ಕೊಡಗು ಜಿಲ್ಲೆ, ಮಡಿಕೇರಿ ನಗರದ ಪ್ರವಾಸೋದ್ಯಮ ಇಲಾಖೆಯ ಸಭಾಂಗಣದಲ್ಲಿ ಕೊಡಗು ಪತ್ರಕರ್ತರ ಸಂಘ (ರಿ) ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಘೋಷಿಸಲಾದ ನವನೀತಿಯಂತೆ, ಕೊಡಗಿನಲ್ಲಿಯೂ ವಿವಿಧ ಅಭಿವೖದ್ದಿ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಮಾಹಿತಿ ನೀಡಿದರು.
” 2023 ರಲ್ಲಿ ಕೊಡಗು ಜಿಲ್ಲೆಗೆ 43.69 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 2024 ರಲ್ಲಿ 45.72 ಲಕ್ಷ ಪ್ರವಾಸಿಗರು ಕೊಡಗಿಗೆ ಭೇಟಿ ನೀಡಿದ್ದಾರೆ. ಕೊಡಗು ಜಿಲ್ಲೆ ಪ್ರವಾಸಿಗರ ಮೆಚ್ಚಿನ ತಾಣವಾಗಿದ್ದು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ 2029 ರವರೆಗೆ ಜಾರಿಯಲ್ಲಿಟ್ಟಿರುವ ನವ ನೀತಿಯಂತೆ ಜಾರಿಗೊಳಿಸಲಾಗುತ್ತದೆ. ಈಗಾಗಲೇ ಕೊಡಗಿನ 23 ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ವಿವಿಧ ಪ್ರಗತಿ ಯೋಜನೆ ಜಾರಿಗೊಳಿಸಲಾಗಿದ್ದು, 9 ಗೈಡ್ ಗಳನ್ನು ‘ಪ್ರವಾಸಿ ಮಿತ್ರ’ ಯೋಜನೆಯಡಿಯಲ್ಲಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ನೇಮಕ ಮಾಡಲಾಗುತ್ತದೆ. ಇನ್ನೂ 10 ಪ್ರವಾಸಿ ಮಿತ್ರರು ಕೊಡಗಿನ ಪ್ರವಾಸಿ ತಾಣಗಳಿಗೆ ದೊರಕುವ ಸಾಧ್ಯತೆಯಿದೆ.
ಅಂತೆಯೇ, ‘ ಒಂದು ಜಿಲ್ಲೆ – ಒಂದು ತಾಣ ‘ ಯೋಜನೆಯಡಿ ಕೊಡಗಿನಲ್ಲಿ ಮಾಂದಲಪಟ್ಟಿ ತಾಣವನ್ನು ಗುರುತಿಸಲಾಗಿದ್ದು, ಇಲಾಖೆ ವತಿಯಿಂದ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಕೊಡಗು ಜಿಲ್ಲೆಯನ್ನು ಇದೇ ಮೊದಲ ಬಾರಿಗೆ ‘ ಪ್ರವಾಸಿ ಸರ್ಕ್ಯೂಟ್ ‘ ಯೋಜನೆಯಡಿ ಸೇರ್ಪಡೆ ಮಾಡಲಾಗುತ್ತದೆ “ಎಂದು ವಿವರಣೆ ಕೊಟ್ಟರು.
ಮಡಿಕೇರಿಯ ರಾಜಾಸೀಟ್ ಬಳಿಯಲ್ಲಿರುವ ಕೂಗ್೯ ವಿಲೇಜ್ ನಲ್ಲಿ ಕೊಡಗಿನ ಕಿತ್ತಳೆಯನ್ನು ಪ್ರಚುರ ಪಡಿಸಲು ಗೋಣಿಕೊಪ್ಪಲುವಿನ ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಹಯೋಗ ಪಡೆಯಲಾಗಿದೆ. ಕೂರ್ಗ್ ವಿಲೇಜ್ ಮತ್ತಷ್ಟು ಪ್ರಚಾರದೊಂದಿಗೆ ಅಭಿವೖದ್ದಿ ಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಅವರು ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಅಭಿವೖದ್ದಿ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದರಿಂದ, ಕೊಡಗು ಈಗ ಡಿಜಿಟಲ್ ಮೀಡಿಯಾ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಂದರ್ಶಕರನ್ನು ತಲುಪಿ ಬಹುತೇಕರು ಕೊಡಗಿನತ್ತ ಬರುವಂತಾಗಿದೆ.
ಕೊಡಗು ಜಿಲ್ಲೆಯಲ್ಲಿ ಅಂದಾಜು 3,500 ಹೋಂ ಸ್ಟೇ ಇರಬಹುದೆಂದು ಅಂದಾಜಿಸಲಾಗಿದ್ದು.ಈ ಪೈಕಿ ಪ್ರವಾಸೋದ್ಯಮ ಇಲಾಖೆಯಲ್ಲಿ ಈವರೆಗೂ 2269 ಹೋಂ ಸ್ಟೇಗಳು ನೋಂದಣಿ ಮಾಡಿಕೊಂಡಿವೆ. ತಿಂಗಳಿಗೆ 30 ರಿಂದ 50 ಹೊಸ ಹೋಂ ಸ್ಟೇ ಮಾಲೀಕರು ನೋಂದಣಿಗಾಗಿ ಅಜಿ೯ ಸಲ್ಲಿಸುತ್ತಿದ್ದಾರೆ. ಶಾಸಕ ಎ. ಎಸ್. ಪೊನ್ನಣ್ಣರ ಪ್ರಯತ್ನದಿಂದಾಗಿ ವಿರಾಜಪೇಟೆಯ ಮಲತಿರಿಕೆ ಬೆಟ್ಟ , ಅಬ್ಬಿ ಫಾಲ್ಸ್, ಬರಪೊಳೆ, ಇರ್ಫು ಜಲಪಾತ ಅಭಿವೖದ್ದಿಗಾಗಿ ಸರ್ಕಾರದಿಂದ ₹1 ಕೋಟಿ ರುಪಾಯಿ ಅನುದಾನ ದೊರಕಿದೆ ಎಂದು ಮಾಹಿತಿ ನೀಡಿದರು.
ಕೊಡಗಿನಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮದ ಪ್ರಚಾರದ ಉದ್ದೇಶದಿಂದ ಹೋಂ ಸ್ಟೇಗಳು, ಲಾಡ್ಜ್, ರೆಸಾರ್ಟ್ ಗಳು ತಮ್ಮ ಬೋರ್ಡ್ ಜತೆಯಲ್ಲಿಯೇ ಕೊಡಗಿನಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿದೆ , ಕೊಡಗನ್ನು ತ್ಯಾಜ್ಯ ಮುಕ್ತವಾಗಿರಿಸಿ ಎಂಬಂಥ ಕಳಕಳಿಯ ಸಂದೇಶಗಳನ್ನು ಅಳವಡಿಸಿದ್ದೇ ಆದಲ್ಲಿ ಅದು ಪ್ರವಾಸಿಗರ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಬಲ್ಲದು ಎಂಬ ಸಲಹೆಯನ್ನೂ ನೀಡಿದರು.
ಶಕ್ತಿ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ ‘ ಮಡಿಕೇರಿ ನಗರದಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ಪ್ರವಾಸಿ ತಾಣಗಳಿಗೆ ಕರೆದೊಯ್ಯಲು ಸಿಟಿ ರೌಂಡ್ಸ್ ಬಸ್ ಸಂಚಾರ ಅಗತ್ಯವಿದೆ. ನಿಸರ್ಗಧಾಮ ಸಂಪೂರ್ಣ ಕಾಂಕ್ರೀಟ್ ಕಾಡಾಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಗಮನ ಹರಿಸಬೇಕು. ಕೊಡಗಿನಲ್ಲಿ ಪ್ರವಾಸಿ ಉತ್ಸವ ಆಯೋಜಿಸುವ ಮೂಲಕ ಪ್ರವಾಸೋದ್ಯಮಕ್ಕೆ ಕಾಯಕಲ್ಪ ನೀಡಬೇಕಾಗಿದೆ. ರಾಜಾಸೀಟ್ ನಲ್ಲಿ ಪುಟಾಣಿ ರೈಲಿನ ಮರುಸಂಚಾರಕ್ಕೆ ಕೂಡ ಪ್ರವಾಸೋದ್ಯಮ ಇಲಾಖೆ ಗಮನ ಹರಿಸುವಂತೆ ‘ ಸಲಹೆ ನೀಡಿದರು.
ಜಿಲ್ಲೆಯ ಯಾವುದೇ ಪ್ರವಾಸಿ ತಾಣಗಳಲ್ಲಿ ಮೂಲ ಸ್ವರೂಪ ಕಳೆಗುಂದುವಂತೆ ಮಾಡದೇ ಅಭಿವೖದ್ದಿ ಯೋಜನೆ ಕೈಗೊಳ್ಳುವಂತೆ ಸಂಘದ ನಿರ್ದೇಶಕ ರಂಜಿತ್ ಕವಲಪಾರ ಸಲಹೆ ನೀಡಿದರು.
ಸಂಘದ ನಿರ್ದೇಶಕ ಎಸ್.ಜಿ. ಉಮೇಶ್ ಮಾತನಾಡಿ ರಾಜಾಸೀಟ್ ಮಾರ್ಗದಲ್ಲಿ ವಾಹನ ಸಂಚಾರ ನಿಯಂತ್ರಣ ಮಾಡದೇ ಹೋದಲ್ಲಿ ಸ್ಥಳೀಯರು ಪ್ರವಾಸಿಗರ ಬಗ್ಗೆ ಜಿಗುಪ್ಸೆ ತಾಳುವ ಸಾಧ್ಯತೆ ಹೆಚ್ಚಾಗಿದೆ. ನಗರದಲ್ಲಿ ಬಹುಮಹಡಿ ಸಂಕೀಣ೯ ನಿಮಿ೯ಸಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸವಂತೆ ಸಲಹೆ ನೀಡಿದರು.
ಸಂಘದ ನಿದೇ೯ಶಕ ಬಿ.ಜಿ. ಅನಂತಶಯನ ಮಾತನಾಡಿ, ಕಳಪೆ ಗುಣಮಟ್ಟದ ಸಂಬಾರ ಪದಾರ್ಥ ಮತ್ತು ಚಾಕೋಲೇಟ್, ವೈನ್ ಗಳ ಮಾರಾಟಕ್ಕೆ ಕಡಿವಾಣ ಹಾಕಲೇಬೇಕು. ಕೊಡಗಿನ ಹೆಸರಿನಲ್ಲಿ ಕಳಪೆ ಗುಣಮಟ್ಟದ ಪದಾರ್ಥಗಳ ಮಾರಾಟದಿಂದಾಗಿ ಕೊಡಗಿನ ಹೆಸರಿಗೆ ಅಪಖ್ಯಾತಿ ಬರುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಘಧ ನಿರ್ದೇಶಕ ಜಿ.ವಿ. ರವಿಕುಮಾರ್ ಮಾತನಾಡಿ ಊಟಿ, ಕೊಡೈಕೆನಾಲ್ ನಂತೆ ಕೊಡಗಿಗೆ ವಾಹನಗಳ ಸಂಖ್ಯೆಯನ್ನು ನಿಗಧಿಪಡಿಸುವಂತೆ ಸಲಹೆ ಕೊಟ್ಟರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದಡದಹಳ್ಳಿ ಹಾಡಿಗೆ ರಸ್ತೆ ಕಲ್ಪಿಸಿ;ಸಸಿ ನೆಟ್ಟು ಪ್ರತಿಭಟನೆ
ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ವಿಗ್ನೇಷ್ ಭೂತನಕಾಡು,ಗುಡ್ಡೆಮನೆ ವಿಶುಕುಮಾರ್, ನವೀನ್, ಅರುಣ್, ಕೊಡಗು ಮದ ಅಧ್ಯಕ್ಷ ಹೆಚ್.ಟಿ. ಅನಿಲ್, ಪಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಜತಿನ್ ಬೋಪಣ್ಣ ಸೇರಿದಂತೆ ಹಲವರು ಇದ್ದರು.