ಪೊಲೀಸರು ಸಮಾಜಕ್ಕೆ ನೀಡಿದ ಸೇವೆಯನ್ನು ಯಾರೂ ಕೂಡಾ ಮರೆಯಬಾರದು ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
ದೇಶದಲ್ಲಿ ಶಾಂತಿ, ಸೌಹಾರ್ದತೆ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ಕೊಡಗು ಜಿಲ್ಲೆ ಮಡಿಕೇರಿ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ ವೇಳೆ ಮಾತನಾಡಿದರು.
“ಪೊಲೀಸರ ಕರ್ತವ್ಯ ನಿಷ್ಠೆಯನ್ನು ಸದಾ ಸ್ಮರಿಸುವಂತಾಗಬೇಕು. ಸಮಾಜದ ರಕ್ಷಣೆ ಮಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಪೊಲೀಸರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಮರೆಯಬಾರದು” ಎಂದು ಹೇಳಿದರು.
“ಸಮಾಜದ ಸಮಗ್ರ ಸುರಕ್ಷತೆ ಹಾಗೂ ಭದ್ರತೆಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪೊಲೀಸರ ಕರ್ತವ್ಯ ನಿಷ್ಠೆ ಹಾಗೂ ನಿಸ್ವಾರ್ಥ ಸೇವೆ ಸ್ಮರಿಸುವಂತಾಗಬೇಕು” ಎಂದು ಹೇಳಿದರು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ 2023-24ನೇ ಸಾಲಿನಲ್ಲಿ ದೇಶದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕರ್ನಾಟಕದ ಐವರು ಸೇರಿದಂತೆ ಒಟ್ಟು 216 ಮಂದಿ ಹುತಾತ್ಮ ಪೊಲೀಸರ ಹೆಸರುಗಳನ್ನು ಓದಿದರು.
ಪೊಲೀಸ್ ಕವಾಯತು ಸಿಬ್ಬಂದಿಗಳು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ಗಣ್ಯರು ಸೇರಿದಂತೆ ಎಲ್ಲರೂ ಎದ್ದುನಿಂತು ಗೌರವ ವಂದನೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಭಾರೀ ಮಳೆ; ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ
ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ ಎಸ್ ಸುಂದರರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಮೋಹನ್ ಕುಮಾರ್, ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೊಲೀಸ್ ನಿರೀಕ್ಷಕ ಚೆನ್ನನಾಯಕ, ವೈಯರ್‍ಲೆಸ್ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್, ಮಾಜಿ ಸೈನಿಕರ ಪರವಾಗಿ ನಿವೃತ್ತ ಏರ್ ಮಾರ್ಷಲ್ ಕೆ ಸಿ ಕಾರ್ಯಪ್ಪ, ಬಿ ಎಂ ಕುಶಾಲಪ್ಪ, ಐ ಪಿ ಮೇದಪ್ಪ, ಬ್ಯಾಂಡ್ ಮಾಸ್ಟರ್ ಸಿದ್ದೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ನಿರಂಜನ, ಮುತ್ತಪ್ಪ, ಸೂರ್ತಲೆ ಸೋಮಣ್ಣ, ಸುಬ್ರಮಣಿ, ಅಂಬೆಕಲ್ಲು ನವೀನ್, ಸುದಯ್ ನಾಣಯ್ಯ, ಪೊಲೀಸ್ ಮುಖ್ಯ ಕಾಬೀಲರಾದ ಎಂ ಇ ಫಾರೂಕ್ ಮತ್ತು ಎಂ ಎಸ್ ಲೋಕೇಶ್ ಕಾರ್ಯಕ್ರಮದಲ್ಲಿ ಇದ್ದರು.