ಸರ್ಕಾರ ಭೂ ಮಾಲೀಕರ ಪರವಾಗಿ ಪ್ಲಾಂಟೇಶನ್ ಬೆಳೆಗಳ ಹೆಸರಿನಲ್ಲಿ ಗುತ್ತಿಗೆ ನೀಡಲು ಹೊರಟಿರುವ ಆದೇಶ ಖಂಡನೀಯ. ಕೊಡಗಿನಲ್ಲಿ ದಲಿತರಿಗೆ, ಆದಿವಾಸಿಗಳಿಗೆ ನೇರವಾಗಿ ಅನ್ಯಾಯ ಆಗಿದೆ. ಜಿಲ್ಲೆಯ ಎಲ್ಲ ಸಂಘಟನೆಗಳನ್ನು ಸೇರಿಸಿ ಹೋರಾಟ ಮಾಡಲಾಗುವುದು ಎಂದು ಭೂ ಗುತ್ತಿಗೆ ವಿರೋಧ ಹೋರಾಟ ಸಮಿತಿ ಕಾರ್ಯಕರ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಿಲ್ಲೆಯ ವಿರಾಜಪೇಟೆ ತಾಲೂಕು ಗೋಣಿಕೊಪ್ಪಲಿನಲ್ಲಿ ಭೂ ಗುತ್ತಿಗೆ ವಿರೋಧ ಹೋರಾಟ ಸಮಿತಿಯಿಂದ ಸಭೆ ನಡೆಸಿ ಮಾತನಾಡಿದರು.
ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 2ರ ಅನ್ವಯ ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತವಾಗಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಅಂತಹ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ಸರ್ಕಾರವು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ಕ್ಕೆ ತಿದ್ದುಪಡಿಯನ್ನು ತಂದು ಕಲಂ 94(ಇ) ಸೇರ್ಪಡೆಗೊಳಿಸಿದೆ.
ಪ್ಲಾಂಟೇಶನ್ ಬೆಳೆಗಾರರು ಸ್ವಾಧೀನ ಅಕ್ರಮವಾಗಿ ಸ್ವಾಧಿನದಲ್ಲಿರುವ ಪ್ಲಾಂಟೇಶನ್ ಜಮೀನನ್ನು ಒಂದು ಕುಟುಂಬಕ್ಕೆ ಗರಿಷ್ಠ 25 ಎಕರೆಯವರೆಗೆ 30 ವರ್ಷಗಳಿಗೆ ಗುತ್ತಿಗೆ ನೀಡುವ ಕುರಿತು ಅರ್ಜಿಗಳನ್ನು ಆನ್-ಲೈನ್ ಮೂಲಕ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿರುವ ಕುಟುಂಬಕ್ಕೆ ಅಂತಹ ಜಮೀನನ್ನು ಜಿಲ್ಲಾಧಿಕಾರಿಯವರು ಕೆಲವು ಷರತ್ತುಗಳನ್ನು ವಿಧಿಸಿ ಗುತ್ತಿಗೆಗೆ ನೀಡಬಹುದಾಗಿದೆ.
1. ಕರ್ನಾಟಕ ಭೂ ಮಂಜೂರಾತಿ (ತಿದ್ದುಪಡಿ) ನಿಯಮಗಳು 2023 ಜಾರಿಗೆ ಬಂದ ದಿನಾಂಕಕ್ಕೆ ಅಂತಹ ಕುಟುಂಬವು 2005ರ ಜನವರಿ1ರ ಪೂರ್ವದಿಂದ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿರಬೇಕು.
2. ಒಂದು ಕುಟುಂಬಕ್ಕೆ 25 ಎಕರೆಯವರೆಗೆ ಮಾತ್ರ ಗುತ್ತಿಗೆ ನೀಡಲಾಗುವುದು.
3. ಈ ನಿಯಮಗಳ ಅಡಿಯಲ್ಲಿ ಗುತ್ತಿಗೆಗೆ ನೀಡಬಹುದಾದ ಭೂಮಿಯ ವಿಸ್ತೀರ್ಣಕ್ಕಿಂತ ಹೆಚ್ಚಿನ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯನ್ನು ಉಪ-ನಿಯಮ (6)ರಂತೆ ಗುತ್ತಿಗೆ ಒಪ್ಪಂದ ಮಾಡುವ ಮೊದಲು ಸದರಿ ಕುಟುಂಬವು ಸರ್ಕಾರಕ್ಕೆ ಒಪ್ಪಿಸಬೇಕು.
4. ಈ ನಿಯಮಗಳ ಅಡಿಯಲ್ಲಿ ಗುತ್ತಿಗೆಗೆ ಪಡೆದ ಜಮೀನುಗಳಿಗೆ ಪಾವತಿಸಬೇಕಾದ ವಾರ್ಷಿಕ ಗುತ್ತಿಗೆ ಬಾಡಿಗೆಯ ಮೊತ್ತವು ಈ ಕೆಳಕಂಡಂತೆ ನಮೂದಿಸಲಾಗಿದೆ.
5. ಗುತ್ತಿಗೆಯನ್ನು ನೀಡುವ ಮುನ್ನ ಮೂವತ್ತು ವರ್ಷಗಳ ಸಂಪೂರ್ಣ ಗುತ್ತಿಗೆ ಮೊತ್ತವನ್ನು ಒಂದು ಬಾರಿಗೆ ಪಾವತಿಮಾಡಬೇಕು.
6. ಮೇಲ್ಕಂಡ ಸದರಿ ಜಮೀನುಗಳನ್ನು ಮೂವತ್ತು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಗುತ್ತಿಗೆಗೆ ನೀಡತಕ್ಕದ್ದಲ್ಲ.
7. ಗುತ್ತಿಗೆ ಅವಧಿಯಲ್ಲಿ ಗುತ್ತಿಗೆದಾರರು ನಿಧನ ಹೊಂದಿದರೆ, ಉಳಿದ ಗುತ್ತಿಗೆ ಅವಧಿಯವರೆಗೆ ಕಾಯ್ದೆಯ ಕಲಂ 94-ಇನಲ್ಲಿ ನಿರ್ದಿಷ್ಟಪಡಿಸಿದಂತೆ ಗುತ್ತಿಗೆಯನ್ನು ಗುತ್ತಿಗೆದಾರನ ಕುಟುಂಬಕ್ಕೆ ಮಾತ್ರ ವರ್ಗಾಯಿಸಲಾಗುತ್ತದೆ.
8. ಗುತ್ತಿಗೆ ಪಡೆದ ಭೂಮಿಯನ್ನು ಉಪಗುತ್ತಿಗೆಗೆ ನೀಡಬಾರದು ಅಥವಾ ಪರಭಾರೆ ಮಾಡಬಾರದು.
9. ಸದರಿ ಸರ್ಕಾರಿ ಜಮೀನುಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮರಗಳು ಸರ್ಕಾರದ ಆಸ್ತಿಯಾಗಿರುತ್ತವೆ ಮತ್ತು ಗುತ್ತಿಗೆದಾರರು ಅಂತಹ ಮರಗಳನ್ನು ರಕ್ಷಿಸಬೇಕು.
10. ಗುತ್ತಿಗೆ ಪಡೆದ ಜಮೀನುಗಳನ್ನು ಪ್ಲಾಂಟೇಶನ್ ಬೆಳೆಗಳನ್ನು ಬೆಳೆಸಲು ಮಾತ್ರ ಬಳಸಬೇಕು ಮತ್ತು ಯಾವುದೇ ಇತರ ಉದ್ದೇಶಗಳಿಗೆ ಬಳಸಬಾರದು.
11. ಪ್ಲಾಂಟೇಶನ್ ಬೆಳೆಗಳನ್ನು ಬೆಳೆಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಅಥವಾ ಶೆಡ್ಯೂಲ್ಡ್ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ ಇವುಗಳಿಂದ ಬೆಳೆ ಸಾಲಕ್ಕಾಗಿ ಗುತ್ತಿಗೆ ಪಡೆದ ಭೂಮಿಯನ್ನು ಅಡಮಾನವನ್ನು ನಿಯಮಗಳಿಗೆ ಪರಭಾರೆ ಎಂದು ಪರಿಗಣಿಸಲಾಗುವುದಿಲ್ಲ
12. ಅರಣ್ಯ (ಸಂರಕ್ಷಣೆ) ಕಾಯ್ದೆ, 1980 (1980 ರ ಕೇಂದ್ರ ಕಾಯಿದೆ 69) ವ್ಯಾಪ್ತಿಯೊಳಗೆ ಬರುವ ಅಂತಹ ಯಾವುದೇ ಭೂಮಿಯನ್ನು ಗುತ್ತಿಗೆಗೆ ನೀಡಲಾಗುವುದಿಲ್ಲ.
ಮೊತ್ತವನ್ನು ಕೆಳಕಂಡಂತೆ ನಿಗದಿ ಮಾಡಿದೆ.
* ಒಂದು ಎಕರೆಗೆ ಪ್ರತಿ ವರ್ಷ ₹1,000
* 1 ಎಕರೆಗಿಂತ ಮೇಲ್ಪಟ್ಟು 5 ಎಕರೆವರೆಗೆ, ಎಕರೆಗೆ ಪ್ರತಿ ವರ್ಷ ₹1,500.
* 5 ಎಕರೆಗಿಂತ ಮೇಲ್ಪಟ್ಟು 10 ಎಕರೆವರೆಗೆ ,ಪ್ರತಿ ವರ್ಷ ಎಕರೆಗೆ ₹2,000.
* 10 ಎಕರೆಗಿಂತ ಮೇಲ್ಪಟ್ಟು ಮತ್ತು 15 ಎಕರೆಯವರೆಗೆ,ಪ್ರತಿ ವರ್ಷ ಎಕರೆಗೆ ₹2,500.
* 15 ಎಕರೆಯಿಂದ 20 ಎಕರೆವರೆಗೆ ,ಪ್ರತಿ ವರ್ಷ ಎಕರೆಗೆ ₹3,000.
* 20 ರಿಂದ 25 ಎಕರೆಗೆ,ಪ್ರತಿ ವರ್ಷ ₹3,500. ನಿಗದಿ ಮಾಡಿದೆ ಸರ್ಕಾರ.
ಈ ಸುದ್ದಿ ಓದಿದ್ದೀರಾ? ತುಮಕೂರು | ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ಸುದ್ದಿಗೋಷ್ಟಿಯಿಂದ ಹೊರನಡೆದ ಬಿಜೆಪಿ ಅಭ್ಯರ್ಥಿ
ಸಭೆಯಲ್ಲಿ ಕೃಷ್ಣಪ್ಪ, ಪರಶುರಾಮ್, ಗೋವಿಂದಪ್ಪ, ಶಿವಣ್ಣ, ರಮೇಶ್, ವಕೀಲ ಸುನೀಲ್, ಶಿವಣ್ಣ, ಗಪ್ಪು, ಮುತ್ತಣ್ಣ, ರಜನಿಕಾಂತ್, ಮುರುಗೇಶ್ ಸೇರಿದಂತೆ ಮೊದಲಾದವರು ಇದ್ದರು.
