ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಬಡಕೇರಿಯ ಅಂಬೇಡ್ಕರ್ ಆಶ್ರಯ ಬಡಾವಣೆಯ ಸದ್ಯದ ಪರಿಸ್ಥಿತಿ ಭಯದ ವಾತಾವರಣವಾಗಿ ಪರಿಣಮಿಸಿದೆ. ಇರುವ ಜಾಗ ಕಂದಾಯ ಭೂಮಿ, ಸರ್ಕಾರದ ಪಟ್ಟಾ ಇದ್ದರೂ ಕೂಡ ಭೂ ಮಾಲೀಕರ ಕುಮ್ಮಕ್ಕಿನಿಂದ ಅರಣ್ಯಭೂಮಿ, ದೇವರ ಕಾಡು ಎಂದು ಬಿಂಬಿಸಿ ಸ್ಥಳೀಯವಾಗಿ ವಾಸಿಸುತ್ತಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಎಲ್ಲಿಲ್ಲದ ಹುನ್ನಾರ ನಡೆಯುತ್ತಿದೆ.
ಕೊಡಗು ನೋಡಲು ಚಂದ, ಅದರ ಹಿಂದಿನ ಕರಾಳತೆಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ದೇಶದಲ್ಲಿ ಅತಿ ಹೆಚ್ಚು ಶೋಷಣೆ, ನಿರ್ಲಕ್ಷ್ಯ, ಸವಲತ್ತುಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಯಾವುದೇ ಅಧಿಕಾರಯುತ ಪ್ರಾಶಸ್ತ್ಯ ಹೊಂದಿಲ್ಲದೆ, ಇದ್ದರೂ ಇಲ್ಲದಂತೆ ಜೀವನ ಸವೆಸುತ್ತಿರುವ ಶೋಷಿತ, ದಲಿತ, ಆದಿವಾಸಿ, ಬಡವರ್ಗದ ಜನರ ಕೂಗಿನ ಕಡತಾನನ ಯಾರಿಗೂ ಕೇಳದೆ ಕಿವುಡಾಗಿದೆ.
ಕಬಡಕೇರಿಯ ಅಂಬೇಡ್ಕರ್ ಆಶ್ರಯ ಬಡಾವಣೆಯಲ್ಲಿ ಸರಿ ಸುಮಾರು 61 ಕುಟುಂಬಗಳ ವಾಸಿಸುತ್ತಿವೆ. ಅಂದರೆ ಅಂದಾಜು ಮುನ್ನೂರಕ್ಕೂ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಇದು ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಸರ್ಕಾರಿ ಪೈಸಾರಿ ಜಾಗವಾಗಿದೆ. ಇಲ್ಲಿ ಎಲ್ಲ ವರ್ಗದ ಮುಸ್ಲಿಂ, ದಲಿತ, ಆದಿವಾಸಿ, ಒಬಿಸಿ ಹೀಗೆ ಎಲ್ಲ ಸಮುದಾಯದ ಜನರೂ ವಾಸವಿದ್ದಾರೆ. ಇಲ್ಲೇ ಹುಟ್ಟಿ ಬೆಳೆದು, ಇಲ್ಲಿಗೆ ಮದುವೆಯಾಗಿ ಬಂದು ಜೀವನ ಕಟ್ಟಿಕೊಂಡು ಸಾಲುಮನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ವರ್ಗ ಗ್ರಾಮ ಪಂಚಾಯಿತಿ ನೆರವಿನಿಂದ ನಿವೇಶನ ಪಡೆದುಕೊಂಡಿದೆ.

ದುರ್ದೈವವೆಂದರೆ ಇದು ಸರ್ಕಾರಿ ಜಾಗ. ಆದರೆ ಅರಣ್ಯ ಇಲಾಖೆ ಭೂ ಮಾಲೀಕರ ಕೈಗೊಂಬೆಯಾಗಿ ದಾಖಲೆಗಳು ಇಲ್ಲದಿದ್ದರೂ, ಈ ಜಾಗ ದೇವರಕಾಡು ಅರಣ್ಯಕ್ಕೆ ಸೇರಿದ್ದೆಂದು ಜನರನ್ನು ಭಯಪಡಿಸುತ್ತಿದ್ದಾರೆ. ಗುರುತರವಾಗಿ ಅರಣ್ಯ ಇಲಾಖೆ ಬಳಿ ಇದು ದೇವರಕಾಡು ಅರಣ್ಯ ಇಲಾಖೆಗೆ ಸೇರಿದ್ದು ಎನ್ನಲು ಯಾವುದೇ ಪುರಾವೆ ಇಲ್ಲ. ಆದರೆ ಹೋಗುತ್ತ, ಬರುತ್ತ ಜನರಿಗೆ ತೊಂದರೆ ನೀಡುವುದು ತಪ್ಪಿಲ್ಲ.
ಕಾರಣ ಜನ ವಾಸವಿರುವ ಜಾಗದಲ್ಲಿ ಬೃಹತ್ತಾದ ಹಳೆಯದಾದ ದೊಡ್ಡ ದೊಡ್ಡ ಮರಗಳಿವೆ.

ಈ ಬಾರಿ ಸುರಿದ ಭಾರೀ ಮಳೆಗೆ ಬೃಹತ್ ಮರಗಳು ನೆಲಕ್ಕುರುಳಿದ್ದು, ಸಾಕಷ್ಟು ಹಾನಿ ಮಾಡಿವೆ. ಒಂದು ಕಡೆ ಎಡಕ್ಕೆ ಬಿದ್ದ ಮರ ಮನೆಗೆ ಹಾನಿ ಮಾಡಿದೆ. ಅದೇ ಮರ ಬಲಕ್ಕೆ ಬಿದ್ದಿದ್ದರೆ ಸಾಕಷ್ಟು ಮನೆ, ಪ್ರಾಣಗಳಿಗೆ ಕಂಟಕ ಎದುರಾಗುತ್ತಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ.

ಅಧಿಕಾರಿಗಳ ಭಯ ಒಂದು ಕಡೆಯಾದರೆ, ಮಳೆ ಗಾಳಿಗೆ ದಪ್ಪನೆಯ ಮರಗಳು ಎಲ್ಲಿ ಗುಡಿಸಿಲಿನ ಮೇಲೆ ಬಿದ್ದು ಪ್ರಾಣ ತೆಗೆಯುತ್ತವೆಯೋ ಎನ್ನುವ ಆತಂಕ. ಇನ್ನೊಂದು ಕಡೆ ಬದುಕಿಗೆ ಆಸರೆಯಾಗಿರುವ ನಿವೇಶನಗಳನ್ನು ಅರಣ್ಯ ಇಲಾಖೆ ಕಸಿದುಕೊಂಡರೆ ಮುಂದೇನು ಪರಿಸ್ಥಿತಿ ಎನ್ನುವ ಜಿಜ್ಞಾಸೆ ಇಲ್ಲಿನ ಜನರನ್ನು ಬಹುವಾಗಿ ಕಾಡುತ್ತಿದೆ. ಇಂತಹ ಭಯದ ವಾತಾವರಣ ಎದುರಾಗಿದೆ.
ಕಳೆದ ಒಂದು ವರ್ಷದಿಂದ ವಾಸವಿರುವ ಜಾಗಕ್ಕೆ ಹಕ್ಕುಪತ್ರ ಕೋರಿ ಸಾಕಷ್ಟು ಅರ್ಜಿ ಸಲ್ಲಿಸಿದ್ದು, ವಾಸದ ಜಾಗದಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸಿಲ್ಲ. ಕಂದಾಯ ಭೂಮಿ ಎನ್ನುವ ಅರಿವೂ ಇರದೆ ಅದನ್ನು ದೇವರ ಕಾಡು ಅರಣ್ಯ ಇಲಾಖೆಗೆ ಸೇರಿದ್ದು ಎನ್ನುವ ಭೀತಿ ಬಿತ್ತುತ್ತ, ಅದನ್ನ ತಮ್ಮ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಆದರೆ ಬಡ ಜನರು ಸೂರು ಕಟ್ಟಿಕೊಳ್ಳಲು ಅನುವು ಮಾಡುವ ಯಾವುದೇ ಕ್ರಮ ಕೈಗೊಂಡಿಲ್ಲ.

ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ದೇವರಕಾಡು ಎರಡು ಕಿಮೀ ದೂರದಲ್ಲಿದೆ. ಇಲ್ಲಿ ಸರ್ಕಾರಿ ಕಟ್ಟಡಗಳು, ಕುಡಿಯುವ ಎರಡು ನೀರಿನ ಟ್ಯಾಂಕ್, ಆಟದ ಮೈದಾನ, ಕ್ರಿಶ್ಚಿಯನ್, ಹಿಂದೂ, ಮುಸ್ಲಿಂ ಸ್ಮಶಾನಗಳಿವೆ. ಇದಲ್ಲೆದರ ಗಮನ ತಾಲ್ಲೂಕು, ಜಿಲ್ಲಾಡಳಿತಕ್ಕೆ ಇಲ್ಲ. ದಾಖಲೆ ಸಹಿತ ಮಾತನಾಡದೆ ʼಅಂತೆ, ಕಂತೆʼ ಮಾತುಗಳಲ್ಲಿ ಜನವಿರೋಧಿ ಕೆಲಸದಲ್ಲಿ ನಿರತರಾಗಿದ್ದಾರೆ.
“ಕಬಡಕೇರಿಯ ಅಂಬೇಡ್ಕರ್ ಆಶ್ರಯ ಬಡಾವಣೆ ಸರ್ವೇ ನಂಬರ್ 88/1ರಲ್ಲಿ ಏಳು ಎಕರೆ ಎಪ್ಪತ್ತೆರಡು ಸೆಂಟ್ ಜಾಗವಿದೆ.
ಪಹಣಿ ಕಲಂ 6ರಲ್ಲಿ ನಿಬಂಧನೆ ಪೈಸಾರಿಯಾಗಿದ್ದು, ಕಾಲಂ 9ರಲ್ಲಿ ಸರ್ಕಾರದ ಪಟ್ಟಾ ಇದೆ. ಹೊದ್ದೂರು ಗ್ರಾಮ ಪಂಚಾಯಿತಿ 2024ರ ಮಾರ್ಚ್ 07ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್ ಎ ಹಂಸ, ಪಿಡಿಓ ಅಬ್ದುಲ್ಲಾ ಅವರ ನೇತೃತ್ವದಲ್ಲಿ ನ್ಯಾಯ ಸಮಿತಿ ಅಧ್ಯಕ್ಷ ಕೆ ಮೊಣ್ಣಪ್ಪ, ಮಾಜಿ ಅಧ್ಯಕ್ಷೆ ಕುಸುಮಾವತಿ, ಸದಸ್ಯ ಹಮೀದ್ ಅವರ ಸಮ್ಮುಖದಲ್ಲಿ ಗ್ರಾಮ ಸಭೆ ನಡೆದು, ಸಭೆಯ ನಡಾವಳಿಯಂತೆ ಅಂಗೀಕರಿಸಿ ಫಲಾನುಭವಿಗಳ ಪಟ್ಟಿ ಮಾಡಿ, ಸಂಬಧಪಟ್ಟ ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಗೆ ಕಳಿಸಿ, ತಕ್ಷಣ ಮರಗಳನ್ನು ತೆರವು ಮಾಡಿ ಅಲ್ಲಿಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ, ಪಂಚಾಯಿತಿ ಮೂಲಕ ಅಗತ್ಯ ಮೂಲಭೂತ ಸೌಲಭ್ಯ ಹಾಗೂ ಮನೆ ನಿರ್ಮಿಸುವ ಗುರಿ ಹೊಂದಿದೆ” ಎಂದು ಭೂಮಿ ಮತ್ತು ವಸತಿಹಕ್ಕು ವಂಚಿತರ ಹೋರಾಟ ಸಮಿತಿಯ ಕೆ ಮೊನ್ನಪ್ಪ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಹಮೀದ್ ಮಾತನಾಡಿ, “ಇದು ಯಾವುದೇ ಅರಣ್ಯ ಇಲಾಖೆಗೆ ಸೇರಿದ ಜಾಗವಲ್ಲ. ಇಲ್ಲಿ ಎಲ್ಲ ಸಮುದಾಯದ ಜನರೂ ವಾಸವಿದ್ದಾರೆ. ನಾನೂ ಕೂಡಾ ಇದೇ ಗ್ರಾಮದವನು. ದೇವರಕಾಡು ಅರಣ್ಯ ಮೀಸಲು ಇರುವುದು ಎರಡು ಕಿಮೀ ದೂರದಲ್ಲಿ. 88/1ರ ಜಾಗ ದೇವರಕಾಡು ಎಂದು ಸೃಷ್ಟಿ ಮಾಡಲು ಹೊರಟಿದ್ದಾರೆ. ಆದರೆ ಇದು ಅಸಾಧ್ಯವಾದ ಮಾತು. ರಾಜ್ಯ ಸರ್ಕಾರದ ವ್ಯಾಪ್ತಿಗೆ, ಇಲ್ಲಿಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅರಣ್ಯ ಭೂಮಿಯೇ ಆಗಿದ್ದರೆ ಇದು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಮದ್ರಾಸ್‌ನಲ್ಲಿರುವ ಹಸಿರುಪೀಠದ ವ್ಯಾಜ್ಯವಾಗುತಿತ್ತು. ಇಲ್ಲಿ ಅರಣ್ಯ ಇಲಾಖೆ ಬಂದು ಸುಖಾ ಸುಮ್ಮನೆ ತೊಂದರೆ ಮಾಡುವ ಅಗತ್ಯ ಇರುತ್ತಿರಲಿಲ್ಲ. ಇದಕ್ಕೆಯಾದ ಪ್ರೊಸೀಸರ್ ತುಂಬಾನೇ ಇದೆ. ಆ ದಾಖಲೆ ಯಾವುದೂ ಇರದೆ ಸುಮ್ಮನೆ ಅರಣ್ಯ ಇಲಾಖೆ ಮಾತನಾಡುವುದು ಶೋಭೆಯಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ! ಕನ್ನಡ ಸಾಹಿತ್ಯ ಸಮ್ಮೇಳನದ ಅವ್ಯವಸ್ಥೆ: ಬಸ್ ವ್ಯವಸ್ಥೆಗಾಗಿ ಪ್ರತಿಭಟಿಸಿದ ಮಕ್ಕಳು
ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಬಿ ಮಾತನಾಡಿ, ಅರಣ್ಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಅರಣ್ಯ ಇಲಾಖೆಗೆ ಸೇರಿದ್ದು ಎನ್ನಲಾದ ದಾಖಲೆಗಳ ಫೈಲ್ ಕೋರಿದರು. ಆದರೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ, ದಾಖಲೆ ನೀಡಲು ಆಗಲಿಲ್ಲ. ಐದು ತಿಂಗಳ ಹಿಂದೆಯೇ ಮರ ತೆರವಿಗೆ ಅರ್ಜಿ ಬಂದಿದ್ದರೂ ಕೂಡಾ ಈವರೆಗೆ ಕ್ರಮ ಕೈಗೊಳ್ಳದಿರುವುದರಿಂದ ನಾಳೆಯೇ ಸ್ಥಳಕ್ಕೆ ತೆರಳಿ ಜಿಪಿಎಸ್ ಮಾಡಿ, ಮರ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ರೇಂಜರ್ ರಂಜಿತ್ ಅವರ ನೇತೃತ್ವದಲ್ಲಿ ಕಬಡಕೇರಿ ಅಂಬೇಡ್ಕರ್ ಆಶ್ರಯ ಬಡಾವಣೆಗೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಜಿಪಿಎಸ್ ಮಾಡಿ ಸ್ಥಳದಲ್ಲಿರುವ ಮತಗಳನ್ನು ಏಳು ದಿನಗಳಲ್ಲಿ ತೆರವು ಮಾಡುವ ಭರವಸೆ ನೀಡಿದರು. ದೇವರಕಾಡು ಎಂದು ಇರುವುದರಿಂದ ಮರ ತೆರವು ಮಾಡಲು ಆಗಲಿಲ್ಲ. ಅರಣ್ಯಕ್ಕೆ ಸೇರಿದ್ದೆಂದು ಇಷ್ಟು ದಿನ ತಡವಾಗಿದೆ. ತಹಶೀಲ್ದಾರ್ ಹಾಗೂ ಸಂಬಧಪಟ್ಟ ಅಧಿಕಾರಿಗಳ ಮಾಹಿತಿ ಪಡೆದು ಪರಿಶೀಲನೆ ನಡೆಸಿ ತಕ್ಷಣವೇ ಕ್ರಮ ವಹಿಸುವುದಾಗಿ ತಿಳಿಸಿದರು.

ಸ್ಥಳದಲ್ಲಿದ್ದ ಪಂಚಯಿತಿ ಸದಸ್ಯರಾದ ಕೆ ಮೊನ್ನಪ್ಪ ಹಾಗೂ ಹಮೀದ್ ಮಾತನಾಡಿ, “ಒಂದು ವಾರದಲ್ಲಿ ಕ್ರಮ ವಹಿಸಬೇಕು ಒಂದು ವೇಳೆ ಅಧಿಕಾರಿಗಳು ಮಾತು ತಪ್ಪಿದಲ್ಲಿ ಜನರೇ ಇಲ್ಲಿರುವ ಮರಗಳನ್ನು ತೆರವು ಮಾಡುತ್ತಾರೆ. ಮರ ಕಳ್ಳತನ, ಬೇರೆ ಬೇರೆ ವಿಷಯ ಇಟ್ಟು ಜನರ ಮೇಲೆ ಕೇಸ್ ಹಾಕಿದರೆ ಇದಕ್ಕೆಲ್ಲ ಸೂಕ್ತ ಉತ್ತರ ನೀಡಬೇಕಾಗುತ್ತದೆ. ತಕ್ಷಣವೇ ಕ್ರಮವಹಿಸಿ, ಪಂಚಾಯಿತಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಮನೆ ಕಟ್ಟಲು, ಬದುಕು ಕಟ್ಟಲು ಅವಕಾಶ ಮಾಡಿಕೊಡಬೇಕು” ಎಂದರು.
