೋಗಿ ಜ್ಯೂನಿಯರ್ ಎಂಜಿನಿಯರ್ ಕೆ ಎಲ್ ದೇವರಾಜ್ ಮತ್ತು ಮೇಲಾಧಿಕಾರಿಗಳ ವಿರುದ್ಧ ಕಾಂಗ್ರೆಸ್ ಮುಖಂಡ ತೆನ್ನಿರಾ ಮೈನಾ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಇದರ ಅನ್ವಯ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ವಿಭಾಗದ ತನಿಖಾಧಿಕಾರಿ ತೇಜಶ್ರೀ ಬಿ ಮದ್ದೋಡಿ ಅಧಿಕಾರಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಆರೋಪಿತ ಕಿರಿಯ ಎಂಜಿನಿಯರ್ ಎಂ ಬಿ ಪುಸ್ತಕ ಅಸಲಿಯೆಂದು ವಾದಿಸಿದರೂ ಕೂಡ ಕೊನೆಗೆ ತನಿಖಾಧಿಕಾರಿ ಎಲ್ಲ ಮಗ್ಗುಲುಗಳಲ್ಲಿ ಪರಿಶೀಲಿಸಿ ನಕಲಿ ಎನ್ನಲು ಒಟ್ಟು ಐದು ಆಧಾರಗಳನ್ನು ಗುರುತಿಸಿ ದಾಖಲು ಮಾಡಿಕೊಂಡರು. ಕಾರ್ಯಪಾಲಕ ಅಭಿಯಂತರ ಸಿದ್ದೇಗೌಡ ಅವರು ಕಾಮಗಾರಿಗಳ ವಿವರಣೆ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ವರದಿ ಮಾಡಿ ಸಲ್ಲಿಸಿದ್ದ ಮಾಹಿತಿಯನ್ನು ಲೋಕಾಯುಕ್ತ ಅಧಿಕಾರಿ ತೇಜಶ್ರೀಯವರಿಗೆ ನೀಡಿದರು.
ತೇಜಶ್ರೀಯವರು, ದೂರುದಾರ ತೆನ್ನಿರಾ ಮೈನಾ ಮತ್ತು ಲೋಕೋಪಯೋಗಿ ಅಧಿಕಾರಿಗಳೊಂದಿಗೆ ಗ್ರೇಟರ್ ರಾಜಾಸೀಟ್ ಬಳಿ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.
2023ರ ಮಾರ್ಚ್ 18ರಂದು ಲೋಕಾರ್ಪಣೆಯಾದ ಗ್ರೇಟರ್ ರಾಜಾಸೀಟ್ ಇನ್ನೂ ತೋಟಗಾರಿಕೆ ಇಲಾಖೆಗೆ ಹಸ್ತಾಂತರವಾಗದರುವ ಬಗ್ಗೆ ಲೋಕೋಪಯೋಗಿ ಎಂಜಿನಿಯರ್‌ಗಳಿಂದ ವಿವರಣೆ ಪಡೆದರು. ಉತ್ತರ ನೀಡಲು ತಡಬಡಿಸಿದ ಎಂಜಿನಿಯರ್‌ಗೆ ತರಾಟೆಗೆ ತೆಗೆದುಕೊಂಡಿದ್ದು, ಅಲ್ಲಲ್ಲಿ ಬಿರುಕು ಬಿಟ್ಟ ಕಾಮಗಾರಿಗಳು, ಹಾರಿಹೋದ ಹೆಂಚುಗಳು, ಕರೆಂಟ್ ಸಂಪರ್ಕವಿಲ್ಲದ ಲೈಟುಗಳು, ಒಡೆದು ಹೋದ ಗ್ರಾನೆಟ್ ಕಲ್ಲುಗಳು, ಅಕ್ಕಪಕ್ಕ ಸರಿದಿದ್ದ ಇಂಟರ್ ಲಾಕ್, ದೂರದೂರ ಇರುವ ಗಿಡಗಳು ಸೇರಿದಂತೆ ಎಲ್ಲವನ್ನೂ ತಮ್ಮ ಸಿಬ್ಬಂದಿಯಿಂದ ಚಿತ್ರೀಕರಿಸಿಕೊಂಡರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಶೇ.50ರಷ್ಟು ಪೇಮೆಂಟ್ ಕೋಟಾ ರದ್ದುಗೊಳಿಸಿ, ಯುಬಿಡಿಟಿ ಉಳಿಸಿ: ಎಐಡಿಎಸ್ಒ ಆಗ್ರಹ
ನಿರ್ವಹಣಾಧಿಕಾರಿ ಎಇಇ ಮತ್ತು ಇಇ ಮಡಿಕೇರಿಗೆ ಬಂದು ತನಿಖೆಗೆ ಹಾಜರಾಗಲು ಸೂಚನೆಯನ್ನು ನೀಡಿದ್ದಾರೆ.
“ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತೆನ್ನಿರಾ ಮೈನಾ, “ಈಗಾಗಲೇ ಕಿರಿಯ ಎಂಜಿನಿಯರ್ ಕೆ ಎಲ್ ದೇವರಾಜ್ ನಕಲಿ ಎಂ ಬಿ ಪುಸ್ತಕ ರಚಿಸಿ ಅಪರಾಧ ಎಸಗಿರುವುದು ಕಂಡುಬಂದಿದ್ದು, ಮುಂದೆ ಅಕ್ರಮದ ವಿವರಗಳು ಬಹಿರಂಗವಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಡಿಕೇರಿ ನಗರ ಸಭೆಯ ಅಧ್ಯಕ್ಷ ಹೆಚ್ ಎಂ ನಂದಕುಮಾರ್ ಸೇರಿದಂತೆ ಅಧಿಕಾರಿಗಳು ಇದ್ದರು.