ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದು, ನಾವು ಪೊಲೀಸ್ ಠಾಣೆಗೆ ನುಗ್ಗುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವಿಚಾರವಾಗಿ ಬಿಜೆಪಿ ಕಾರ್ಯಕರ್ತನೆನ್ನಲಾದ ವ್ಯಕ್ತಿಯನ್ನು ಕೊಡಗು ಪೊಲೀಸರು ವಿಚಾರಣೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿದ ಪ್ರತಾಪ್ ಸಿಂಹ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ಘಟನೆ ವಿವರ
ಅಮ್ಮತ್ತಿ ಗ್ರಾಮದ ಲೋಶನ್ ಕಾರ್ಯಪ್ಪ ಎಂಬ ಬಿಜೆಪಿ ಕಾರ್ಯಕರ್ತ ಇತ್ತೀಚೆಗೆ ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತೆಲಂಗಾಣ ಸರ್ಕಾರಕ್ಕೆ ಕರ್ನಾಟಕದ ದುಡ್ಡು ಹಂಚುತ್ತಿರುವ ಎಟಿಎಂ ಸರ್ಕಾರ ಎಂದು ಟೀಕೆ ಮಾಡಲಾಗಿತ್ತು. ಈ ಸಂಬಂಧ ಕೊಡಗು ಎಸ್ಪಿಗೆ ದೂರು ಬಂದ ಹಿನ್ನೆಲೆಯಲ್ಲಿ ಅದನ್ನು ವಿರಾಜಪೇಟೆ ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ್ದರು. ಅದನ್ನು ಪರಿಗಣಿಸಿದ ಪೊಲೀಸರು ಲೋಶನ್ ಎಂಬುವವರನ್ನು ಠಾಣೆಗೆ ಕರೆಸಿ ಪೋಸ್ಟ್ ಡಿಲೀಟ್ ಮಾಡುವಂತೆ ಸೂಚಿಸಿ ತಪ್ಪೊಪ್ಪಿಗೆ ಬರೆಸಿಕೊಂಡು ಕಳುಹಿಸಿದ್ದರು.
ಬಿಜೆಪಿ ಕಾರ್ಯಕರ್ತ ಕೇವಲ ಒಂದು ಪೋಸ್ಟ್ ಹಂಚಿಕೊಂಡಿದ್ದಕ್ಕೆ ಪೊಲೀಸರು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡ ವಿಚಾರ ಅರಿಯುತ್ತಲೇ ಮಾಜಿ ಶಾಸಕ ಕೆ ಜಿ ಬೋಪಯ್ಯ ಜೊತೆಗೆ ಸಂಸದ ಪ್ರತಾಪ್ ಸಿಂಹ ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ವಾಣಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಯಾವ ಆಧಾರದ ಮೇಲೆ ತಾವು ಮುಚ್ಚಳಿಕೆ ಬರೆಸಿಕೊಂಡಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ನಾಗಲಾಪುರ ಸರ್ಕಾರಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ
ಇನ್ನು ಮುಂದೆ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಪೊಲೀಸ್ ಠಾಣೆಗೆ ನುಗ್ಗುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದರು.
ಈ ಘಟನೆಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಪೊಲೀಸರ ಕೆಲಸದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ ಎಂದು ಕೆಲವು ಕಾಂಗ್ರೆಸ್ ಕಾರ್ಯಕರ್ತರಿಂದ ಟೀಕೆ ವ್ಯಕ್ತವಾಗಿದೆ.