ಕೊಡಗು ಜಿಲ್ಲೆ,ಮಡಿಕೇರಿಯ ಐ ಡಿಬಿಐ ಬ್ಯಾಂಕ್ ಎದುರಿಗಿನ ಮನೆಯಲ್ಲಿ ವಾಸವಾಗಿದ್ದ ಒಂಟಿ ಮಹಿಳೆ ಮನೆಗೆ ನುಗ್ಗಿ ಹಲ್ಲೆ ಮಾಡಿ, ಚಿನ್ನದ ಕರಿಮಣಿ ಸರ, ಉಂಗುರ ದೋಚಿದ್ದ ಆರೋಪಿಗೆ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ, 15 ಸಾವಿರ ದಂಡ ವಿಧಿಸಿದ್ದು, ಒಂದು ವೇಳೆ ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ 3 ತಿಂಗಳ ಅಧಿಕ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಇಬ್ಬನಿ ರೆಸಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರಾಜಸ್ಥಾನ ಮೂಲದ ವಿಕಾಸ್ ಜೋರ್ಡಿಯಾ (35) ಎಂಬಾತ ಶಿಕ್ಷೆಗೊಳಗಾದ ಆರೋಪಿ. ದಿನಾಂಕ -05-11-2023 ರಂದು ಮಡಿಕೇರಿ ನಗರದ ಐಡಿಬಿಐ ಬ್ಯಾಂಕ್ ಎದುರು ಮನೆಯಲ್ಲಿ ಒಂಟಿಯಾಗಿ ಸಾಕಮ್ಮ ಪ್ರಭಾಕರ್ ಎಂಬ ಮಹಿಳೆ ವಾಸವಿದ್ದರು. ಆರೋಪಿ ಬಹುದಿನಗಳಿಂದ ಹೊಂಚಾಕಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ,ತಲೆಗೆ ತೀವ್ರವಾಗಿ ಗಾಯಗೊಳಿಸಿ ಕತ್ತಿನಲ್ಲಿದ್ದ ಚಿನ್ನದ ಕರಿಮಣಿ ಸರ ಮತ್ತು ಉಂಗುರವನ್ನು ದೋಚಿ ಪರಾರಿಯಾಗಿದ್ದನು.
ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ 397 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ದಿನಾಂಕ-06-11-2023 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಹೆಡ್ ಕಾನ್ಸ್ ಟೇಬಲ್ ಗಳಾದ ಎ.ವಿ. ಕಿರಣ್ ಮತ್ತು ಡಿ. ಹೆಚ್. ಸುಮಿತಾ ಹಾಗೂ ಸಿಬ್ಬಂದಿಗಳು ಪ್ರಕರಣಕ್ಕೆ ಸಂಭಂಧಿಸಿದಂತೆ ತನಿಖೆ ಕೈಗೊಂಡು ದಿನಾಂಕ -02-01-2024 ರಂದು ಮಡಿಕೇರಿಯ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಿಲ್ಲೆಯ ಇಂದೂಧರ ಹೊನ್ನಾಪುರ, ಹರಿಹರ ಆನಂದ ಸ್ವಾಮಿ ಸೇರಿದಂತೆ 15 ಮಂದಿ ಸಾಧಕರಿಗೆ ‘ ಅಂಬೇಡ್ಕರ್ ಪ್ರಶಸ್ತಿ ‘
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಜಿ. ಪ್ರಶಾಂತಿ ಅವರು ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ದಿನಾಂಕ 09-04-2025 ರಂದು ಆರೋಪಿ ವಿಕಾಸ್ ಜೋರ್ಡಿಯಾನನಿಗೆ ಕಠಿಣ ಶಿಕ್ಷೆ ವಿಧಿಸಿದ್ದಾರೆ.