ಭೂ ಗುತ್ತಿಗೆ ಆದೇಶ ವಿರೋಧಿಸಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪೆಗೊಳ್ಳಿ ಗ್ರಾಮದಲ್ಲಿ 41 ದಿನಗಳಿಂದ ಸತತವಾಗಿ ಮಳೆ, ಗಾಳಿ, ಚಳಿಯೆನ್ನದೆ ಆದಿವಾಸಿಗಳು ನಿವೇಶನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.
ವಿಪರ್ಯಾಸವೆಂದರೆ ರಾಜ್ಯ ಸರ್ಕಾರ ಕೊಡಗಿನಲ್ಲಿ ಭೂ ಗುತ್ತಿಗೆ ಆದೇಶ ತಂದಿದೆ. ಅದರಂತೆ ಭೂ ಮಾಲೀಕರು, ಉಳ್ಳವರು
ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಕಾನೂನಾತ್ಮಕವಾಗಿ ಸರಿ ಸುಮಾರು 30 ವರ್ಷಗಳಿಗೆ 25 ಎಕರೆ ಗುತ್ತಿಗೆ ಪಡೆದುಕೊಳ್ಳುವ ಅವಕಾಶ ಮಾಡಿಕೊಟ್ಟಿದೆ.
ಈಗಾಗಲೇ ಜಿಲ್ಲಾದ್ಯಂತ ಪ್ರಕ್ರಿಯೆ ನಡೆಯುತ್ತಿದೆ. ಇಡೀ ಕೊಡಗಿನಲ್ಲಿ ಭೂಮಿಯೆಲ್ಲ ಉಳ್ಳವರ ಪಾಲಾದರೆ ಆದಿವಾಸಿ, ದಲಿತ,
ಹಿಂದುಳಿದ, ಶೋಷಿತರ ಬದುಕು ನೆಲೆಗೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗೆ ಸರ್ಕಾರ ಈವರೆಗೆ ಉತ್ತರ ನೀಡಿಲ್ಲ.

ಉಳ್ಳವರು ಒತ್ತುವರಿ ಮಾಡಿದ ಜಾಗ 25 ಎಕರೆ ಗುತ್ತಿಗೆ ಪಡೆಯಬಹುದಾದರೆ, ಸಾಲು ಮನೆಗಳಲ್ಲಿ ಜೀತ ಮಾಡಿಕೊಂಡು ಜೀವನ ಮಾಡುತ್ತಿರುವ, ಏನೂ ಇಲ್ಲದ ನಿರ್ಗತಿಕ ಆದಿವಾಸಿಗಳಿಗೆ ವಾಸ ಮಾಡಲು ಜಾಗವಿಲ್ಲ. ಮನೆ ಕಟ್ಟಲು ಸ್ಥಳವಿಲ್ಲ ಇದ್ಯಾವ ನ್ಯಾಯ ಎನ್ನುವಂತಿದೆ.
ಭೂ ಮಾಲೀಕರು ಕೇವಲ ಸಾವಿರಾರು ರೂಪಾಯಿ ಲೆಕ್ಕದಲ್ಲಿ ಸರ್ಕಾರಕ್ಕೆ ಪಾವತಿಸಿ ಭೂಮಿಯನ್ನು ಗುತ್ತಿಗೆ ಪಡೆಯುತ್ತ ಹೋದರೆ ಕೊಡಗಿನಲ್ಲಿ ಜಾಗವೇ ಇರುವುದಿಲ್ಲ. ಮುಂದೇ ಬಡವರ ಪರಿಸ್ಥಿತಿಯೇನು?

ಸರ್ಕಾರ ಉಳ್ಳವರಿಗೆ ಗುತ್ತಿಗೆ ಭೂಮಿ ನೀಡಿದಂತೆಯೇ ಬಡವರಿಗೂ ಭೂಮಿಯನ್ನು ಗುತ್ತಿಗೆಗೆ ನೀಡಬಹುದಿತ್ತು. ಸರ್ಕಾರ ಈಗ ನಿಯಮ ಮಾಡಿರುವಂತೆಯೇ ಒಂದೆರೆಡು ಎಕರೆ ಜಾಗವನ್ನು ಆದಿವಾಸಿಗಳಿಗೆ ನೀಡಿ. ಅವರಿಂದಲೂ ನಿಗದಿತ ಹಣ ಪಡೆದಿದ್ದರೆ ಆದಿವಾಸಿಗಳ ಬದಕೂ ಕೂಡಾ ಹಸನಾಗುತಿತ್ತು. ಆದರೆ ಸರ್ಕಾರದ ಧೋರಣೆ ಅಕ್ಷರಶಃ ಕೊಡಗಿನ ಶೋಷಿತ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಬದುಕು ದುಸ್ತರವಾಗಿ, ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ. ಬದುಕಿದ್ದರೂ ಕೂಡಾ ಅಸ್ತಿತ್ವವೇ ಇರದ ಪರಿಸ್ಥಿತಿ ನಿರ್ಮಾಣವಾಗಿದೆ.
ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ಬಹುಜನ ಕಾರ್ಮಿಕರ ಸಂಘ ಜಂಟಿ ಆಶ್ರಯದೊಂದಿಗೆ ಸುಮಾರು 250 ಮಂದಿ ನಿವೇಶನಕ್ಕಾಗಿ ಧರಣಿ ನಡೆಸುತ್ತಿದ್ದಾರೆ. ಹೊದ್ದೂರು ಪಂಚಾಯಿತಿ ವ್ಯಾಪ್ತಿಯಲ್ಲಿ 400 ಕುಟುಂಬಗಳು, ಮೂರ್ನಾಡು ಪಂಚಾಯಿತಿ ವ್ಯಾಪ್ತಿಯಲ್ಲಿ 500 ಕುಟುಂಬಗಳಿಗೆ ನಿವೇಶನ ಇಲ್ಲ. ಈಗಲೂ ಸಾಲು ಮನೆ, ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಒಬ್ಬರಿಗೂ ಕೂಡಾ ನಿವೇಶನ ದೊರಕಿಲ್ಲ. ಬದುಕಿನುದ್ದಕ್ಕೂ ಒಂದು ಮನೆ ಕಟ್ಟಿಕೊಳ್ಳಲು ಆಗದಂತಹ ಕೆಟ್ಟ ಪರಿಸ್ಥಿತಿ ಕೊಡಗಿನದ್ದು.

ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ ನಡೆದಿದೆ. ಸಭೆಯಲ್ಲಿ ಆದಿವಾಸಿಗಳಿಗೆ ನಿವೇಶನ ನೀಡುವ ಬಗ್ಗೆ ಚರ್ಚೆ ನಡೆದು ಸಭಾ ನಡಾವಳಿಯಾದರೂ ಕೂಡಾ ಕೊಡಗಿನ ಮಟ್ಟಿಗೆ ಗ್ರಾಮ ಸಭೆಗಳು ವಿಫಲವಾಗಿವೆ. ಈ ಕುರಿತು ಹೆಚ್ಚಿನ ಪ್ರಚಾರವೇ ಆಗುವುದಿಲ್ಲ. ಗ್ರಾಮ ಸಭೆಗಳ ಶಕ್ತಿ ಕುಂದಿಸುವ ವ್ಯವಸ್ಥಿತ ಹುನ್ನಾರ ಕೊಡಗಿನಲ್ಲಿ ನಡೆಯುತ್ತಿದೆ.
ಭೂ ಮಾಲಿಕತ್ವ ಎನ್ನುವುದು ಉಳ್ಳವರ ಪಾರುಪತ್ಯವಾಗಿದ್ದು, ಶೋಷಿತರ ಪಾಲಿಗೆ, ಆದಿವಾಸಿಗಳಿಗೆ ಈವರೆಗೆ ಕನಸಾಗಿಯೇ ಉಳಿದಿದೆ. ದೇಶದಲ್ಲಿ ಬಾಬಾ ಸಾಹೇಬರ ಸಂವಿಧಾನ ಎಲ್ಲರಿಗೂ ಒಂದೆ. ಎಲ್ಲರೂ ಮೂಲಭೂತ ಸೌಲಭ್ಯ ಪಡೆಯುವ ಹಕ್ಕಿದೆ. ಆದರೆ ಕೊಡಗಿನ ಬಡ ಜನರಿಗೆ ಇದ್ಯಾವುದೂ ಅನ್ವಯವಾಗಿಲ್ಲ.
ಸರ್ಕಾರಗಳು, ಜಿಲ್ಲಾಡಳಿತ, ತಾಲೂಕು ಆಡಳಿತ, ಸ್ಥಳೀಯ ಆಡಳಿತ ತೀರಾ ಕೀಳಾಗಿ ಕಾಣುತ್ತ ಆದಿವಾಸಿ, ದಲಿತ, ಶೋಷಿತ ವರ್ಗದ ಜನರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಕೊಡಗಿನಲ್ಲಿ ಉಳ್ಳವರಿಗೆ ಒಂದು ಕಾನೂನು, ಬಡವರಿಗೆ ಇನ್ನೊಂದು ಕಾನೂನು ಎನ್ನುವ ಪರಿಸ್ಥಿತಿಯಿದೆ. ಒತ್ತುವರಿ ಮಾಡಿದ ಜಾಗವನ್ನು ತಾವೇ ಅನುಭವಿಸಿ ಎಂದು ಸರ್ಕಾರವೇ ಉಳ್ಳವರಿಗೆ ರಾಜ ಮಾರ್ಗದಲ್ಲಿ ವ್ಯವಸ್ಥೆ ಕಲ್ಪಿಸುತ್ತೆ. ಆದರೆ ಕೊಡಗಿನಲ್ಲೇ ಹುಟ್ಟಿ ಬೆಳೆದ ಬಡ ವರ್ಗದವರಿಗೆ ಇರಲು ಸೂರಿಲ್ಲ, ಸತ್ತರೆ ಹೂಳಲು ಜಾಗವಿಲ್ಲ. ಇದ್ದರೂ ಕೂಡಾ ಹೊರಜಗತ್ತಿಗೆ ಇದ್ದರೋ ಇಲ್ಲವೋ ಎನ್ನುವುದೂ ತಿಳಿಯುವುದಿಲ್ಲ.

ಭೂಮಿ ವಸತಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಕೆ ಮೊಣ್ಣಪ್ಪ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕೊಡಗು ನೋಡಲು ಚೆನ್ನ, ಬದುಕಲು ಅಲ್ಲ. ಇಲ್ಲೇನಿದ್ದರೂ ಉಳ್ಳವರಿಗೆ ಮಾತ್ರ ಬದುಕು. ಶೋಷಿತರಿಗೆ, ದಲಿತರಿಗೆ, ಆದಿವಾಸಿಗಳ ಬದುಕು ಕೇವಲ ದುಡಿಮೆಗೆ ಸೀಮಿತ. ಬೆಳಿಗ್ಗೆಯಿಂದ ಜೀತ ಮಾಡುವುದು ಬಿಟ್ಟರೆ ಬೇರೆ ಬದುಕನ್ನು ಕಾಣಲು ಸಾಧ್ಯವೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಮೀಸಲಾತಿ ಎನ್ನುವುದು ಕೊಡಗಿಗೆ ಈವರೆಗೂ ಸಿಕ್ಕಿಲ್ಲ. ಶಾಸಕಾಂಗ ವ್ಯವಸ್ಥೆಯಲ್ಲಿ ರಾಜಕೀಯ ಪ್ರಾತಿನಿಧ್ಯ ಇಲ್ಲವೇ ಇಲ್ಲ.
ಆದಿವಾಸಿಗಳ ಬದುಕಷ್ಟೇ ಅಲ್ಲ. ಪ್ರತಿಯೊಂದು ಸವಲತ್ತು, ಹಕ್ಕುಗಳಿಂದ ವಂಚಿತರಾಗಿದ್ದಾರೆ. ಜೀತದಾಳುಗಳಾಗಿ ಬದುಕು ಸವೆಸುತ್ತಿದ್ದಾರೆಯೇ ಹೊರತು ಈವರೆಗೆ ನಿಜವಾದ ಸ್ವಾತಂತ್ರ್ಯ ಬಂದಿಲ್ಲ.
“ಪ್ರತಿ ಗ್ರಾಮ ಪಂಚಾಯಿತಿ ಆದಿವಾಸಿಗಳಿಗೆ, ಶೋಷಿತ ವರ್ಗಕ್ಕೆ 50 ಎಕರೆ ಭೂಮಿ ಮೀಸಲು ಇಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ವಿಧಾನಸಭಾ ಸದಸ್ಯ ಡಾ ಮಂತರ್ ಗೌಡ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೆ ಅಷ್ಟೊಂದು ಜಾಗ ಎಲ್ಲಿದೆ. ಎಲ್ಲರನ್ನು ನಿಷ್ಠುರ ಮಾಡಿಕೊಳ್ಳಲು ಆಗುತ್ತ ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ. ಭೂ ಮಾಲೀಕರಿಗೆ ಗುತ್ತಿಗೆ ಪಡೆಯಲು ಜಾಗವಿದೆ. ಆದೇ ಆದಿವಾಸಿಗಳು ಮನೆ ಕಟ್ಟಿಕೊಳ್ಳಲು ಜಾಗವಿಲ್ಲ. ಇಂತಹ ವಿಚಿತ್ರ ಪರಿಸ್ಥಿತಿಯಲ್ಲಿ ನಮ್ಮ ಹೋರಾಟ ನಡೆಯುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಅರೆಬೆತ್ತಲೆ ಮೆರವಣಿಗೆ: 4ನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಧರಣಿ ಸತ್ಯಾಗ್ರಹ
“ಕೊಡಗಿನ ಮಟ್ಟಿಗೆ ಹೇಳುವುದಾದರೆ ಜಾತಿ ವ್ಯವಸ್ಥೆ ಶೋಚನೀಯ ಸ್ಥಿತಿಗೆ ತಂದು ನಿಲ್ಲಿಸಿದೆ. ಸರ್ವೇ ನಂಬರ್ 53/10ರಲ್ಲಿ 5 ಎಕರೆ 80 ಸೆಂಟ್ ಜಾಗ ಸರ್ಕಾರದ ಪಟ್ಟವಿದ್ದು, ಬರಮಾಡ ಸುಬ್ರಮಣಿ, ಚಟ್ಟಿಮಾಡ ಪ್ರಸನ್ನ, ಚೆಟ್ಟಿಮಾಡ ಅನಿಲ್ ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ ಸರ್ವೇ ನಂ 49/3ರಲ್ಲಿ 2 ಎಕರೆ 65 ಸೆಂಟ್ ಜಾಗವಿದ್ದು, ತೆಕ್ಕಡೆ ಸೋಮಣ್ಣ ಎಂಬುವರು ಸರ್ಕಾರಿ ಜಾಗ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಲಾಗಿ ಮಡಿಕೇರಿ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ” ಎಂದರು.
“ಆದಿವಾಸಿಗಳಿಗೆ ನಿವೇಶನ ಕೊಡಿಸುವ ಭರವಸೆ ನೀಡಿದ್ದಾರೆ. ಆದರ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಸ್ಥಳಕ್ಕೆ ಎಂಎಲ್ಎ ಡಾ ಮಂತರ್ ಗೌಡ ಭೇಟಿ ನೀಡಬೇಕು. ಆದಿವಾಸಿಗಳ ಅಹವಾಲು ಆಲಿಸಿ ನಮ್ಮಗಳ ಹೋರಾಟಕ್ಕೆ ಸ್ಪಂದಿಸಬೇಕು.
ಒತ್ತುವರಿ ಬಿಡಿಸಿ ಆದಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು” ಎಂದು ಒತ್ತಾಯಿಸಿದರು.
