ಇಂದು ನಾವು ಸ್ಮರಿಸುತ್ತಿರುವುದು ಕೇವಲ ಒಬ್ಬ ರಾಜನನ್ನು ಅಲ್ಲ, ಒಬ್ಬ ದೂರದೃಷ್ಟಿಯುಳ್ಳ ರಾಷ್ಟ್ರನಿರ್ಮಾತರನ್ನು ಎಂದು ಶ್ರೀರಂಗಪಟ್ಟಣದ ಪ್ರಜ್ಞಾವಂತ ವೇದಿಕೆ ಸಂಚಾಲಕ ಸಿ.ಎಸ್. ವೆಂಕಟೇಶ್ ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ವಡಿ ಅವರ ಸಾಧನೆಗಳನ್ನು ಗಮನಿಸಿದರೆ ಅವರ ದೂರದೃಷ್ಟಿ ಹಾಗೂ ಜನಪರ ಆಡಳಿತದ ಮಹತ್ವ ಸ್ಪಷ್ಟವಾಗುತ್ತದೆ ಎಂದರು.
ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಉನ್ನತ ಶಿಕ್ಷಣಕ್ಕೆ ಹೊಸ ದಿಕ್ಕು ತೋರಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಗಳನ್ನು ಆರಂಭಿಸಿದ ಅವರು, ‘ವಿದ್ಯೆ ಇಲ್ಲದ ಪ್ರಜೆ ಕಣ್ಣಿಲ್ಲದವನಂತೆ’ ಎಂಬ ನಂಬಿಕೆಯನ್ನು ಹೊಂದಿದ್ದರು ಎಂದು ತಿಳಿಸಿದರು.
ಕೃಷಿ ಹಾಗೂ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಕೃಷ್ಣರಾಜಸಾಗರ ಅಣೆಕಟ್ಟನ್ನು ನಿರ್ಮಿಸುವ ಮೂಲಕ ಲಕ್ಷಾಂತರ ಎಕರೆ ಭೂಮಿಗೆ ಜೀವ ತುಂಬಿದ ಮಹಾನ್ ದೂರದೃಷ್ಟಿಯ ಆಡಳಿತಗಾರರಾಗಿದ್ದರು ಎಂದರು.
ಕೈಗಾರಿಕಾ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ಸ್ಯಾಂಡಲ್ ಆಯಿಲ್ ಫ್ಯಾಕ್ಟರಿ, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಮೈಸೂರಿನ ಸಾಬೂನು ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಸ್ವಾವಲಂಬಿ ಆರ್ಥಿಕ ವ್ಯವಸ್ಥೆಗೆ ಭದ್ರ ಅಡಿಪಾಯ ಹಾಕಿದರು ಎಂದು ಹೇಳಿದರು.
ಸಾಮಾಜಿಕ ಸುಧಾರಣೆಯಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದ ನಾಲ್ವಡಿ ಅವರು ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಅವಕಾಶ ಕಲ್ಪಿಸಿದರು. ದೇವಾಲಯ ಪ್ರವೇಶ, ದಲಿತರ ಶಿಕ್ಷಣ ಹಾಗೂ ಪ್ರಜಾಪ್ರತಿನಿಧಿ ಸಭೆಯ ರಚನೆಯ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಿದರು ಎಂದು ವಿವರಿಸಿದರು.
‘ಅಧಿಕಾರ ಇರುವವನು ಎತ್ತರಕ್ಕೆ ನೋಡಬಾರದು, ಕೆಳಗೆ ನಿಂತಿರುವ ಜನರ ಕಣ್ಣಿಗೆ ನೋಡಬೇಕು’ ಎಂಬ ಸಂದೇಶವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ನಮಗೆ ಕಲಿಸುತ್ತದೆ. ಅವರ ಆದರ್ಶಗಳ ಹಾದಿಯಲ್ಲಿ ನಡೆಯುವುದೇ ನಿಜವಾದ ಜಯಂತಿ ಆಚರಣೆಯಾಗಿದೆ ಎಂದು ವೆಂಕಟೇಶ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ಶ್ರೀರಂಗನಾಯಕಿ ಸಮಾಜದ ಅಧ್ಯಕ್ಷೆ ಡಿ. ವಿಶಾಲಾಕ್ಷಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಿಂದ ಕುವೆಂಪು ಸರ್ಕಲ್‌ವರೆಗೆ ನಾಲ್ವಡಿ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಬೌದ್ಧ ಮಹಾಸಭಾ ಮಾಜಿ ಅಧ್ಯಕ್ಷ ಕೆ.ಟಿ. ರಂಗಪ್ಪ, ಮುಸ್ಲಿಂ ಸೌಹಾರ್ದ ವೇದಿಕೆ ಅಧ್ಯಕ್ಷ ಅಪ್ಸರ್ ಖಾನ್, ಚಂದಗಾಲು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶಿವಣ್ಣ ಹಾಗೂ ಕುವೆಂಪು ಜಯಂತಿ ಆಚರಣೆ ಸಮಿತಿಯ ಅಧ್ಯಕ್ಷ ಸಿ. ಸ್ವಾಮಿಗೌಡ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ನುಡಿನಮನ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಹುಣಸೂರು ತಾಲೂಕಿನ ಹಳ್ಳಿಗಳಿಗೆ ಸಿಇಒ ಭೇಟಿ; ಪ್ರಗತಿ ಪರಿಶೀಲನೆ
ಕಾರ್ಯಕ್ರಮದಲ್ಲಿ ದಸಂಸ ರವಿಚಂದ್ರ, ಚಿಕ್ಕತಮ್ಮೆಗೌಡ, ಸುಷ್ಮಾ, ಸುಜಾತಾ ಅರಸ್, ಗಂಜಾಂ ಆಯುಬ್, ಎಸ್.ಎಂ. ಶಿವಕುಮಾರ್, ಹೊನ್ನಗಿರಿ ಗೌಡ, ಕೆ.ಎಸ್. ಜಯಶಂಕರ್ ಸೇರಿದಂತೆ ಹಲವರು ಇದ್ದರು.






