ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಗೋಣಿಕೊಪ್ಪಲು ದಸರಾ ಉತ್ಸವದ ಪ್ರಯುಕ್ತ ಅಕ್ಟೋಬರ್ 11ರಂದು ದಸರಾ ವೇದಿಕೆಯಲ್ಲಿ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ ಎಂದು ದಸರಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕೋಳೆರ ದಯ ಚಂಗಪ್ಪ ಹೇಳಿದರು.
ಕೊಡಗು ಜಿಲ್ಲೆಯ ಪೊನ್ನಂಪೇಟೆ ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಾಹಿತ್ಯ, ಕಲೆ ಪ್ರೋತ್ಸಾಹಕ್ಕಾಗಿ ಹಲವಾರು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್‌ನೊಂದಿಗೆ ಜೊತೆಗೂಡಿ ಬಹುಭಾಷಾ ಕವಿಗೋಷ್ಠಿ ನಡೆಸುತ್ತಿದೆ. ಗೋಣಿಕೊಪ್ಪಲಿನ ದಸರಾ ವೇದಿಕೆಯಲ್ಲಿ ನಡೆಯುವ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲೆಯ ಹಿರಿಯ ಸಾಹಿತಿ ಮತ್ತು ಕವಿ ನಾಗೇಶ್ ಕಾಲೂರು ವಹಿಸಲಿದ್ದು, ಕವಿಗೋಷ್ಠಿಯ ಉದ್ಘಾಟನೆಯನ್ನು ಜಿಲ್ಲೆಯ ಹಿರಿಯ ಪತ್ರಕರ್ತ ದಿ ಹಿಂದು ಪತ್ರಿಕೆಯ ಪ್ರಿನ್ಸಿಪಲ್ ಸಂಪಾದಕ ಜೀವನ್ ಚಿಣ್ಣಪ್ಪ ನೆರವೇರಿಸಲಿದ್ದಾರೆ” ಎಂದು ಹೇಳಿದರು.
“ಪ್ರತಿ ವರ್ಷದಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ತಮಿಳು, ಮಲೆಯಾಳಂ, ಮರಾಠಿ ಹೀಗೆ 13 ಭಾಷೆಗಳ ಕವನಗಳನ್ನು ಕನ್ನಡ, ಹಿಂದಿ, ಇಂಗ್ಲೀಷ್, ತಮಿಳು, ಮಲೆಯಾಳಂ, ಮರಾಠಿ ಎಪ್ಪತ್ತೆಂಟು ಕವಿಗಳು, ಕನ್ನಡ ಭಾಷೆಯ ಚುಟುಕು ಕವನಗಳನ್ನು ನಾಲ್ಕು ಕವಿಗಳು ವಾಚಿಸಲಿದ್ದಾರೆ” ಎಂದರು.
“ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಮತ್ತು ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ವಿಶೇಷವಾಗಿ ‘ಮಕ್ಕಳ ಕವನಗೋಷ್ಠಿ’ಯಿದ್ದು, 6 ರಿಂದ 13 ವರ್ಷದೊಳಗಿನ ಮಕ್ಕಳಿಗೆ ಏರ್ಪಡಿಸಲಾಗಿದೆ. ಹನ್ನೊಂದು ಬಾಲ ಪ್ರತಿಭೆಗಳು ಭಾಗವಹಿಸಾಲಿದ್ದು, ಕನ್ನಡದಲ್ಲಿ ಆರು ಮತ್ತು ಇಂಗ್ಲೀಷ್‌ನಲ್ಲಿ ಐದು ಕವನ ವಾಚನ ಮಾಡಲಿದ್ದಾರೆ” ಎಂದು ತಿಳಿಸಿದರು.
“ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಗೌರವ ಸಮರ್ಪಣೆ, ಸಂಭಾವನೆ ಮತ್ತು ಕೊಡಗಿನ ಲೇಖಕರ ಒಂದು ಪುಸ್ತಕವನ್ನೂ ಕೂಡ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ರಾಜ್ಯ ಪರಿಷತ್ ಸದಸ್ಯರ ಚುನಾವಣೆ; ಆರ್‌ಟಿಒ ಮಲ್ಲಿಕಾರ್ಜುನ್ ಅವಿರೋಧ ಆಯ್ಕೆ
“ಕವಿಗೋಷ್ಠಿಯಲ್ಲಿ ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಸುಳ್ಯ, ಬೆಳಗಾವಿ, ಮೈಸೂರು ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ತಮ್ಮ ಕವನವನ್ನು ಕಳುಹಿಸಿದ್ದಾರೆ. ಜತೆಗೆ ಇದೇ ಸಂದರ್ಭದಲ್ಲಿ ಒಂದು ಸಾಹಿತ್ಯಿಕ ಕಾರ್ಯವೂ ನಡೆಯಲಿದೆ. ಜಿಲ್ಲೆಯ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರು ಅಂಕಣಕಾರರಾಗಿ ಹಲವಾರು ಪತ್ರಿಕೆಗಳಲ್ಲಿ ಪ್ರಕಟಿಸಿದ 67 ಲೇಖನಗಳನ್ನು ಪುಸ್ತಕ ರೂಪದಲ್ಲಿ “ಲೇಖನ ಸೌರಭ” ಬಿಡುಗಡೆ ಕಾರ್ಯಕ್ರಮ ಕೂಡ ಜರುಗಲಿದೆ” ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಪಿ ಕೇಶವ ಕಾಮತ್ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಶೀಲಾ ಬೋಪಣ್ಣ, ಸಹಕಾರ್ಯದರ್ಶಿ ಟಿ ಆರ್ ವಿನೋದ್, ನಿರ್ದೇಶಕ ಚಂದನಾ, ಮಂಜುನಾಥ್, ಚಂದನ್ ಕಾಮತ್, ಮಹೇಶ್, ಓಮನ, ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಮಂಜುಳಾ ಇದ್ದರು.