ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾದ ಮೈಸೂರಿನ ಮಹಾರಾಜ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆಯನ್ನು ಮಡಿಕೇರಿಯ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ನಾಡಿನ ಇತಿಹಾಸದಲ್ಲಿ ಮರೆಯಲಾಗದ ದಿವ್ಯಚೇತನರಾಗಿದ್ದು, ಅವರ ಕೊಡುಗೆಯನ್ನು ಎಷ್ಟೇ ವರ್ಣಿಸಿದರೂ ಸಾಲದು ಎಂದು ಹೇಳಿದರು.
“ಇಂದು ಶತಮಾನೋತ್ಸವ ಆಚರಿಸುತ್ತಿರುವ ಅನೇಕ ಸಂಘ-ಸಂಸ್ಥೆಗಳ ಸ್ಥಾಪಕರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯದ ಆಡಳಿತದಲ್ಲಿ ಹೊಸ ಪ್ರಯೋಗಗಳನ್ನು ಜಾರಿಗೆ ತಂದರು. ತಮ್ಮ ಪ್ರಜೆಗಳಿಗೆ ಅಖಂಡ ಸುಖ-ಸಂಪತ್ತನ್ನು ಒದಗಿಸುವುದೇ ಜೀವನದ ಪರಮೋದ್ದೇಶ ಎಂದು ಘೋಷಿಸಿ, 1923ರಲ್ಲಿ ಪ್ರಜಾ ಪ್ರತಿನಿಧಿ ಸಭೆಯನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ರೂಪಿಸಿದರು” ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನಷ್ಟೇ ಅಲ್ಲದೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಅಪೆಕ್ಸ್ ಬ್ಯಾಂಕ್, ಲ್ಯಾಂಡ್ ಬ್ಯಾಂಕ್, ಮೈಸೂರು ರಾಜ್ಯ ಕೈಗಾರಿಕಾ ಬ್ಯಾಂಕ್, ಮೈಸೂರು ವಿಶ್ವವಿದ್ಯಾಲಯ, ಮಹಾರಾಜ ಮತ್ತು ಮಹಾರಾಣಿ ಕಾಲೇಜುಗಳು, ಯುವರಾಜ ಕಾಲೇಜು, ಕೃಷ್ಣರಾಜಸಾಗರ ಹಾಗೂ ವಾಣಿವಿಲಾಸ ಸಾಗರ ಅಣೆಕಟ್ಟುಗಳು, ಶಿವನಸಮುದ್ರದ ವಿದ್ಯುತ್ ಉತ್ಪಾದನಾ ಕೇಂದ್ರ, ಮೈಸೂರು ಸ್ಯಾಂಡಲ್ ವುಡ್ ಫ್ಯಾಕ್ಟರಿ, ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್, ಇಂಜಿನಿಯರಿಂಗ್ ಮತ್ತು ವಾಣಿಜ್ಯ ಕಾಲೇಜುಗಳು, ಮಂಡ್ಯದ ಸಕ್ಕರೆ ಕಾರ್ಖಾನೆ, ಭದ್ರಾವತಿಯ ಉಕ್ಕು ಮತ್ತು ಕಾಗದ ಕಾರ್ಖಾನೆ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳ ಹಿಂದಿನ ಶಕ್ತಿಯಾಗಿದ್ದರು ಎಂದು ಕೇಶವ ಕಾಮತ್ ಸ್ಮರಿಸಿದರು.
ಅವರ ಆಡಳಿತಾವಧಿಯಲ್ಲಿ ಗ್ರಾಮ ನಿರ್ಮಲೀಕರಣ, ವೈದ್ಯಕೀಯ ಸೇವೆ, ಶಿಕ್ಷಣದ ಪ್ರಸಾರ, ಕುಡಿಯುವ ನೀರಿನ ವ್ಯವಸ್ಥೆ, ಸಾರಿಗೆ ಸೌಲಭ್ಯ ಹಾಗೂ ಸ್ವಯಂ ಆಡಳಿತ ಸಂಸ್ಥೆಗಳ ಬಲವರ್ಧನೆಗೆ ವಿಶೇಷ ಆದ್ಯತೆ ನೀಡಲಾಯಿತು. ರಾಜ್ಯದಾದ್ಯಂತ ಆಸ್ಪತ್ರೆಗಳ ಸ್ಥಾಪನೆ, ಹೊಸ ರೈಲು ಮಾರ್ಗಗಳ ನಿರ್ಮಾಣ ಹಾಗೂ ಕೊಡಗಿನಲ್ಲಿ ಕಾಫಿ ಸಂಶೋಧನಾ ಕೇಂದ್ರಗಳ ಆರಂಭವೂ ಅವರ ದೂರದೃಷ್ಟಿಯ ಫಲವಾಗಿದೆ ಎಂದು ಅವರು ಹೇಳಿದರು.
ದೇಶದ ಇತಿಹಾಸದಲ್ಲಿ ಜನಸೇವೆಗೆ ಅತ್ಯುನ್ನತ ಆದ್ಯತೆ ನೀಡಿದ ರಾಜರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅಗ್ರಗಣ್ಯರು ಎಂದು ಕೇಶವ ಕಾಮತ್ ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ?ಶ್ರೀರಂಗಪಟ್ಟಣ | ದೂರದೃಷ್ಟಿಯುಳ್ಳ ರಾಷ್ಟ್ರನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಸಂಘಟನಾ ಕಾರ್ಯದರ್ಶಿ ವಾಸು ರೈ, ಕುಶಾಲನಗರ ತಾಲೂಕು ಗೌರವ ಕೋಶಾಧಿಕಾರಿ ಕೆ.ವಿ. ಉಮೇಶ್ ಹಾಗೂ ಸದಸ್ಯರಾದ ಭಾರತಿ ರಮೇಶ್, ರೇಣುಕಾ, ಅಜಯ್ ಸೇರಿದಂತೆ ಹಲವರು ಇದ್ದರು.





