ಕೊಡಗು ಜಿಲ್ಲೆ ವಿರಾಜಪೇಟೆ ಗ್ರಾಮಾಂತರ ತಾಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ ಕಳೆದ ನವೆಂಬರ್ 30ರಂದು ಅಂಚೆ ಕಚೇರಿ ಬಾಗಿಲು ಮುರಿದು ಖಜಾನೆ ಬಾಕ್ಸ್, ಅಂಚೆ ಚೀಟಿಗಳು, ಪಾಸ್ ಪುಸ್ತಕ, ಸಿಸಿ ಕ್ಯಾಮೆರಾ, ಡಿವಿಆರ್ ಕಳುವು ಹಾಗೂ ಸದರಿ ಗ್ರಾಮದ ಮಾಚಯ್ಯ ಅವರ ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ಮಾರುತಿ ವ್ಯಾನ್ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಾಲಾಡಿ ಕಕ್ಕಬ್ಬೆ ಗ್ರಾಮದ ಕೆ ಸಿ ಅಶೋಕ (35), ಸೋಮವಾರ ಪೇಟೆ ಕಿಬ್ಬೆಟ್ಟ ಅಯ್ಯಪ್ಪ ಕಾಲೋನಿಯ ಕೆ ಪಿ ಕೀರ್ತಿ (25), ಸೋಮವಾರ ಪೇಟೆ ರೇಂಜರ್ ಬ್ಲಾಕ್ ನಿವಾಸಿ ರಿಯಾಜ್ (26) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ಸಿಸಿ ಟಿವಿ, ಡಿವಿಆರ್, 930 ರೂಪಾಯಿ ಮೌಲ್ಯದ ಅಂಚೆ ಚೀಟಿ, ಕೆಎ 04ಎನ್ 5010 ಮಾರುತಿ ಓಮ್ನಿ ವ್ಯಾನ್, ಕೆಎ 12ಕೆ 9059 ಹಾಗೂ ಕೆಎ 55ಜೆ 0861 ಎರಡು ದ್ವಿಚಕ್ರ ವಾಹನಗಳು, ಮರ ಕುಯ್ಯುವ ಯಂತ್ರ, ಒಂದು ಏರ್ ಗನ್, 250 ಕೆಜಿ ಕರಿ ಮೆಣಸು, 200 ಕೆಜಿ ಕಾಫಿ, 229 ಗ್ರಾಂ ಬೆಳ್ಳಿ, 30 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಸಬ್ ಇನ್ಸ್‌ಪೆಕ್ಟರ್ ವಾಣಿಶ್ರೀ, ಲತಾ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳು ಸೇರಿದ ತಂಡ ಫೆ.10ರಂದು ಕಾರ್ಯಾಚರಣೆ ಆರಂಭಿಸಿತ್ತು.
ಈ ಸುದ್ದಿ ಓದಿದ್ದೀರಾ? ಕೊಡಗು | ಕಾಡು ಹಂದಿ ಬೇಟೆಯಾಡಿದ ಇಬ್ಬರ ಬಂಧನ
ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
