ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಹುಲಿ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದು, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಡಿಸಿಎಫ್ ಜಗನ್ನಾಥ್ ಅವರ ನೇತೃತ್ವದಲ್ಲಿ ಎಪ್ಪತ್ತು ಸಿಬ್ಬಂದಿ ಒಳಗೊಂಡ ಏಳು ತಂಡಗಳು ಚಂಬೆಬೆಳ್ಳೂರು ಗ್ರಾಮದಿಂದ ಹುಲಿ ಪತ್ತೆ ಕಾರ್ಯಚರಣೆಗೆ ಮುಂದಾಗಿವೆ.
ಅರಣ್ಯ ಸಿಬ್ಬಂದಿಗಳು ಚಂಬೆಬೆಳ್ಳೂರು ಗ್ರಾಮದಲ್ಲಿ ಪಟಾಕಿ ಸಿಡಿಸಿ, ಸದ್ದು ಮಾಡುವುದರ ಮೂಲಕ ಹುಲಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಡಿಸಿಎಫ್ ಜಗನ್ನಾಥ್ ಮಾತನಾಡಿ, “ಈ ಭಾಗದಲ್ಲಿ ಹಲವಾರು ದಿನಗಳಿಂದ ಕಾಡುಪ್ರಾಣಿಗಳ ಉಪಟಳ ಹೆಚ್ಚಿದ್ದು, ಕಳೆದ ವಾರ ಮಗ್ಗುಲ ಗ್ರಾಮದಲ್ಲಿ ಹುಲಿ ಇರುವುದು ಖಾತ್ರಿಯಾಗಿದೆ. ಕಳೆದ 15 ದಿನಗಳಿಂದ ಈ ಭಾಗದಲ್ಲಿ ಹುಲಿ ಓಡಾಟ ಪತ್ತೆಯಾಗಿದ್ದು, ಏಳು ತಂಡಗಳು ಹುಲಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ” ಎಂದರು.
“ಸಾರ್ವಜನಿಕರು, ವಾಹನ ಸವಾರರು ಒಬ್ಬಂಟಿಗಳಾಗಿ ಓಡಾಡಬಾರದು. ಹುಲಿ ಇರುವುದು ಕಂಡುಬಂದಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆ ಗಮನಕ್ಕೆ ತರಬೇಕು” ಎಂದು ಮನವಿ ಮಾಡಿದರು.
ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಮಾತನಾಡಿ, “ಹುಲಿ ಮತ್ತು ಕಾಡಾನೆಗಳ ಹಾವಳಿ ಹೆಚ್ಚಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರ ನಿರ್ದೇಶನದ ಮೇರೆಗೆ ಹುಲಿ ಕಾರ್ಯಚರಣೆ ಮಾಡಲು ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗ್ರಾಮಸ್ಥರು ಸಹಕರಿಸಬೇಕು” ಎಂದು ಮನವಿ ಮಾಡಿದರು.
ಘಟನೆ ಹಿನ್ನೆಲೆ
ತಾಲೂಕಿನ ಚಂಬೆಬೆಳ್ಳೂರು ಮಗ್ಗುಲ, ಐಮಂಗಲ, ಪುದುಕೋಟೆ, ಕುಕ್ಲೂರು ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಹುಲಿ ಕಾಣಿಸಿಕೊಂಡಿದ್ದು ಜನರಿಗೆ ಆತಂಕ ತರಿಸಿದ್ದು, ಕೆಲವೊಮ್ಮೆ ವಾಹನಗಳಿಗೆ ಅಡ್ಡ ಬಂದ ಕಾರಣ ಗ್ರಾಮಸ್ಥರು ಭಯಗೊಂಡಿದ್ದರು.
ಚಂಬೆಬೆಳ್ಳೂರು ಮಗ್ಗುಲ, ಐಮಂಗಲ, ಪುದುಕೋಟೆ ಗ್ರಾಮದ ಕಾಫಿತೋಟಗಳು ಹಾಗೂ ಗದ್ದೆಗಳಲ್ಲಿ ಹುಲಿ ಹೆಜ್ಜೆ ಕಂಡುಬರುತ್ತಿದ್ದ ಪರಿಣಾಮ ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಹೋಗಲು ಹಿಂಜರೆಯುತಿದ್ದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಶಾಂತಿ ಕದಡಲು ಬಿಜೆಪಿ ಷಡ್ಯಂತ್ರ: ಕಾಂಗ್ರೆಸ್ ಅಧ್ಯಕ್ಷ ತೀತಿರಾ ಧರ್ಮಜಾ ಉತ್ತಪ್ಪ ಆರೋಪ
ಕೋಳೇರ ರನ್ನ,ಚಾರಿಮಂಡ ಪ್ರಕಾಶ್, ಕೊಳುವಂಡ ಹರೀಶ್, ಉಳಿಯಡ ಜೀವನ್, ಮುತ್ತಪ್ಪ, ನಾಮ ನಿರ್ದೇಶನ ಪುರಸಭಾ ಸದಸ್ಯ ಶಬರೀಶ್ ಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ವಲಯ ಅರಣ್ಯಾಧಿಕಾರಿ ಕೆ ವಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ಪ್ರಶಾಂತ್, ನಾಗರಾಜ್ ರಡರಟ್ಟಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.