ಕೊಡಗು ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಬಡರೋಗಿಗಳ ಅನುಕೂಲಕ್ಕಾಗಿ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ನೀಡಲಾಗಿದೆ ಎಂದು ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದರು.
ಕೊಡಗು ಜಿಲ್ಲೆ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
“ಇಡೀ ಸರ್ಕಾರವೇ ಕೊಡಗನ್ನು ಗಂಭೀರವಾಗಿ ಪರಿಗಣಿಸಿದೆ. ಕೊಡಗಿನ ಅಭಿವೃದ್ಧಿ ವಿಚಾರದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಎ ಎಸ್ ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ಕೆಲಸ ಮಾಡುತ್ತಿದ್ದಾರೆ. ಕೊಡಗಿನ ಜನತೆಗೆ ಅಗತ್ಯವಿರುವ ವೈದ್ಯಕೀಯ ನೆರವನ್ನು ನೀಡಲಾಗುವುದು. ಕೂಡಲೇ ತಜ್ಞ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿಯ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
“ಮಾರ್ಚ್ ತಿಂಗಳಿನಲ್ಲಿ ಬೇರೆ ಜಿಲ್ಲೆಗೆ ಒದಗಿಸಲು ನಿರ್ಧರಿಸಲಾಗಿದ್ದ ಎಂಆರ್‌ಐ ಘಟಕವನ್ನು ಶಾಸಕ ಡಾ ಮಂತರ್ ಗೌಡ ಅವರ ಒತ್ತಾಯ ಹಾಗೂ ಕೋರಿಕೆಗೆ ಮಣಿದು ಕೊಡಗು ಜಿಲ್ಲೆಗೆ ನೀಡಲಾಯಿತು. ಹೊಸ ಕಟ್ಟಡದಲ್ಲಿ ಸೌಲಭ್ಯ ಕಲ್ಪಿಸಲು ₹60 ಕೋಟಿ ಬಿಡುಗಡೆ ಮಾಡಲು ಸಿದ್ದತೆ ನಡೆದಿದೆ” ಎಂದು ಮಾಹಿತಿ ನೀಡಿದರು.
ಶಾಸಕ ಡಾ ಮಂತರ್ ಗೌಡ ಮಾತನಾಡಿ, “ಖಾಸಗಿ ಸಂಸ್ಥೆಗಳು ಎಂಆರ್‌ಐ ಸೇರಿದಂತೆ, ಸುಸಜ್ಜಿತ ತಪಾಸಣೆ ಲ್ಯಾಬ್ ಸ್ಥಾಪನೆ ಮಾಡುವ ಯೋಜನೆ ಮುಂದಿಟ್ಟಾಗ ಯೋಚಿಸಿದೆ ಇದರಿಂದ ಮಧ್ಯಮ ವರ್ಗ ಹಾಗೂ ಬಡವರಿಗೆ ಪ್ರಯೋಜನವಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ಉಪಯೋಗಕ್ಕೆ ಬರುವಂತೆ ಸರ್ಕಾರಿ ಆಸ್ಪತ್ರೆಗೆ ಎಂಆರ್‌ಐ ಯೋಜನೆ ತರಬೇಕೆಂದು ಚಿಂತನೆ ನಡೆಸಿದ್ದೆ. ಈಗ ಯಶಸ್ವಿಯಾಗಿದ್ದು, ಮನಸ್ಸಿಗೆ ನೆಮ್ಮದಿ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದಸರಾ ಉತ್ಸವ; ಸಾಂಪ್ರದಾಯಿಕವಾಗಿ ರಾಜ ವಂಶಸ್ಥರಿಗೆ ಆಹ್ವಾನ
ಮುಖ್ಯ ಅತಿಥಿ ಶಾಸಕ ಎ ಎಸ್ ಪೊನ್ನಣ್ಣ ಮಾತನಾಡಿ, “ಸ್ವತಃ ವೈದ್ಯರಾಗಿರುವ ಡಾ ಮಂತರ್ ಗೌಡ ಕೊಡಗಿನ ಆರೋಗ್ಯ ಕ್ಷೇತ್ರಕ್ಕೆ ಸುಧಾರಣೆ ತರುವುದರಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ದಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದು, ಎರಡೂ ಕ್ಷೇತ್ರದ ಅಭಿವೃದ್ಧಿ ನಿರೀಕ್ಷೆಗೂ ಮೀರಿ ನಡೆಯಲಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ವೈದ್ಯಕೀಯ ಕಾಲೇಜ್ ನಿರ್ದೇಶಕ ವಿಶಾಲ್, ಮಾಜಿ ಶಾಸಕಿ ವೀಣಾ ಅಚ್ಚಯ್ಯ,
ಪ್ರಮುಖರಾದ ಕೆ ಪಿ ಚಂದ್ರಕಲಾ, ಹೆಚ್ ಎಸ್ ಚಂದ್ರಮೌಳಿ, ವಿ ಪಿ ಶಶಿಧರ್, ರಾಜೇಶ್, ಯಲ್ಲಪ್ಪ, ಹೆಚ್ ಎ ಹಂಸ, ತೆನ್ನಿರ ಮೈನಾ, ಚುಮ್ಮಿ ದೇವಯ್ಯ, ನೆರವಂಡ ಉಮೇಶ್, ನಟೇಶ್ ಗೌಡ, ಜನಾರ್ಧನ್, ಅಬ್ದುಲ್ ರಜಾಕ್ ಸೇರಿದಂತೆ ಪ್ರಮುಖರು, ವೈದ್ಯಕೀಯ ಸಿಬ್ಬಂದಿಗಳು ಇದ್ದರು.
