ಆನೆ-ಮಾನವ ಸಂಘರ್ಷ ಮಂದುವರಿದಿದ್ದು, ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಘಟನೆ ನಡೆದಿದೆ.
ಆಯಿಶಾ(63) ಮೃತ ಮೃತ ದುರ್ಧೈವಿ. ಮನೆ ಸಮೀಪ ವಾಕಿಂಗ್ ಮಾಡುತ್ತಿದ್ದ ಸಂದರ್ಭ ಆನೆ ದಾಳಿ ನಡೆಸಿದೆ. ಆಯಿಶಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
“ಕಳೆದ ಒಂದು ವಾರದ ಹಿಂದೆಯೂ ಆನೆ ದಾಳಿಗೆ ಟ್ರ್ಯಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಇದೀಗ ಮತ್ತೆ ಆನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು” ಎಂದು ಸ್ಥಳೀಯುರು ಆಗ್ರಹಿಸಿದ್ದಾರೆ.
“ಕೆಲವು ಕಾಡಾನೆಗಳ ತಂಡ ಕಾಫಿ ತೋಟಗಳನ್ನೇ ಬಿಡಾರ ಮಾಡಿಕೊಂಡಿವೆ. ಕಾಫಿ ತೋಟಗಳಲ್ಲಿ ಬೇಕಾದಷ್ಟು ಆಹಾರ ಹಾಗೂ ನೀರು ಇವುಗಳಿಗೆ ಸಿಗುತ್ತಿರುವುದರಿಂದ ಇವು ಕಾಡಿಗೆ ಮರಳುತ್ತಿಲ್ಲ. ಎಷ್ಟೇ ಪಟಾಕಿ ಸಿಡಿಸಿ ಗದ್ದಲ ಎಬ್ಬಿಸಿದರೂ ಹೋಗುತ್ತಿಲ್ಲ. ಇವುಗಳಿಂದಾಗಿ ಕಾಫಿ ತೋಟಗಳಿಗೆ ಹೋಗಲು ಹೆದರಿಕೆಯಾಗುತ್ತಿದೆ. ಕೂಲಿ ಮಾಡಲು ಜನ ಸಿಗುತ್ತಿಲ್ಲ” ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.
ಹಾಸನ ಜಿಲ್ಲೆಯಲ್ಲಿಯೂ ಆನೆ ದಾಳಿ ಮುಂದುವರಿದಿದ್ದು, ಕಾಡಾನೆಗಳ ಹಿಂಡಿನ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಸಕಲೇಶಪುರ ತಾಲೂಕಿನ ದೋನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಸುಸದ್ದಿ ಓದಿದ್ದೀರಾ? ರಾಮನಗರ | ಮಕ್ಕಳಿಗೆ ಗೂಡ್ಸ್ ವಾಹನ ಢಿಕ್ಕಿ ಪ್ರಕರಣ; ರಸ್ತೆ ಮಧ್ಯೆ ಬಾಲಕಿ ಶವವಿಟ್ಟು ಪ್ರತಿಭಟನೆ
ದಾಳಿ ಮಾಡಿರುವ ಆನೆಹಿಂಡು ಕಾಫಿ, ಶುಂಠಿ, ಅಡಿಕೆ ಗಿಡಗಳನ್ನು ನಾಶ ಮಾಡಿದೆ. ನೀರಿನ ಪೈಪ್‌ಗಳನ್ನು ಕಿತ್ತು ಪುಂಡಾನೆಗಳು ಅಟ್ಟಹಾಸ ಮೆರೆದಿವೆ. ಅಪ್ಸರ್ ಎಂಬವರ ಕಾಫಿ ತೋಟದಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕಾಫಿ ತೋಟದಲ್ಲೇ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಗಿಡಗಳನ್ನು ಕಾಡಾನೆಗಳು ನೆಲಸಮ ಮಾಡಿವೆ. ಈ ಹಿನ್ನೆಲೆಯಲ್ಲಿ ತೋಟದ ಮಾಲೀಕ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.