- ಹಣ ಪಡೆಯುವುದಿಲ್ಲ ಬದಲಿಗೆ ಪೆನ್ನು ಪುಸ್ತಕ ನೀಡಿ
- ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಕೋರಿಕೆ
ಅದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್) ರಾಜ್ಯದ 20 ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ.
ಕರ್ನಾಟಕ ವಿದ್ಯಾರ್ಥಿ ಸಂಘಟನೆಯು ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯನ್ನು ಒಳಗೊಂಡಂತೆ ರಾಜ್ಯದ 20 ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ಅದಿವಾಸಿ ಮತ್ತು ಅಲೆಮಾರಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದೆ. ಅದರಲ್ಲೂ ಹೆಚ್ಚು ಹಾಡಿಗಳನ್ನು ಹೊಂದಿರುವ ಕೊಡಗಿನಲ್ಲಿ ಸಕ್ರಿಯವಾಗಿದೆ. ಆದಿವಾಸಿ ಮತ್ತು ಅಲೆಮಾರಿಗಳ ಮಕ್ಕಳಿಗೆ ಶಿಕ್ಷಣ ಕಲಿಸಲು ಮುಂದಾಗಿದ್ದು, ಮಕ್ಕಳ ಸಮ-ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿದೆ.
ಕೊಡಗಿನಲ್ಲಿ ಇನ್ನೂರಕ್ಕೂ ಅಧಿಕ ಹಾಡಿಗಳಿವೆ. ಈ ಹಾಡಿಗಳಲ್ಲಿರುವ ಹಲವು ಮಕ್ಕಳು ಶಾಲೆಯನ್ನು ತೊರೆದಿದ್ದಾರೆ. ಆದಿವಾಸಿ ಕುಟುಂಬಗಳು ಕೆಲಸಕ್ಕಾಗಿ ಅಥವಾ ಇವರನ್ನು ಒಕ್ಕಲೆಬ್ಬಿಸುವ ಹುನ್ನಾರದಿಂದ ಊರಿಂದ ಊರಿಗೆ ನೆಲೆ ಕಂಡುಕೊಳ್ಳಲು ಅಲೆದಾಡುತ್ತಾರೆ. ಇಂತಹ ಸಂದರ್ಭದಲ್ಲಿ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗತಳ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ. ಇದನ್ನು ಗಮನಿಸಿದ ವಿದ್ಯಾರ್ಥಿ ಸಂಘಟನೆ, ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂದು ಶ್ರಮಿಸುತ್ತಿದೆ.
ಆದಿವಾಸಿ ಸಮುದಾಯಗಳು ಹೊರಜಗತ್ತಿಗೆ ಬರುವುದೇ ಕಡಿಮೆ. ಇನ್ನು ಇವರ ಮಕ್ಕಳೂ ಪೋಷಕರೊಂದಿಗೆ ತೋಟಗಳಿಗೆ ತೆರಳುತ್ತಾರೆಯೇ ವಿನಃ ಶಾಲೆಗಳಿಗೆ ತೆರಳುವುದು ಅಪರೂಪ. ಹಾಗಾಗಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಶಾಲೆ ಬಿಟ್ಟಿರುವ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಮಕ್ಕಳನ್ನು ಗುರುತಿಸಿ, ಅವರ ಮನವೊಲಿಸಿ ಸಮೀಪದ ಶಾಲೆಗಳಿಗೆ ದಾಖಲಿಸಿ ಶಿಕ್ಷಣ ಕೊಡಿಸುವ ಕೆಲಸ ಮಾಡುತ್ತಿದೆ.
ಕರ್ನಾಟಕ ವಿದ್ಯಾರ್ಥಿ ಸಂಘಟನೆ ಆರಂಭಿಸಿದ 4 ಅಂಗನವಾಡಿಗಳನ್ನು ಸರ್ಕಾರ ವಹಿಸಿಕೊಂಡು ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರನ್ನು ನೇಮಿಸಿ ಸರ್ಕಾರದ ಸೇವೆ ಒದಗುವಂತಾಗಿರುವುದು ಸಂಘಟನೆಯ ಕೊಡುಗೆಯಾಗಿದೆ.
ಕೆವಿಎಸ್ ಪ್ರತಿ ವರ್ಷ 600 ಮಕ್ಕಳಿಗೆ ಅಕ್ಷರ ಕಲಿಸುವ ಗುರಿ ಇಟುಕೊಂಡಿದೆ. ಪ್ರಸ್ತುತ ಕೊಡಗಿನ 280 ವಿದ್ಯಾರ್ಥಿಗಳಿದ್ದು, ಅವರಿಗೆ ಅಕ್ಷರ ಕಲಿಸಲು ಸಂಘಟನೆ ಪ್ರಯತ್ನ ನಡೆಸುತ್ತಿದೆ. ಸದ್ಯ ಜಿಲ್ಲೆಯಲ್ಲಿ ಈವರೆಗೂ 2 ಹಾಡಿಗಳಲ್ಲಿ ಅಕ್ಷರಭ್ಯಾಸ ಆರಂಭಿಸಲಾಗಿದ್ದು, ವಿದ್ಯಾರ್ಥಿ ಸಂಘಟನೆಯೇ ಸಾವಿತ್ರಿ ಬಾಯಿ ಫುಲೆ ಹೆಸರಿನಲ್ಲಿ ಟೆಂಟ್ ಅಂಗನವಾಡಿಗಳನ್ನು ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಮಾಡಿದೆ.

‘ಹಾಡಿಗಳ ಸ್ಥಿತಿ ಇಂದಿಗೂ ಬದಲಾಗಿಲ್ಲ‘
“ಕೊಡಗಿನ ಆದಿವಾಸಿಗಳು ತಮ್ಮ ಹಾಡಿಗಳ ಜೋಪಡಿಯಲ್ಲಿಯೇ ಜೀವನ ಕಳೆಯುತ್ತಾರೆ. ಇನ್ನು ಹಲವು ಮಂದಿ ಕಾಫಿ ತೋಟದ ಮಾಲೀಕರ ಲೈನ್ ಮನೆಗಳಲ್ಲಿ ಜೀವನ ಸಾಗಿಸುತ್ತಾರೆ. ಸಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಹಾಡಿಗಳಲ್ಲಿನ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ಜಿಲ್ಲೆಯ ಹಲವು ಹಾಡಿಗಳಲ್ಲಿ ಇಂದು ಕುಡಿಯುವ ನೀರು, ರಸ್ತೆ, ಶೌಚಾಲಯ ಸೇರಿದಂತೆ ಮೂಲ ವ್ಯವಸ್ಥೆಯೇ ಇಲ್ಲ. ಹೀಗಿರುವಾಗ ಇಲ್ಲಿನ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಕೆಯೇ ಒಂದು ಸವಾಲು. ಇದನ್ನು ಅರಿತ ಸಂಘಟನೆ ಆದಿವಾಸಿ ಮತ್ತು ಅಲೆಮಾರಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಕಾರ್ಯ ಮಾಡುತ್ತಿದೆ” ಎಂದು ಕೆವಿಎಸ್ ರಾಜ್ಯ ಸಂಚಾಲಕ ಹೇಮಂತ್ ಕುಮಾರ್ ಈದಿನ.ಕಾಮ್‌ಗೆ ತಿಳಿಸಿದ್ದಾರೆ.
“ಗ್ರಾಮೀಣ ಪ್ರದೇಶದ ಆದಿವಾಸಿ ಮಕ್ಕಳು ನಿತ್ಯ ಶಾಲೆ, ಅಂಗನವಾಡಿಗಳಿಗೆ ನಡೆದುಕೊಂಡೇ ಹೋಗುತ್ತಾರೆ. ಗುಡ್ಡಗಾಡು ಪ್ರದೇಶದಲ್ಲಿ ಅತಿಯಾದ ಮಳೆ ಸುರಿಯುವ ಕಾರಣ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿಯೇ ಉಳಿಯಬೇಕಾದ ಅಥವಾ ನನೆದುಕೊಂಡು ಓಡಾಡುವ ಪರಿಸ್ಥಿತಿ ಇದೆ. ಈ ಹಿನ್ನೆಲೆ ಈ ಬಾರಿ ಮಕ್ಕಳಿಗೆ ಕೊಡೆ ಹಾಗೂ ರೈನ್ ಕೋಟ್ ನೀಡುವ ಬಗ್ಗೆ ಕೆವಿಎಸ್ ಚಿಂತನೆ ನಡೆಸುತ್ತಿದೆ” ಎಂದು ಕೆವಿಎಸ್ ಪ್ರಮುಖರು ತಿಳಿಸಿದ್ದಾರೆ.
“ಆದಿವಾಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬಯಸುವ ದಾನಿಗಳು ಮುಂದೆ ಬಂದರೆ ಅನುಕೂಲವಾಗುತ್ತದೆ. ನೆರವು ನೀಡಲು ಬಯಸುವವರು 9164942109 (ಹೇಮಂತ ಕುಮಾರ್) ರನ್ನು ಸಂಪರ್ಕಿಸಬಹುದು” ಎಂದು ಕೋರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮನರೇಗಾ ಕೂಲಿ ಕಾರ್ಮಿಕರು, ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ
ಹಣ ಬೇಡ, ಪೆನ್ನು ಪುಸ್ತಕ ನೀಡಿ
“ಸಂಘಟನೆಯು ಒಂದನೇ ತರಗತಿಯಿಂದ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ 600 ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೆರವು ನೀಡುತ್ತಾ ಬಂದಿದ್ದು, ಈ ಬಾರಿ ವಿದ್ಯಾರ್ಥಿಗಳಿಗೆ ಬೇಕಾಗುವ ಲೇಖನ ಸಾಮಗ್ರಿಗಳು, ಕೈ ಚೀಲ, ಪ್ರಾಜೆಕ್ಟ್ ವರ್ಕ್‌ಗೆ ಬೇಕಾಗುವ ಸಂಪನ್ಮೂಲ ಮತ್ತಿತರ ವಸ್ತುಗಳನ್ನು ಉಚಿತವಾಗಿ ಒದಗಿಸುತ್ತಿದೆ. ಅದಕ್ಕಾಗಿ ದಾನಿಗಳು ಮತ್ತು ಸಯಂ ಸೇವಾ ಸಂಸ್ಥೆಗಳಿಂದ ನೆರವು ಪಡೆದುಕೊಳ್ಳುತ್ತಿದೆ. ಆದರೆ, ಹಣ ಪಡೆಯುದಿಲ್ಲ. ಬದಲಿಗೆ ವಿದ್ಯಾರ್ಥಿಗಳಿಗೆ ಲಾಂಗ್ ನೋಟ್‌ಬುಕ್, ಕಿಂಗ್‌ಸೈಜ್ ನೋಟ್ ಬುಕ್, ಕಾಪಿ ಪುಸ್ತಕ, ಜಾಮಿಟ್ರಿ ಬಾಕ್ಸ್, ಪೆನ್, ಪೆನ್ಸಿಲ್ ಮತ್ತು ಶಾಲಾ ಬ್ಯಾಗ್ ನೀಡಲು ಸಿದ್ಧತೆ ನಡೆಸಿಕೊಂಡಿದೆ” ಎಂದು ತಿಳಿಸಿದ್ದಾರೆ.
“2021 ರ ವರೆಗೆ ನೂರಾರು ಸಮಸ್ಯೆಗಳ ಮಧ್ಯೆ ಕೆಲಸ ನಿರ್ವಹಿಸಿದ ಸಂಘಟನೆಗೆ ಇಂದು ಹಲವು ಮಂದಿ ದಾನಿಗಳು ಸಹಾಯ ಮಾಡಲು ಮುಂದಾಗಿದ್ದಾರೆ. ವಿದ್ಯಾರ್ಥಿ ಸಂಘಟನೆಯಲ್ಲಿಯೇ ದುಡಿದು ಇಂದು ಉತ್ತಮ ಉದ್ಯೋಗ ಪಡೆದುಕೊಂಡವರು, ಚಿತ್ರನಟರು, ಸಾಹಿತಿಗಳು, ಸರ್ಕಾರಿ ನಿವೃತ್ತ ಅಧಿಕಾರಿಗಳು, ಜನಪ್ರತಿನಿಧಿಗಳು, ವಕೀಲರು ಸೇರಿದಂತೆ ಬಹುತೇಕ ಮಂದಿ ಸಂಘಟನೆಯ ಕಾರ್ಯಕ್ಕೆ ಕೈ ಜೋಡಿಸಿ ಆದಿವಾಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿರುವುದು ಸಂಘಟನೆಗೆ ಮತ್ತಷ್ಟು ಬಲ ತುಂಬಿದಂತಾಗಿದೆ” ಎಂದು ಶ್ಲಾಘಿಸಿದ್ದಾರೆ.