ಕೊಡಗು ಜಿಲ್ಲೆಯ ಮಡಿಕೇರಿಯ ಎಸ್ ಕಟ್ಟೆಮಾಡು ಗ್ರಾಮದಲ್ಲಿ ಜನವರಿ 2ರವರೆಗೆ ಸೆಕ್ಷನ್ 163ನ್ನು ಜಾರಿಗೊಳಿಸಿದ್ದು, ಜನರ ಗುಂಪು ಸೇರುವಿಕೆ, ಪ್ರತಿಭಟನೆ, ಮೆರವಣಿಗೆ, ಜಾಥಾ, ಘೋಷಣೆಗಳಿಗೆ ತಡೆ ನೀಡಿ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಸ್ಥಾನದ ವಾರ್ಷಿಕೋತ್ಸವದ ವೇಳೆ ಎರಡು ಗುಂಪುಗಳ ನಡುವೆ ಅಹಿತಕರ ಘಟನೆ ನಡೆದಿದ್ದು, ಈ ವಿಚಾರವಾಗಿ ಸದರಿ ಸ್ಥಳದಲ್ಲಿ ಕಾನೂನು ಸುರಕ್ಷತೆಗಾಗಿ ಮಡಿಕೇರಿ ಉಪವಿಭಾಗೀಯ ದಂಡಾಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಅವರು ಸೆಕ್ಷನ್ 163ನ್ನು ಜಾರಿಗೊಳಿ ಆದೇಶಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆ ದೃಷ್ಟಿಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರಡಿ ದತ್ತವಾದ ಅಧಿಕಾರದಂತೆ ಎಸ್ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಸ್ಥಾನದ ಸುತ್ತಮುತ್ತಲಿನ 05 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಡಿಸೆಂಬರ್ 30ರ ಬೆಳಿಗ್ಗೆ 6ರಿಂದ ಜನವರಿ 2ರ ಬೆಳಿಗ್ಗೆ 6ರವರೆಗೆ 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರದಂತೆ, ಪ್ರತಿಭಟನೆ, ಮೆರವಣಿಗೆ, ರ್‍ಯಾಲಿ, ಜಾಥಾ, ಪ್ರಚೋದನಾತ್ಮಕ ಘೋಷಣೆ ಕೂಗದಂತೆ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಆದೇಶಿಸಿದ್ದಾರೆ.
ಕೊಡಗು ಜಿಲ್ಲಾಡಳಿತದಿಂದ ಸೋಮವಾರ ಶಾಂತಿ ಸಭೆ ನಡೆಸಲು ನಿರ್ಧಾರ
ಕಟ್ಟೆಮಾಡು ಘಟನೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲಾಡಳಿತವು ಡಿಸೆಂಬರ್ 30ರ ಸೋಮವಾರ ಮಧ್ಯಾಹ್ನ 3ಕ್ಕೆ ಶಾಂತಿ ಸಭೆ ನಡೆಸಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ ಎಂಬುದು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.
ಘಟನೆ ಹಿನ್ನೆಲೆ
ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದಲ್ಲಿ ನೆಲೆನಿಂತಿರುವ ಮೃತ್ಯುಂಜಯ ದೇವಾಲಯದಲ್ಲಿ ವಾರ್ಷಿಕ ಪೂಜೆಯನ್ನು ಹಮ್ಮಿಕೊಳ್ಳಲಾಹಿತ್ತು. ಒಂದು ವರ್ಗದ ಜನರು ಸಾಂಪ್ರದಾಯಿಕ ಉಡುಪನ್ನು ತೊಟ್ಟುಕೊಂಡು ದೇವಾಲಯದ ಒಳಗೆ ಮತ್ತೊಂದು ಗುಂಪು ಪ್ರವೇಶಿಸದಂತೆ ನಿರ್ಬಂಧ ಹೇರಿದಾಗ ಘರ್ಷಣೆ ನಡೆದಿದೆ. ಸಾಂಪ್ರದಾಯಿಕ ಉಡುಪು ತೊಟ್ಟವರ ಜನಾಂಗದವರ ಸಂಖ್ಯೆ ಈ ಭಾಗದಲ್ಲಿ ಕಡಿಮೆಯಿದೆ ಎಂದು ಹೇಳಲಾಗಿದೆ. ನಂತರ ಅ ವರ್ಗದ ಜನರು ಶಾಂತಿ ಕಾಪಾಡಲು ದೇವಾಲಯದ ಹೊರಬಂದು ಈ ತೀರ್ಮಾನವನ್ನು ಪ್ರತಿಭಟಿಸಿದ್ದಾರೆ. ಘರ್ಷಣೆಯ ಸಂದರ್ಭ ಕಡಿಮೆ ಸಂಖ್ಯೆಯಲ್ಲಿರುವ ಜನಾಂಗದ ಮೇಲೆ ಕೆಲವರಿಂದ ಹಲ್ಲೆಗೆ ಯತ್ನಿಸಲಾಗಿದೆ ಆರೋಪಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು ಜಿಲ್ಲಾಡಳಿತದಿಂದ ವಿಶ್ವಮಾನವ ಕುವೆಂಪು ದಿನಾಚರಣೆ
ಇದೀಗ ಈ ಪ್ರಕರಣವು ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು, ಪ್ರಕರಣಕ್ಕೆ ತೆರೆ ಎಳೆಯುವಂತೆ ಸಂಸದ ಯದುವೀರ್ ಒಡೆಯರ್ ಮತ್ತು ಇಬ್ಬರು ಶಾಸಕರುಗಳಾದ ಎ ಎಸ್ ಪೊನ್ನಣ್ಣ ಹಾಗೂ ಮಂತರ್ ಗೌಡ ಅವರು ಮನವಿ ಮಾಡಿದ್ದಾರೆ.