ಕ್ರೀಡೆಯ ತವರು ಎಂದು ಕರೆಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ವಿವಿಧ ಕ್ರೀಡಾಕೂಟಗಳು ನಿರಂತರವಾಗಿ ನಡೆಯುತ್ತಿದೆ. ಈ ರೀತಿಯ ಕ್ರೀಡಾಕೂಟಗಳನ್ನು ಉತ್ತೇಜಿಸಲು ‘ಕೊಡಗು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ’ವನ್ನು ರಚಿಸಲು ಸರ್ಕಾರ ಮುಂದಾಗಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ವಿರಾಜಪೇಟೆಯ ದುದ್ದಿಯಂಡ ಹೆಚ್. ಸೂಫಿ ಹಾಜಿ ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆಯ ಗೋಣಿಕೊಪ್ಪಲು ತಾಲೂಕಿನ ನಲ್ವತ್ತೋಕ್ಲಿನಲ್ಲಿ ಚೋಕ್ ಸಿಟಿ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ರಾಜ್ಯಮಟ್ಟದ ಫೈಸ್ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. “ಕೊಡಗು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ರಚಿಸಬೇಕು. ಇದರಿಂದ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವುದಲ್ಲದೆ ಜಿಲ್ಲೆಯಿಂದ ಹೆಚ್ಚಿನ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ತಯಾರು ಮಾಡಬಹುದು” ಎಂದು ಹೇಳಿದರು.
“ದೇಶದ ಹಾಕಿ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಕೊಡಗು ಜಿಲ್ಲೆ ನೀಡಿದ ಕೊಡುಗೆ ಇಡೀ ಭಾರತವೇ ಹೆಮ್ಮೆಪಡುವ ಮಟ್ಟಿಗಿದೆ. ಈ ಹಿನ್ನೆಲೆಯಲ್ಲಾದರೂ ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು. ಅಲ್ಲದೆ ಪ್ರತಿ ವರ್ಷದ ಬಜೆಟ್ಟಿನಲ್ಲಿ ಇದಕ್ಕಾಗಿ ಹಣವನ್ನು ಮೀಸಲಿಟ್ಟು ಕೊಡಗಿನಲ್ಲಿ ನಡೆಯುವ ಕ್ರೀಡಾಕೂಟಗಳನ್ನು ಸರ್ಕಾರ ಉತ್ತೇಜಿಸಬೇಕು. ಇದಕ್ಕಾಗಿ ಕೊಡಗಿನ ಜನಪ್ರತಿನಿಧಿಗಳು ಸರ್ಕಾರದ ಉನ್ನತ ಮಟ್ಟದಲ್ಲಿ ಒತ್ತಡ ಹೇರಬೇಕು. ಮುಂಬರುವ ಬಜೆಟ್ಟಿನಲ್ಲೇ ಈ ಪ್ರಾಧಿಕಾರವನ್ನು ಘೋಷಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಬೇಕು ಎಂದು ಒತ್ತಾಯಿಸಿದ ಸೂಫಿ ಹಾಜಿ, ಕೊಡಗಿನ ಕ್ರೀಡಾ ಚಟುವಟಿಕೆಗಳಿಗೆ ಸರಕಾರ ಸೂಕ್ತವಾಗಿ ಉತ್ತೇಜನ ನೀಡದಿದ್ದಲ್ಲಿ ಕೊಡಗನ್ನು ಕ್ರೀಡೆಯ ತವರು ಎಂದು ಕರೆಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಹೇಳಿದರು.
ರಾಜ್ಯಮಟ್ಟದ ಫೈಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸ್ಕ್ವಾಡ್ ಚೋಕ್ ಸಿಟಿ ತಂಡ ವಿನ್ನರ್ಸ್ ಪ್ರಶಸ್ತಿ ಪಡೆದುಕೊಂಡರೆ, ಸುಂಕದಕಟ್ಟೆಯ ಉತ್ತಮ್ ಫ್ರೆಂಡ್ಸ್ ತಂಡ ರನ್ನರ್ಸ್ ಸ್ಥಾನ ಪಡೆಯಿತು. ಫೈನಲ್ ಪಂದ್ಯದಲ್ಲಿ ಸ್ಕ್ವಾಡ್ ಚೋಕ್ ಸಿಟಿ ತಂಡ ಸುಂಕದಕಟ್ಟೆಯ ಉತ್ತಮ ಫ್ರೆಂಡ್ಸ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿ ಫೈನಲ್ ಪಂದ್ಯಾವಳಿಯಲ್ಲಿ ಸ್ಕ್ವಾಡ್ ಚೋಕ್ ಸಿಟಿ ತಂಡ ಚಾಮೆ ಫುಟ್ಬಾಲ್ ಕ್ಲಬ್ ತಂಡವನ್ನು 1-0 ಗೋಲಿನಿಂದ ಮತ್ತು ಸುಂಕದಕಟ್ಟೆಯ ಉತ್ತಮ್ ಫ್ರೆಂಡ್ಸ್ ತಂಡ ಸಿ.ಎಫ್.ಸಿ ಅಮ್ಮತ್ತಿ ತಂಡವನ್ನು 1-0 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತ್ತು. ವಿಜೇತ ತಂಡಗಳಿಗೆ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ನಗದು ಬಹುಮಾನ ಸೇರಿದಂತೆ ಪಾರಿತೋಷಕಗಳನ್ನು ವಿತರಿಸಲಾಯಿತು. ಒಟ್ಟು 32 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿವೃತ್ತ ಖಜಾನಾಧಿಕಾರಿ ಕನ್ನಡಿಯಂಡ ಎ. ಆಲಿ ಹಾಜಿ, ನಲ್ವತ್ತೋಕ್ಲಿನ ಮೊಹಿದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಡಿ. ಎಫ್. ಆಶ್ರಫ್, ಸ್ಥಳೀಯರಾದ ಹೆಚ್. ಎ. ಮೊಹಮ್ಮದ್ ಹಾಜಿ, ಕೆ.ಎಂ. ಹ್ಯಾರಿಸ್, ಪಿ.ಎ. ಬಶೀರ್, ಡಿ.ಎಸ್. ಶರ್ಹಾನ್, ಸಯಿದ್, ಡಿ.ಎಂ. ಸಿರಾಜ್, ಎಚ್.ಎಂ. ನೌಫಲ್ ಮೊದಲಾದವರು ಭಾಗವಹಿಸಿದ್ದರು.
ಪಂದ್ಯಾವಳಿ ಆಯೋಜಕರಾದ ನಲ್ವತ್ತೋಕ್ಲಿನ ಚೋಕ್ ಸಿಟಿ ಫುಟ್ಬಾಲ್ ಕ್ಲಬ್ ನ ಮುಖ್ಯಸ್ಥರಾದ ಶಾಹಿದ್, ಶರ್ಮಿದ್, ಮೊಹಾದ್, ಅಜನಾಸ್, ಅಜ್ಮಲ್ ಮೊದಲಾದವರು ಪಂದ್ಯಾವಳಿಯ ಮೇಲುಸ್ತುವಾರಿ ವಹಿಸಿದ್ದರು.
ಚಿತ್ರ ಶೀರ್ಷಿಕೆ: ನಲ್ವತ್ತೋಕ್ಲಿನಲ್ಲಿ ಮುಕ್ತಾಯಗೊಂಡ ರಾಜ್ಯಮಟ್ಟದ ಫೈಸ್ ಫುಟ್ಬಾಲ್ ಪಂದ್ಯಾವಳಿಯ ವಿನ್ನರ್ಸ್ ತಂಡಕ್ಕೆ ಟ್ರೋಫಿ ವಿತರಿಸುತ್ತಿರುವ ಸೂಫಿ ಹಾಜಿ