ಕೊಡಗು ಜಿಲ್ಲೆಯ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಕ್ಕೆ ಗ್ರಾಮದ ನಿವಾಸಿ ದೇವರಾಜು ಎಂಬುವವರ ಮನೆ ಕಳ್ಳತನದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
2024ರ ನವೆಂಬರ್ 3ರಂದು ದೀಪವಾಳಿ ಹಬ್ಬದ ಪ್ರಯುಕ್ತ ದೇವರಾಜು ಎಂಬುವವರು ಸಂಬಂಧಿಕರ ಮನೆಗೆ ತೆರಳಿದ್ದು, ಮರಳಿ ಮನೆಗೆ ಬಂದು ನೋಡಿದಾಗ ಅಪರಿಚಿತ ವ್ಯಕ್ತಿಗಳು ಮನೆಯ ಹಿಂದಿನ ಬಾಗಿಮು ಮುರಿದು, ಲಾಕರ್‌ನಲ್ಲಿದ್ದ ಸುಮಾರು 219 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸದರಿ ಪ್ರಕರಣದ ಘಟನೆ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಆರೋಪಿಯನ್ನು ಪತ್ತೆಹಚ್ಚಲು ಸೋಮವಾರಪೇಟೆ ಉಪವಿಭಾಗ ಡಿಎಸ್‌ಪಿ ಆರ್ ವಿ ಗಂಗಾಧರಪ್ಪ, ಕುಶಾಲನಗರ ವೃತ್ತ ಸಿಪಿಐ ರಾಜೇಶ್ ಕೆ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಮೋಹನ್ ರಾಜು ಹಾಗೂ ಠಾಣಾ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.
ಹಕ್ಕೆ ಗ್ರಾಮದ ನಿವಾಸಿ ಸೋಮಶೇಖರ್ ಎಸ್ ಕೆ(24) ಹಾಗೂ ಹೊಳೆನರಸಿಪುರ ತಾಲೂಕಿನ ಮಾಚಗೌಡನಹಳ್ಳಿ ನಿವಾಸಿ ಅಭೀಷೇಕ್ ಎನ್(24) ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಪೆನ್ಶನ್ ಹಣ ಬಿಡುಗಡೆಗೊಳಿಸಲು ಲಂಚ: ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಕಳವು ಮಾಡಿದ್ದ 168.02 ಗ್ರಾಂ ಚಿನ್ನಾಭರಣ, ನಗದು ₹2,54,000 ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಕಬ್ಬಿಣದ ಹಾರೆಯನ್ನು ವಶ ಪಡಿಸಿಕೊಳ್ಳಲಾಗಿದೆ.
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅಭಿನಂದಿಸಿದ್ದಾರೆ.