ಕೊಡಗಿನಲ್ಲಿ ಆದಿವಾಸಿಗಳ ಕುರಿತು ವರದಿ ಮಾಡಲು ಬಂದಿದ್ದ ಕೇರಳ ಮೂಲದ ಪತ್ರಕರ್ತನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಒಳಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ಪಾಲಿಸದೆ ಪತ್ರಕರ್ತನನ್ನು ಪೊಲೀಸರು ವಶಕ್ಕೆ ಪಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೇರಳದ ಪತ್ರಕರ್ತ ರಿಜಾಸ್ ಅವರು ತಮ್ಮನ್ನು ಪೊಲೀಸರು ವಶಕ್ಕೆ ಪಡೆದಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. “ನಾನು ಆದಿವಾಸಿಗಳ ವಾಸಸ್ಥಳಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಖಾಸಗಿ ಕಾರಿನಲ್ಲಿ ಬಂದ ಮೂವರು ಪೊಲೀಸರು ನಿರ್ಜನ ಪ್ರದೇಶದಲ್ಲಿ ಬಸ್ ನಿಲ್ಲಿಸಿ, ಯಾವುದೇ ವಾರಂಟ್ ಇಲ್ಲದೆ ನನ್ನನ್ನು ವಶಕ್ಕೆ ಪಡೆಯಲು ಬಂದಿದ್ದರು. ಕೆಲವು ನಿಮಿಷ ವಾಗ್ವಾದ ನಡೆದ ಬಳಿಕವೂ ನನ್ನನ್ನು ಅವರ ಕಾರಿನಲ್ಲಿ ಕೂರಿಸಿಕೊಂಡು ವಿರಾಜಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದರು” ಎಂದು ಆರೋಪಿಸಿದ್ದಾರೆ.
“ವಿಚಾರಣೆಯ ಬಳಿಕ ನನ್ನನ್ನು ಠಾಣೆಯಿಂದ ಕಳಿಸಿದರು. ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಅವರು ಇತರ 4 ಅಧಿಕಾರಿಗಳ ಸಮ್ಮುಖದಲ್ಲಿ ನನ್ನನ್ನು ವಿಚಾರಣೆ ನಡೆಸಿದರು. ‘ಅರ್ಬನ್ ನಕ್ಸಲರು ಕೊಚ್ಚಿಯಿಂದ ಕರ್ನಾಟಕಕ್ಕೆ ಬಂದಿದ್ದಾರೆಂಬ ಮಾಹಿತಿ ಇದೆ’ ಎಂದು ಅವರು ಹೇಳಿದರು. ‘ಪ್ರಬಲ ಜಾತಿಯ ಉದ್ಯೋಗದಾತರಿಂದ ಆದಿವಾಸಿ ಕಾರ್ಮಿಕರು ಎದುರಿಸುತ್ತಿರುವ ಹಿಂಸಾಚಾರದ ಬಗ್ಗೆ ವರದಿ ಮಾಡಲು ಬಂದಿದ್ದೇನೆ. ಆದಿವಾಸಿಗಳ ಸಂಕಷ್ಟದ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ವರದಿ ಮಾಡದ ಕಾರಣ ನಾನು ಸ್ವಯಂಪ್ರೇರಿತನಾಗಿ ವರದಿ ಮಾಡಲು ಬಂದಿದ್ದೇನೆ’ ಎಂದು ನಾನು ಅಧಿಕಾರಿಗಳಿಗೆ ತಿಳಿಸಿದೆ. ನನ್ನ ಮಾತಿಗೆ ಪ್ರಿಕ್ರಿಯಿಸಿದ ಇನ್ಸ್‌ಪೆಕ್ಟರ್ ‘ನಾನು ನಕ್ಸಲ್‌ನಂತೆ ಮಾತನಾಡುತ್ತಿದ್ದೇನೆ’ ಎಂದರು” ಎಂದು ರಿಜಾಸ್ ವಿವರಿಸಿದ್ದಾರೆ.

“ನನ್ನ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದು ಸಮಸ್ಯೆಯಲ್ಲ. ಆದರೆ, ಆದಿವಾಸಿ ಕಾರ್ಮಿಕರಿಗೆ ಹೊರಗಿನಿಂದ ಯಾರನ್ನೂ ಭೇಟಿಯಾಗಲು ಅವಕಾಶ ನೀಡದೇ ಇರುವುದು ಸಮಸ್ಯೆ” ಎಂದು ಅವರು ಹೇಳಿದ್ದಾರೆ.
ಪತ್ರಕರ್ತ ರಿಜಾಸ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್, “ಹೊರಗಿರನವರು ಯಾರು ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಅವರನ್ನು ವಿಚಾರಣೆಗೆ ಒಳಪಡಿಸಿದ್ದೆವು. ರಿಜಾಸ್ ಮಾಡಿರುವ ಆರೋಪಗಳು ಮತ್ತು ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ” ಎಂದು ತಿಳಿಸಿದ್ದಾರೆ.