ಕೊಡಗು | ಹಲಸು ಕಿತ್ತನೆಂದು ಎರವ ಸಮುದಾಯದ ಕಾರ್ಮಿಕನನ್ನು ಗುಂಡಿಕ್ಕಿ ಕೊಂದ ಕೊಡವ ವ್ಯಕ್ತಿ

Date:

Advertisements

ಕೊಡಗು ಜಿಲ್ಲೆಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಎರವ ಸಮುದಾಯದ(ಪರಿಶಿಷ್ಟ ಪಂಗಡ) ಯುವಕ ತೋಟದಲ್ಲಿ ಹಲಸಿನ ಹಣ್ಣುಗಳನ್ನು ಕೀಳುತ್ತಿದ್ದನೆಂಬ ಕಾರಣಕ್ಕೆ ಕೊಡವ ಜಾತಿಯ ಉದ್ಯೋಗದಾತ ಗುಂಡಿಕ್ಕಿ ಕೊಂದಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ ಲೆನಿನಿಸ್ಟ್) ರಾಜ್ಯ ಸಮಿತಿಯು ಖಂಡನೆ ವ್ಯಕ್ತಪಡಿಸಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದೆ.

ಡಿಸೆಂಬರ್ 27ರಂದು ಈ ಘಟನೆ ನಡೆದಿದ್ದು, ಪಣಿಯವರ ಪೊನ್ನಣ್ಣ(23) ಎಂಬುವವರನ್ನು ಮಾಲೀಕ ಚಿನ್ನಪ್ಪ ಕೊಂದಿದ್ದಾನೆ.

ಆದಿವಾಸಿ ಪಣಿಯವರ ಪೊನ್ನಣ್ಣ, ಪೊರುಕೊಂಡ ಚಿನ್ನಪ್ಪ ಅವರ ಕಾಫಿ ತೋಟದಲ್ಲಿ ಕಾರ್ಮಿಕನಾಗಿದ್ದನು. ಈತನನ್ನು ಚಿಣ್ಣಪ್ಪ ಜಾತಿ ನಿಂದನೆ ಮಾಡಿ, ಬಳಿಕ ಡಬಲ್ ಬ್ಯಾರೆಲ್ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ.

Advertisements
ಮಾರ್ಕ್ಸಿಸ್ಟ್‌ ಮನವಿ

ಪೊನ್ನಣ್ಣ ಮತ್ತು ಅವರ ಪತ್ನಿ ಗೀತಾ ನಿತ್ಯದಂತೆ ತೋಟದಲ್ಲಿ ಕೆಲಸ ಮುಗಿಸಿ, ನಂತರ ಅದೇ ತೋಟದಲ್ಲಿ ಹಲಸಿನ ಹಣ್ಣನ್ನು ಕೀಳುತ್ತಿದ್ದಾಗ ಚಿಣ್ಣಪ್ಪ ಡಬಲ್ ಬ್ಯಾರೆಲ್ ಬಂದೂಕು ಹಿಡಿದು ದಂಪತಿಯ ಬಳಿ ಬಂದರು. ಹಲಸಿನ ಹಣ್ಣುಗಳನ್ನು ಕಿತ್ತಿದ್ದಕ್ಕಾಗಿ ಪೊನ್ನಣ್ಣನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಜಾತಿ ನಿಂದನೆಯನ್ನೂ ಮಾಡಿದನು. ಅಲ್ಲದೆ ಕೊನೆಗೂ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಗುಂಡೇಟಿಗೆ ಸಿಲುಕಿ ಹಲಸಿನ ಮರದಿಂದ ಕೆಳಗೆ ಬಿದ್ದ ಪೊನ್ನಣ್ಣನಿಗೆ ಮಾರಣಾಂತಿಕ ಗಾಯಗಳಾಗಿದ್ದವು. ತೋಟದ ಮಾಲೀಕ ಪೊರುಕೊಂಡ ಬನ್ಸಿ ಪೂಣಚ್ಚ ಅವರು ಪೊನ್ನಣ್ಣನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು. ಸದ್ಯ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಚಿನ್ನಪ್ಪನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.

ಎರವ ಸಮುದಾಯ

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) (ಕೊಲೆ), ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2) (ವಿ) ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3(ಪರವಾನಗಿ ಇಲ್ಲದೆ ಬಂದೂಕು ಕೊಂಡೊಯ್ಯುವುದು) ಮತ್ತು ಸೆಕ್ಷನ್ 25 (ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳಿಗೆ ಸಂಬಂಧಿಸಿದ ಅಪರಾಧಗಳಿಗೆ ಶಿಕ್ಷೆ) ಅಡಿಯಲ್ಲಿ ಆರೋಪಿ ಚಿನ್ನಪ್ಪ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಾತಿ ಹೆಸರಿನಲ್ಲಿ ಪಣಿಯವರ ಪೊನ್ನಣ್ಣನವರಿಗೆ ನಿಂದಿಸಿದ್ದ ಪೊರುಕೊಂಡ ಚಿನ್ನಪ್ಪ ವಿರುದ್ಧ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಆರೋಪಿಯನ್ನು ಶಿಕ್ಷಿಸುವಂತಹ ಸೂಕ್ತ ಕಲಂ ಸೇರಿಸದಿರುವುದರಿಂದ ಹಲವಾರು ಕಾರ್ಯಕರ್ತರು ಪೊಲೀಸರನ್ನು ಟೀಕಿಸಿದರು.

ಎರವ ಸಮುದಾಯ 2

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ ಲೆನಿನಿಸ್ಟ್) ರಾಜ್ಯ ಸಮಿತಿ ಈ ಘಟನೆಯನ್ನು ಖಂಡಿಸಿದ್ದು, “ಒಬ್ಬ ಆದಿವಾಸಿಯ ಕೊಲೆಯು ಕ್ರೂರ ದೌರ್ಜನ್ಯವಾಗಿದ್ದು, ಪ್ರಜಾಪ್ರಭುತ್ವ ತತ್ವಗಳ ಉಲ್ಲಂಘನೆಯಾಗಿದೆ. ಕಾನೂನಿನ ನಿಯಮವನ್ನು ಗಾಳಿಗೆ ತೂರಲಾಗಿದೆ. ಸಂವಿಧಾನವು ಆದಿವಾಸಿಗಳಿಗೆ ನೀಡಿರುವ ವಿಶೇಷ ಸ್ಥಾನಮಾನವನ್ನು ಅನಾವಶ್ಯಕಗೊಳಿಸಲಾಗಿದ್ದು, ಸಂವಿಧಾನವನ್ನು ನೆಲಸಮ ಮಾಡಿದಂತಾಗಿದೆ. ಒಂದು ಹಲಸಿನಕಾಯಿಗಾಗಿ ಆದಿವಾಸಿಗಳ ಮೇಲೆ ಕ್ರೂರವಾಗಿ ಗುಂಡಿಕ್ಕಿ ಜೀವ ತೆಗೆಯಲು ಸಿದ್ಧವಿರುವ ಪ್ರಬಲ ಸಮುದಾಯದವರು ದಮನಿತ ಸಮುದಾಯದವರನ್ನು ಹೇಗೆ ಬದುಕಲು ಬಿಡುತ್ತಾರೆ?. ಈ ಘಟನೆಯಿಂದ ಎರವ ಸಮುದಾಯದ ದಿನನಿತ್ಯದ ದಮನ ಎದ್ದು ಕಾಣುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರವ ಸಮುದಾಯ 1

“ಪೊನ್ನಣ್ಣನ ಹತ್ಯೆಯು ಎರವ ಸಮುದಾಯದ ಕಠೋರ ಸಾಮಾಜಿಕ ವಾಸ್ತವತೆಯನ್ನು ಮುನ್ನೆಲೆಗೆ ತಂದಿದೆ. ಅವರು ಶಿಕ್ಷಣ, ಅರೋಗ್ಯ, ವಸತಿ, ಉದ್ಯೋಗ, ಯಾವುದೇ ರೀತಿಯ ಭದ್ರತೆ, ಅಭಿವೃದ್ಧಿಯನ್ನು ಕಂಡಿರುವುದಿಲ್ಲ. ಕಾಫಿ ತೋಟಗಳ ಸಾಲು ಮನೆಗಳಲ್ಲಿ ವಾಸವಾಗಿದ್ದು, ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹೋಗುತ್ತ, ತೋಟಗಳಲ್ಲಿ ಕುಟುಂಬ ಸಮೇತ ದುಡಿಯುತ್ತಿದ್ದಾರೆ, ಇದರಲ್ಲೇ ಅವರ ಇಡೀ ಜೀವನ ಕಳೆದುಹೋಗುತ್ತದೆ. ಎರವ ಸಮುದಾಯದ ಅತಿಹೆಚ್ಚು ಕುಟುಂಬದವರಿಗೆ ವಸತಿಗಾಗಿ ಅಥವಾ ಸಾಗುವಳಿಗಾಗಿ ಯಾವುದೇ ಭೂಮಿ ಇಲ್ಲ. ಈ ಸಮುದಾಯ ಸಾಲದ ಸುಳಿಯಲ್ಲಿ ಸಿಲುಕಿ ಬಳಲುತ್ತಿದೆ. ಸರ್ಕಾರದ ಯೋಜನೆಗಳು ಇವರಿಗೆ ತಲುಪುವುದಿಲ್ಲ. ಈ ಸಮುದಾಯದ ಅಭಿವೃದ್ಧಿಗಾಗಿ ಅವರಿಗೆ ಯಾವುದೇ ಸವಲತ್ತುಗಳು ಇರುವುದಿಲ್ಲ. ಊಳಲು ಭೂಮಿ ಇಲ್ಲ, ಕಾಲಿಡಲು ತಮ್ಮದೇ ಆದ ಮನೆ ಇರುವುದಿಲ್ಲ. ಎರವರ ಸಾಮಾಜಿಕ ಸ್ಥಿತಿಯು ಪ್ರಬಲ ಸಮುದಾಯಗಳ ನೆರಳಿನಲ್ಲಿದೆ. ಇವರು ದಿನನಿತ್ಯ ದೌರ್ಜನ್ಯ, ನಿಂದನೆ, ತಾರತಮ್ಯವನ್ನು ಅನುಭವಿಸುತ್ತಾರೆ. ಈ ಸಮುದಾಯದ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರವು ಗಂಭೀರ ಕ್ರಮಗಳನ್ನು ವಹಿಸುವುದು ಅತ್ಯಗತ್ಯವಾಗಿದೆ” ಎಂದು ಆಗ್ರಹಿಸಿದರು.

ಕೊಲೆಗಾರ ಚಿನ್ನಪ್ಪ

ಈ ಘಟನೆಯ ಕುರಿತು ಸಿಪಿಐಎಂಎಲ್‌ ರಾಜ್ಯ ಸಮಿತಿ ಮುಖಂಡರು ಹಾಗೂ ಆದಿವಾಸಿ ಸಂಘರ್ಷ ಮೋರ್ಚಾ ಮುಖಂಡರು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜು, ಕೊಡಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶೇಖರ್ ಮತ್ತು ಕೊಡಗು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಅಧಿಕಾರಿ ಹೊನ್ನೇಗೌಡರನ್ನು ಭೇಟಿ ಮಾಡಿ ಪೊನ್ನಣ್ಣ ಅವರ ಕುಟುಂಬ ಮತ್ತು ಎರವ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಈ ಸುದ್ದಿ ಓದಿದ್ದೀರಾ? ಹಾಸನ | ಹೊಸವರ್ಷದ ಸಂಭ್ರಮ; ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿ

“ಈ ಪ್ರಕರಣದಲ್ಲಿ ತನಿಖೆ ಮತ್ತು ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ತಪ್ಪಿತಸ್ಥ ಚಿನ್ನಪ್ಪನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಮೃತ ಪೊನ್ನಣ್ಣ ನವರ ಪತ್ನಿ ಗೀತಾ, ಪೋಷಕರಿಗೆ ಕೂಡಲೇ ₹20 ಲಕ್ಷ ಪರಿಹಾರ ಧನ ನೀಡಬೇಕು. ಗೀತಾ ಅವರಿಗೆ ಸರ್ಕಾರಿ ನೌಕರಿ ಒದಗಿಸಬೇಕು. ಆಕೆಗೆ ಹಾಗೂ ಪೊನ್ನಣ್ಣ ಅವರ ಪೋಷಕರಿಗೆ ಮನೆ ನಿರ್ಮಿಸಿಕೊಡಬೇಕು. ಸಮಾಜ ಕಲ್ಯಾಣ ಇಲಾಖೆಯವರು ಪೊನ್ನಣ್ಣನ ತಮ್ಮ ಮಾಸ್ಟರ್ ಪೂವಣ್ಣನ ಶಿಕ್ಷಣಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ/ಪಂಗಡಗಳ(ದೌರ್ಜನ್ಯ ತಡೆ) ಕಾಯಿದೆ, 1989ರ ಅಡಿಯಲ್ಲಿರುವ ರಕ್ಷಣೆಗಳು ಮತ್ತು ಸವಲತ್ತುಗಳನ್ನು ಕಟ್ಟುನಿಟ್ಟಾಗಿ ಒದಗಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಮತ್ತು ಸಾಕ್ಷಿಗಳಿಗೆ ಇರುವ ಬೆದರಿಕೆ ವಿರುದ್ಧ ಎಲ್ಲ ರೀತಿಯಲ್ಲಿಯೂ ಸೂಕ್ತ ರಕ್ಷಣೆ ನೀಡಬೇಕು. ಸಾಕ್ಷಿಗಳು ನಾಶವಾಗದಂತೆ ಗಮನ ಹರಿಸಬೇಕು. ರಾಜ್ಯ ಸರ್ಕಾರವು ಎರವ ಸಮುದಾಯದ ಕ್ರೂರ ಸಾಮಾಜಿಕ ವಾಸ್ತವತೆಯನ್ನು ನಿರ್ಲಕ್ಷಿಸಬಾರದು, ಅವರಿಗೆ ವಸತಿ ಮತ್ತು ಸಾಗುವಳಿಗಾಗಿ ಭೂಮಿಯನ್ನು ಒದಗಿಸಬೇಕು. ಎರವರನ್ನು ತೋಟಗಳಲ್ಲಿನ “ಸಾಲು ಮನೆಗಳಲ್ಲಿ ಜೀತ” ಪದ್ಧತಿಯಿಂದ ಮುಕ್ತಗೊಳಿಸಬೇಕು. ಎರವ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅವಕಾಶ ಕಲ್ಪಿಸಲು ವಿಶೇಷ ಕಾಳಜಿ ವಹಿಸಬೇಕು” ಎಂದು ಆಗ್ರಹಿಸಿದರು.

    eedina
    ಈ ದಿನ ಡೆಸ್ಕ್‌
    Website |  + posts

    ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

    ಪೋಸ್ಟ್ ಹಂಚಿಕೊಳ್ಳಿ:

    LEAVE A REPLY

    Please enter your comment!
    Please enter your name here

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

    ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

    ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

    ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

    ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

    ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

    ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

    ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

    Download Eedina App Android / iOS

    X